Advertisement

ರಾಜ್ಯಕ್ಕೆ  2070 ಕೋಟಿ ರೂ. ಬಿಡುಗಡೆ

03:45 AM Feb 05, 2017 | Team Udayavani |

ಬೆಂಗಳೂರು: ಅಮೃತ್‌ ಸಿಟಿ ಯೋಜನೆಯಡಿ ರಾಜ್ಯದ 27 ನಗರಗಳ ಅಭಿವೃದ್ಧಿಗೆ 2017ರಿಂದ 2020ನೇ ಸಾಲಿಗೆ
(ಮೂರು ವರ್ಷದ ಅವಧಿ) ಕೇಂದ್ರ ಸರ್ಕಾರ 2070 ಕೋಟಿ ರೂ. ಅನುದಾನ ಮಂಜೂರು ಮಾಡಿದೆ.

Advertisement

2015-16ನೇ ಸಾಲಿನಿಂದ ಜಾರಿಗೆ ಬಂದಿರುವ ಐದು ವರ್ಷ ಅವಧಿಯ ಈ ಯೋಜನೆಗೆ ರಾಜ್ಯದ 27 ನಗರಗಳಿಗೆ
ಕೇಂದ್ರ ಸರ್ಕಾರ 4,791 ಕೋಟಿ ರೂ. ಅನುದಾನ ಘೋಷಿಸಿತ್ತು. ಅದರಂತೆ 2015-16ನೇ ಸಾಲಿನಲ್ಲಿ 1,259
ಕೋಟಿ ರೂ. ಮತ್ತು 2016-17ನೇ ಸಾಲಿನಲ್ಲಿ 1,642 ಕೋಟಿ ರೂ. ಮಂಜೂರಾಗಿದೆ. ಉಳಿದ 2070 ಕೋಟಿ ರೂ.
ಅನ್ನು 2017ರಿಂದ 2020ನೇ ಸಾಲಿಗೆ ಬಿಡುಗಡೆ ಮಾಡಲು ಶುಕ್ರವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು
ಕೇಂದ್ರ ನಗರಾಭಿವೃದ್ಧಿ ಮತ್ತು ಮೂಲ ಸೌಕರ್ಯ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2017ರಿಂದ 20ರ ಅವಧಿಗೆ ಮಂಜೂರಾಗಿರುವ
2070 ಕೋಟಿ ರೂ. ಪೈಕಿ ಕುಡಿಯುವ ನೀರು ಪೂರೈಕೆಗೆ 822 ಕೋಟಿ ರೂ., ಒಳಚರಂಡಿ ಯೋಜನೆಗಳಿಗೆ 1061 ಕೋಟಿ ರೂ, ಚರಂಡಿ ನಿರ್ಮಾಣಕ್ಕೆ 119 ಕೋಟಿ ರೂ., ನಗರ ಸಾರಿಗೆ ವ್ಯವಸ್ಥೆಗೆ 21 ಕೋಟಿ ರೂ. ಹಾಗೂ ಪಾರ್ಕ್‌ ಮತ್ತು ಹಸಿರು ಪ್ರದೇಶ ಸಂರಕ್ಷಣೆಗೆ 47 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದರು.

ದಶಾಶ್ವಮೇಧ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌
ಎಂಬ ಪ್ರಧಾನಿಯವರ ಘೋಷಣೆಯಂತೆ ಈ ಬಾರಿ ಕೃಷಿ, ಗ್ರಾಮೀಣಾಭಿವೃದ್ಧಿ, ಯುವ ಜನತೆ, ಬಡವರಿಗೆ ಸೂರು,
ಮೂಲ ಸೌಕರ್ಯ, ಡಿಜಿಟಲ್‌ ಆರ್ಥಿಕತೆ ಎಂಬಿತ್ಯಾದಿ ಹತ್ತು ಅಂಶಗಳೊಂದಿಗೆ ದಶಾಶ್ವಮೇಧ ಕೈಗೊಳ್ಳುವತ್ತ ವಿತ್ತ ಸಚಿವರು ಪ್ರಸ್ತಾಪಿಸಿದ್ದಾರೆ. ವಿಶ್ವವೇ ಆರ್ಥಿಕ ಹಿನ್ನಡೆಯಲ್ಲಿದ್ದರೂ ಭಾರತ ಮಾತ್ರ ಅದಕ್ಕೆ ಹೊರತಾಗಿ ಉಜ್ವಲ ಭವಿಷ್ಯದೊಂದಿಗೆ ಮುನ್ನಡೆಯಲು ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.

ಜಾಗತಿಕ ಮಟ್ಟದಲ್ಲಿ ವಿದೇಶಿ ಹೂಡಿಕೆಯಲ್ಲಿ ಶೇ. 5ರಷ್ಟು ಮಾತ್ರ ಪ್ರಗತಿಯಾಗುತ್ತಿದ್ದರೆ, 2016-17ನೇ ಸಾಲಿನಲ್ಲಿ 1.45 ಲಕ್ಷ ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆಯಾಗಿ ಶೇ. 36ರಷ್ಟು ಪ್ರಗತಿ ಸಾಧಿಸಲಾಗಿದೆ. ನೋಟು ಅಮಾನ್ಯದ ನಂತರ ಆರ್ಥಿಕ ಪ್ರಗತಿಗೆ ಕೊಂಚ ಹಿನ್ನಡೆಯಾಗಿದ್ದರೂ ನಂತರದಲ್ಲಿ ಅದು ಬೆಳವಣಿಗೆ ಕಂಡು ಬರಲಿದ್ದು, ಉತ್ತಮ ಸಾಧನೆ ಯಾಗಲಿದೆ. ಈ ಕಾರಣ ಕ್ಕಾಗಿಯೇ ಐಎಂಎಫ್ ಮತ್ತು ವಿಶ್ವಬ್ಯಾಂಕ್‌ ದೇಶದ ಜಿಡಿಪಿ ಯನ್ನು ಶೇ. 7.6ರಿಂದ ಶೇ. 7.8ರವರೆಗೆ ನಿಗದಿಪಡಿಸಿದೆ ಎಂದರು.

Advertisement

ಕಾಂಗ್ರೆಸ್‌ ರಾಜಕೀಯವಾಗಿ ಬಡವಾಗಿದೆ
ನೋಟು ಅಮಾನ್ಯದ ನಂತರ ದೇಶದಲ್ಲಿ ಕಾಂಗ್ರೆಸ್‌ ರಾಜಕೀಯವಾಗಿ ಬಡವಾಗಿದೆ. ಹೀಗಾಗಿ ಕೇಂದ್ರದ ನೋಟು
ಅಮಾನ್ಯ ತೀರ್ಮಾನವನ್ನು ಇಡೀ ದೇಶದ ಜನ ಬೆಂಬಲಿಸಿದರೂ ಕಾಂಗ್ರೆಸ್‌ ಇದರಿಂದ ಬಡವರಿಗೇನು ಲಾಭ ಎಂದು ಪ್ರಶ್ನಿಸುತ್ತಾ ಕಾಲ ಕಳೆಯುತ್ತಿದೆ. ಕಪ್ಪು ಹಣ ಇಲ್ಲದಂತೆ ಮಾಡಲು ನೋಟು ಅಮಾನ್ಯ ಮಾಡಲಾಯಿತು. ಆದರೆ, 15 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣ ಬ್ಯಾಂಕ್‌ಗಳಿಗೆ ಬಂದಿದೆ. ಕಾಳಧನಿಕರ ಮಂಚದ ಕೆಳಗೆ, ಕಬ್ಬಿಣದ ಕಪಾಟುಗಳು, ಶೌಚಾಲಯಗಳಲ್ಲಿ ಅಡಗಿಕೊಂಡಿದ್ದ ಆ ಹಣ ಬ್ಯಾಂಕ್‌ಗಳಿಗೆ ಬಂದಿದೆ. ಅದರ ಜತೆಗೆ ಆ ಹಣದ ಮಾಲೀಕರ ವಿಳಾಸ
ಮತ್ತು ಹಣ ಎಲ್ಲಿಂದ ಬಂತು ಎಂಬ ಮಾಹಿತಿಯೂ ಸಿಕ್ಕಿದೆ. ಇದು ದೊಡ್ಡ ಸಾಧನೆಯಲ್ಲವೇ?

ಬ್ಯಾಂಕ್‌ಗಳಿಗೆ ಬಂದ ಹಣ ಚಲಾವಣೆಯಾಗಿ ಅದು ತೆರಿಗೆ ವ್ಯಾಪ್ತಿಗೆ ಬಂದರೆ ಜನರಿಗೆ ಅನುಕೂಲವಾಗುತ್ತದೆ ಎಂಬುದು ಕಾಂಗ್ರೆಸ್‌ನವರಿಗೆ ಗೊತ್ತಿಲ್ಲವೇ ಎಂದು ಸಚಿವ ವೆಂಕಯ್ಯನಾಯ್ಡು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next