ಕೋಲ್ಕತ್ತಾ: ಟಿಎಂಸಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತರೊಬ್ಬರ ಮನೆಯಿಂದ ಜಾರಿ ನಿರ್ದೇಶನಾಲಯ (ಇಡಿ) 20 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡ ನಂತರ, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು “ಯೇ ತೋ ಬಸ್ ಟ್ರೈಲರ್ ಹೈ, ಪಿಕ್ಚರ್ ಅಭಿ ಬಾಕಿ ಹೈ..” ಎಂದು ಟಿಎಂಸಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶುಕ್ರವಾರ ರಾತ್ರಿ ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಸಚಿವ ಪಾರ್ಥ ಚಟರ್ಜಿ ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿ ಅವರ ನಿವಾಸದ ಮೇಲೆ ತನಿಖಾ ಸಂಸ್ಥೆ ದಾಳಿ ನಡೆಸಿದೆ.
ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ ಮತ್ತು ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿ ನೇಮಕಾತಿ ಹಗರಣಗಳಿಗೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ಇಡಿ ಶೋಧ ನಡೆಸಿದ ನಂತರ ಅರ್ಪಿತಾ ಮುಖರ್ಜಿ ಅವರ ಮನೆಯ ಮೇಲೆ ದಾಳಿ ನಡೆದಿದೆ.
ಈ ಸಂದರ್ಭದಲ್ಲಿ, ಇಡಿ ಅರ್ಪಿತಾ ಮುಖರ್ಜಿ ಅವರ ನಿವಾಸದಿಂದ ಅಂದಾಜು 20 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ. ಈ ಮೊತ್ತವು ಎಸ್ ಎಸ್ ಸಿ ಹಗರಣದ ಆದಾಯ ಎಂದು ಶಂಕಿಸಲಾಗಿದೆ. ಅರ್ಪಿತಾ ಮುಖರ್ಜಿ ಅವರ ಮನೆಯಿಂದ ವಶಪಡಿಸಿಕೊಂಡಿರುವ ನೋಟುಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಗಬ್ಬರ್ ಅಬ್ಬರ- ಸಿರಾಜ್ ಕೊನೆಯ ಓವರ್ ಥ್ರಿಲ್ಲರ್: ಗೆಲುವಿನ ಗಡಿಯಲ್ಲಿ ಸೋತ ವೆಸ್ಟ್ ಇಂಡೀಸ್
“ಇಡಿ ತಂಡವು ನಗದು ಎಣಿಕೆ ಯಂತ್ರಗಳ ಮೂಲಕ ಹಣ ಎಣಿಸಲು ಬ್ಯಾಂಕ್ ಅಧಿಕಾರಿಗಳ ನೆರವು ಪಡೆಯುತ್ತಿದೆ. ಅರ್ಪಿತಾ ಮುಖರ್ಜಿ ಅವರ ಆವರಣದಿಂದ ಒಟ್ಟು 20 ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ, ಇದರ ಉದ್ದೇಶ ಮತ್ತು ಬಳಕೆಯನ್ನು ಖಚಿತಪಡಿಸಲಾಗುತ್ತಿದೆ” ಎಂದು ಇಡಿ ತಿಳಿಸಿದೆ.
ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಗಳ ವಿವಿಧ ಸ್ಥಳಗಳಿಂದ ದೋಷಾರೋಪಣೆಯ ದಾಖಲೆಗಳು, ದಾಖಲೆಗಳು, ಸಂಶಯಾಸ್ಪದ ಕಂಪನಿಗಳ ವಿವರಗಳು, ಎಲೆಕ್ಟ್ರಾನಿಕ್ ಸಾಧನಗಳು, ವಿದೇಶಿ ಕರೆನ್ಸಿ ಮತ್ತು ಚಿನ್ನವನ್ನು ಇಡಿ ವಶಪಡಿಸಿಕೊಂಡಿದೆ.