Advertisement

ಮಹಿಳಾ ಕಾಲೇಜು ಕಟ್ಟಡಕ್ಕೆ 2 ಕೋಟಿ ರೂ. ನೀಡಲು ಸಿಎಂ ಒಪ್ಪಿಗೆ

04:09 PM Feb 17, 2017 | Team Udayavani |

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ಅನುದಾನ ವಿಳಂಬವಾದ ಕಾರಣ ಅರ್ಧಕ್ಕೆ ನಿಂತಿರುವ ನಗರದ ಮಹಿಳಾ ಕಾಲೇಜು ಕಟ್ಟಡ ಕಾಮಗಾರಿಗೆ ಈ ಬಾರಿಯಬಜೆಟ್‌ನಲ್ಲಿ 2 ಕೋಟಿ ರೂ.ಅನುದಾನ ಬಿಡುಗಡೆ ಮಾಡಲು ಸಿಎಂ ಭರವಸೆ ನೀಡಿದ್ದಾರೆ. ಹಾಗಾಗಿ, ವರ್ಷದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡು ಮುಂದಿನ ಶೈಕ್ಷಣಿಕ ವರ್ಷದಿಂದ ಕಾಲೇಜು ಕಾರ್ಯಾರಂಭ ಮಾಡಲಿದೆ ಎಂದು ಶಾಸಕ ಡಾ.ಕೆ.ಸುಧಾಕರ್‌ ತಿಳಿಸಿದರು.

Advertisement

ಫೆ.18 ಮತ್ತು 19 ರಂದು ಎರಡು ದಿನಗಳ ಕಾಲ ನಗರದಲ್ಲಿ ತಮ್ಮ ನೇತೃತ್ವದ ಶ್ರೀ ಸಾಯಿಕೃಷ್ಣ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಆಯೋಜಿಸಿರುವ ಮ್ಯಾರಥಾನ್‌ ಹಾಗೂ ಅಂಬೇಡ್ಕರ್‌ ಜಯಂತ್ಯುತ್ಸವದ ಕುರಿತ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಲಿಂಗ ತಾರತಮ್ಯ ಹೋಗಲಾಡಿಸಲು ಪಣತೊಡಿ: ಹಣದ ಕೊರತೆಯ ನೆಪವೊಡ್ಡಿ ಕಾಮಗಾರಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಉಹಾಪೋಹಗಳಿಗೆ ಯಾರೂ ಕಿವಿಗೊಡಬಾರದು. ಸಿಎಂಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿದೆ. ಸ್ವಶಕ್ತಿ ಭಾರತ ನಿರ್ಮಾಣಕ್ಕಾಗಿ ಸರ್ಕಾರಗಳು ಮಹಿಳಾ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರೆ ಇಷ್ಟೊತ್ತಿಗೆ ದೇಶದ ಜಿಡಿಪಿ ದರ ದುಪ್ಪಟ್ಟಾಗುತ್ತಿತ್ತು. ಈ ನಿಟ್ಟಿನಲ್ಲಿ ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಪಣತೊಟ್ಟು ಕೆಲಸ ಮಾಡಬೇಕಾಗಿದೆ ಎಂದರು.

ಸಂವಿಧಾನದ ಅಶಯಗಳು ಈಡೇರಿಲ್ಲ: ದೇಶದಲ್ಲಿ ಸಂವಿಧಾನ ರಚನೆಯಾಗಿ 7 ದಶಕಗಳು ಕಳೆಯುತ್ತಿದ್ದರೂ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳು ಈಡೇರದಿರುವುದು ವಿಪರ್ಯಾಸ. ಮಹಿಳೆಯರು ಮತ್ತು ದಲಿತರಿಗೆ ಸಂವಿಧಾನದತ್ತ ಹಕ್ಕು ಮತ್ತು ಅವಕಾಶಗಳನ್ನು ನೀಡಲು ಎಲ್ಲರೂ ಸ್ವಯಂ ಪ್ರೇರಿತರಾಗಿ ಮುಂದಾಗಬೇಕು. ಮಹಿಳೆಯರಿಗೆ ಶಿಕ್ಷಣ ನೀಡಿ ಸಮಾನತೆಯಿಂದ ಕಂಡಿದ್ದರೆ ದೇಶ ಮತ್ತಷ್ಟು ಅವಕಾಶಗಳನ್ನು ಕಾಣಲು ಸಾಧ್ಯವಾಗುತ್ತಿತ್ತು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಇದು ದೇಶದ ಅಭಿವೃದ್ಧಿ ಮತ್ತು ಸಮಾಜದ ಬದಲಾವಣೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಜಾತಿ ಹಾಗೂ ಭ್ರಷ್ಟಾಚಾರ ದೇಶದ ಸರ್ವಾಂಗೀಣ ಪ್ರಗತಿಗೆ ಅಡ್ಡಿಯಾಗಿದೆ ಎಂದರು.

ಮ್ಯಾರಾಥನ್‌ನಲ್ಲಿ ಭಾಗವಹಿಸಿ: ಇಂದಿನ ವಿದ್ಯಾರ್ಥಿ ಯುವ ಜನತೆ ಅಂಬೇಡ್ಕರ್‌ ಆಯಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಮ ಸಮಾಜದ ನಿರ್ಮಾಣಕ್ಕೆ ಪಣ ತೊಡಬೇಕೆಂಬ ಆಶಯದೊಂದಿಗೆ ಶ್ರೀ ಸಾಯಿ ಕೃಷ್ಣ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಫೆ.18 ರಂದು “ಸಮಾನತೆಯ ಕಡೆಗೆ ನಮ್ಮ ನಡೆ’ ಎಂಬ ಘೋಷಣೆಯಡಿ ಮ್ಯಾರಾಥಾನ್‌ ಹಾಗೂ ಫೆ.19 ರಂದು ನಂದಿ ರಂಗ ಮಂದಿರದಲ್ಲಿ ಅಂಬೇಡ್ಕರ್‌ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ. ಎರಡೂ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು.

Advertisement

ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪೊ›.ನಾರಾಯಣಸ್ವಾಮಿ, ಪ್ರಾಧ್ಯಾಪಕ ಪೊ›.ನಾಗರಾಜಯ್ಯ, ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಪೊ›.ಕೋಡಿರಂಗಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ, ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ ಮತ್ತಿತರರು ಇದ್ದರು.

ದೇಶಕ್ಕೆ ಸ್ವಾತಂತ್ರ ಬಂದು 70 ವರ್ಷಗಳು ಕಳೆದರೂ ದೇಶದಲ್ಲಿ ಜಾತೀಯತೆ, ಶೋಷಣೆ, ಲಿಂಗ ಅಸಮಾನತೆ, ತಾರತಮ್ಯ ಇನ್ನೂ ಹೆಚ್ಚಾಗಿದೆ. ಸಮಾನತೆಯ ಸಮಾಜಕ್ಕಾಗಿ ಅಂಬೇಡ್ಕರ್‌ ಹಗಲಿರುಳು ಶ್ರಮಿಸಿದರು. ಸಮಾಜದಲ್ಲಿ ಜಾತೀಯತೆಯ ಅವಮಾನಗಳಿಂದ ನೊಂದು ಬೆಂದ ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡಿದರು. ಮಹಿಳೆಯರು ಮತ್ತು ದಲಿತರು ಶಿಕ್ಷಣ ಪಡೆಯುವ ಮೂಲಕ ಮುಖ್ಯವಾಹಿನಿಗೆ ಬರಬೇಕು. ಪ್ರಸ್ತುತ ಸಮಾಜದ ಒಳಿತಿಗಾಗಿ ಪ್ರತಿಯೊಬ್ಬರು ಅಂಬೇಡ್ಕರ್‌ ವಿಚಾರಧಾರೆಗಳನ್ನು ಅನುಸರಿಸಬೇಕು.
-ಡಾ.ಕೆ.ಸುಧಾಕರ್‌, ಶಾಸಕ 

Advertisement

Udayavani is now on Telegram. Click here to join our channel and stay updated with the latest news.

Next