Advertisement

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

01:07 AM Sep 07, 2024 | Team Udayavani |

ಉಳ್ಳಾಲ: ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ, ಕೋಟೆಕಾರು ಪಟ್ಟಣ ಪಂಚಾಯತ್‌ ಸಹಿತ ತಾಲೂಕು ವ್ಯಾಪ್ತಿಗೆ ಬರುವ 24 ಹಳ್ಳಿಗಳಿಗೆ ಕೈಗಾರಿಕೆ ವಲಯ ಶಿಕ್ಷಣ ಸಂಸ್ಥೆಗಳಿಗೆ 198 ಕೋ. ರೂ. ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯ ಮೊದಲನೇ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಉಳ್ಳಾಲದ ಚೆಂಬುಗುಡ್ಡೆ ಬಳಿ ನಿರ್ಮಿಸಲಾಗಿರುವ ಮುಖ್ಯ ಟ್ಯಾಂಕ್‌ಗೆ ಪ್ರಾಯೋಗಿಕ ನೀರು ಹರಿಸುವ ಕಾರ್ಯಕ್ಕೆ ಶನಿವಾರ ಚಾಲನೆ ದೊರೆಯಲಿದೆ.

Advertisement

ಮಂಗಳೂರು ಕ್ಷೇತ್ರದ ಜನರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ ಭರವಸೆ ನೀಡಿದ್ದ ಯು.ಟಿ.ಖಾದರ್‌ ಅವರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 198 ಕೋ. ರೂ. ಅನುದಾನದ ಈ ಯೋಜನೆಗೆ 2019ರಲ್ಲಿ ಚಾಲನೆ ನೀಡಲಾಗಿತ್ತು.

ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಅಲಾಡಿ ನೇತ್ರಾವತಿ ನದಿಗೆ ಜಾಕ್‌ವೆಲ್‌ ನಿರ್ಮಿಸಿ ಅಲ್ಲಿಂದ ನೀರನ್ನು 15.5 ಕಿ. ಮೀ. ದೂರದ ಮುಡಿಪುವಿನ ಟ್ರೀಟ್‌ಮೆಂಟ್‌ ಪ್ಲ್ರಾಂಟ್‌ಗೆ ಕೊಳವೆ ಮೂಲಕ ಹರಿಸಿ, ಟ್ರೀಟ್‌ಮೆಂಟ್‌ ಪ್ಲ್ಯಾಂಟ್‌ನಿಂದ 11.2 ಕಿ. ಮೀ. ದೂರದ ಉಳ್ಳಾಲ ನಗರಸಭೆಯ ಚೆಂಬುಗುಡ್ಡೆಯಲ್ಲಿರುವ ಮುಖ್ಯ ನೆಲಮಟ್ಟದ ಜಲಾಗಾರಕ್ಕೆ ಕೊಳವೆ ಮೂಲಕ ಹರಿಸಿ ಉಳ್ಳಾಲ ನಗರ ಪ್ರದೇಶಗಳಿಗೆ ನೀರು ಸರಬರಾಜು ಆಗಲಿದೆ. ಶನಿವಾರ ಮುಡಿಪುವಿನ ಟ್ರೀಟ್‌ಮೆಂಟ್‌ ಪ್ಲ್ಯಾಂಟ್‌ನಿಂದ ಚೆಂಬುಗುಡ್ಡೆ ಟ್ಯಾಂಕ್‌ಗೆ ಪ್ರಾಯೋಗಿಕವಾಗಿ ನೀರು ಹರಿಯಲಿದೆ.

ಅಮೃತ್‌ ಯೋಜನೆ 2ರಡಿ ಅನುದಾನ
ಉಳ್ಳಾಲ ನಗರಸಭೆಯ ಕಾಮಗಾರಿಯೊಂದಿಗೆ ಸೋಮೇಶ್ವರ ಮತ್ತು ಕೋಟೆಕಾರು ನಗರಾಡಳಿತ ಪ್ರದೇಶಗಳಿಗೆ ಈಗಾಗಲೇ ಅಮೃತ್‌ ಯೋಜನೆ 2ರಡಿ ಅನುದಾನ ಬಿಡುಗಡೆಯಾಗಿದ್ದು, ಎರಡನೇ ಹಂತದ ಕಾಮಗಾರಿ ಆರಂಭವಾಗಿದೆ. ಉಳ್ಳಾಲ ನಗರಸಭೆಗೆ 70 ಕೋ. ರೂ., ಸೋಮೇಶ್ವರ ಪುರಸಭೆಗೆ 55.6 ಕೋ.ರೂ., ಕೋಟೆಕಾರು ಪಟ್ಟಣ ಪಂಚಾಯತ್‌ಗೆ 37 ಕೋ. ರೂ.ಅನುದಾನ ಬಿಡುಗಡೆಯಾಗಿದ್ದು, ಮುಂದಿನ ಆರು ತಿಂಗಳ ಒಳಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಪೂರ್ಣಗೊಳ್ಳಲಿದೆ.

ಗ್ರಾಮೀಣ ಪ್ರದೇಶಗಳಿಗೂ ನೀರು
ಉಳ್ಳಾಲ ತಾಲೂಕು ಹಾಗೂ ಬಂಟ್ವಾಳ ತಾಲೂ ಕಿನ ಕೆಲವು ಗ್ರಾಮಗಳು ಈ ಯೋಜನೆಯ ಲಾಭ ಪಡೆಯಲಿದೆ. ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ನೀರು ಸರಬರಾಜಿಗೆ ಎರಡನೇ ಹಂತದ ಕಾಮಗಾರಿ ಆರಂಭಗೊಳ್ಳಲಿದೆ. ಯೋಜನೆ ಪೂರ್ತಿಯಾದರೆ ಜನರಿಗೆ ತುಂಬಾ ಅನುಕೂಲ ಆಗಲಿದೆ.

Advertisement

ಉಳ್ಳಾಲ ನಗರಸಭೆ ವ್ಯಾಪ್ತಿಯ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರಿನ ಸರಬರಾಜಿಗೆ ಮುಡಿಪುನಲ್ಲಿರುವ 6ಎಂಎಲ್‌ (60 ಲಕ್ಷ ಲೀಟರ್‌) ಟ್ರೀಟ್‌ಮೆಂಟ್‌ ಪ್ಲ್ರಾಂಟ್‌ನಿಂದ ಚೆಂಬುಗುಡ್ಡೆಯಲ್ಲಿರುವ 16 ಎಂಎಲ್‌ಡಿ ನೀರಿನ ಟ್ಯಾಂಕ್‌ಗೆ ಪ್ರಾಯೋಗಿಕ ಚಾಲನೆಯ ಬಳಿಕ ನೀರಿನ ಸ್ಯಾಂಪಲನ್ನು ಲ್ಯಾಬ್‌ನಲ್ಲಿ ಹಲವು ಬಾರಿ ಪರೀಕ್ಷೆ ನಡೆಸಿದ ಬಳಿಕ ಜನರಿಗೆ ಪೂರೈಕೆ ಮಾಡಲಾಗುತ್ತದೆ.
– ಶೋಭಾಲಕ್ಷ್ಮೀ, ಸಹಾಯಕ ಅಭಿಯಂತರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

Advertisement

Udayavani is now on Telegram. Click here to join our channel and stay updated with the latest news.

Next