ಬೆಂಗಳೂರು: ಬೆಂಗಳೂರಿನಲ್ಲಿ ಮಳೆಯಿಂದಾಗಿ ಆಗಿರುವ ನಷ್ಟ ಸರಿಪಡಿಸಲು 1650 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಲವಾರು ಪ್ರದೇಶಗಳು ಜಲಾವೃತಗೊಂಡು ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ.
ಇದರೊಂದಿಗೆ ನಗರದಲ್ಲಿ ರಸ್ತೆಗಳು, ಕಾಲುವೆಗಳು ಹಾಗೂ ಕೆರೆಗಳಿಗೆ ಆಗಿರುವ ಹಾನಿ ಸರಿಪಡಿಸಲು ಅನುದಾನ ಕೋರಿ ಪಾಲಿಕೆಯ ಅಧಿಕಾರಿಗಲು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದು, ಅದನ್ನು ಆಧರಿಸಿ ಸರ್ಕಾರದಿಂದ ಕೇಂದ್ರಕ್ಕೆ ಪತ್ರ ಬರೆದು ಪರಿಹಾರ ನೀಡುವಂತೆ ಕೋರಲಾಗುವುದು ಎಂದರು.
ಮಳೆಯಿಂದಾಗಿ ನಗರದಲ್ಲಿ ನೆರೆ ಉಂಟಾಗಿ ಸೆಪ್ಟಂಬರ್ 9ವರೆಗೆ ಆಗಿರುವ ನಷ್ಟವನ್ನು ಲೆಕ್ಕಾಚಾರ ಹಾಕಿ, 1650 ಕೋಟಿ ರೂ. ಪರಿಹಾರ ಕೋರಲಾಗಿದೆ. ಆನಂತರವೂ ನಗರದಲ್ಲಿ ಮಳೆ ಸುರಿಯುತ್ತಿರುವುದರಿಂದ ಮತ್ತಷ್ಟು ಹಾನಿಯಾಗಿದ್ದು, ಸೆ.9ರಿಂದ ಈಚೆಗೆ ಆಗಿರುವ ನಷ್ಟವನ್ನು ಅಧಿಕಾರಿಗಳು ಲೆಕ್ಕಚಾರ ಹಾಕುತ್ತಿದ್ದಾರೆ. ಶೀಘ್ರವೇ ಎರಡನೇ ಪ್ರಸ್ತಾವನೆ ಸಲ್ಲಿಕೆಯಾಗಲಿದೆ ಎಂದರು.
ಸಾರ್ವಜನಿಕರ ತಪ್ಪು ಕಲ್ಪನೆ: ಸರ್ಕಾರದಿಂದ ನಿರ್ಮಿಸಿರುವ ರಸ್ತೆಗಳು ಹಾಳಾಗಿವೆ ಎಂಬ ತಪ್ಪು ಕಲ್ಪನೆ ಸಾರ್ವಜನಿಕರಲಿದೆ. ಹೊಸದಾಗಿ ನಿರ್ಮಿಸಿರುವ ಯಾವುದೇ ರಸ್ತೆ ಹಾಳಾಗಿಲ್ಲ. ಪಾಲಿಕೆಯ ವ್ಯಾಪ್ತಿಯಲ್ಲಿ 3600 ಕೋಟಿ ರೂ. ವೆಚ್ಚದಲ್ಲಿ 500 ಕಿ.ಮೀ ಉದ್ದದ ರಸ್ತೆಗಳಿಗೆ ಡಾಂಬರೀಕರಣ ಹಾಗೂ ವೈಟ್‌ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲು ಸಿದ್ಧವಾಗಿದ್ದು, ಮಳೆ ನಿಂತ ಕೂಡಲೇ ಎಲ್ಲ ಭಾಗಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಉಪಸ್ಥಿತರಿದ್ದರು.
ಒಂದು ಲಕ್ಷ ಬಡವರಿಗೆ ಮನೆ: ಸರ್ಕಾರ ನಗರದಲ್ಲಿ ಒಂದು ಲಕ್ಷ ಬಡವರಿಗೆ ಮನೆಗಳನ್ನು ನಿರ್ಮಿಸುತ್ತಿದೆ. ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ನಗರದಲ್ಲಿನ ರಾಜಕಾಲುವೆಗಳ ಪಕ್ಕದಲ್ಲಿರು ನಿವಾಸಿಗಳಿಗೆ ಉಚಿತವಾಗಿ ಮನೆಗಳನ್ನು ನೀಡಿ ಅವರನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು. ಜತೆಗೆ ರಾಜಕಾಲುವೆ ಪಕ್ಕದಲ್ಲಿರುವ ಮನೆಗಳನ್ನು ತೆರವುಗೊಳಿಸಲಾಗುವುದು ಎಂದು ಜಾರ್ಜ್ ಅವರು ಭರವಸೆ ನೀಡಿದರು.
ರಸ್ತೇಲಿ 3-4 ಗಂಟೆ ನೀರು ನಿಂತರಷ್ಟೇ ನಮ್ಮ ವೈಫಲ್ಯ!: “ಮುಖ್ಯಮಂತ್ರಿಗಳು ನಗರದಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಗಡುವು ನೀಡಿದ್ದಾರೆ. ಆದರೆ ಮಳೆಯಿಂದ ಕಾಮಗಾರಿಗೆ ಹಿನ್ನಡೆಯಾಗಿದೆ. ಆದಾಗ್ಯೂ 24 ಸಾವಿರ ಗುಂಡಿಗಳ ಪೈಕಿ 12 ಸಾವಿರ ಗುಂಡಿಗಳನ್ನು ಮುಚ್ಚಲಾಗಿದೆ. ನಗರದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ. ಆದರೆ ಆ ನೀರು 2-3 ಗಂಟೆಗಳಲ್ಲಿ ಹರಿದು ಹೋಗುತ್ತದೆ. ಒಂದೊಮ್ಮೆ 3-4 ಗಂಟೆಗಳ ನಂತರವೂ ಹರಿದು ಹೋಗದಿದ್ದರೆ ಅದು ನಮ್ಮ ವೈಫಲ್ಯವಾಗುತ್ತದೆ,’ ಎಂದು ಸಚಿವ ಜಾರ್ಜ್ ತಿಳಿಸಿದರು.