Advertisement

ಓಲಾಗೆ 15ಲಕ್ಷ ರೂ. ದಂಡ

12:22 PM Mar 26, 2019 | Team Udayavani |

ಬೆಂಗಳೂರು: ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಓದಗಿಸುವ ಓಲಾ ಸಂಸ್ಥೆಯ ಪರವಾನಗಿ ಅಮಾನತುಗೊಳಿಸಿ ಈಚೆಗೆ ಹೊರಡಿಸಿದ್ದ ಆದೇಶವನ್ನು ಸರ್ಕಾರ ಸೋಮವಾರ ಹಿಂಪಡೆದಿದೆ. ಇದರಿಂದ ರಾಜ್ಯಾದ್ಯಂತ ಓಲಾ ಟ್ಯಾಕ್ಸಿಗಳ ಕಾರ್ಯಾಚರಣೆ ಎಂದಿನಂತೆ ಮುಂದುವರಿಯಲಿದೆ.

Advertisement

ನಿಯಮ ಉಲ್ಲಂಘನೆ ಆರೋಪ ಎದುರಿಸುತ್ತಿದ್ದ ಓಲಾ ಸಂಸ್ಥೆಗೆ ರಾಜ್ಯ ಸಾರಿಗೆ ಪ್ರಾಧಿಕಾರ (ಎಸ್‌ಟಿಎ)ವು ಗರಿಷ್ಠಮಟ್ಟದ ಅಂದರೆ 15 ಲಕ್ಷ ರೂ. ದಂಡ ವಿಧಿಸುವುದರ ಜತೆಗೆ ತಪ್ಪೊಪ್ಪಿಗೆ ಮುಚ್ಚಳಿಕೆ ಪತ್ರವನ್ನೂ ಬರೆಸಿಕೊಂಡು ಆದೇಶ ಹಿಂಪಡೆಯಲಾಯಿತು.

ಓಲಾ ಸಂಸ್ಥೆಯು ಬೈಕ್‌ ಟ್ಯಾಕ್ಸಿ ಸೇವೆಯನ್ನು ಆರಂಭಿಸಿತ್ತು. ಇದು “ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮಾವಳಿ 2016’ರ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅಗ್ರಿಗೇಟರ್‌ (ಕ್ಯಾಬ್‌ ಸೇವೆಗೆ ಅವಕಾಶ ಕಲ್ಪಿಸುವ) ಪರವಾನಗಿ ಅಮಾನತುಗೊಳಿಸಿತ್ತು.

ಸೋಮವಾರ ಈ ಸಂಬಂಧ ಸಾರಿಗೆ ಇಲಾಖೆ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಸ್ಥೆಯ ಪ್ರತಿನಿಧಿಗಳು ನಿಯಮ ಉಲ್ಲಂಘನೆಯ ತಪ್ಪೊಪ್ಪಿಕೊಂಡರು. ಜತೆಗೆ ರಾಜ್ಯ ಸಾರಿಗೆ ಪ್ರಾಧಿಕಾರದ ನಿರ್ಧಾರಕ್ಕೆ ಬದ್ಧ ಎಂದು ಮುಚ್ಚಳಿಕೆ ಸಲ್ಲಿಸಿದರು. ನಂತರ ಪ್ರಾಧಿಕಾರವು ದಂಡ ವಿಧಿಸಿ, ಪರವಾನಗಿ ಅಮಾನತು ಆದೇಶ ಹಿಂಪಡೆಯಿತು.

ಹಲವು ಬಾರಿ ನೋಟಿಸ್‌: ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ವಿ.ಪಿ. ಇಕ್ಕೇರಿ, ಓಲಾ ಸಂಸ್ಥೆ ಅಗ್ರಿಗೇಟರ್‌ ಪರವಾನಗಿ ಪಡೆದು ನಿಯಮ ಬಾಹಿರವಾಗಿ ಬೈಕ್‌ ಟ್ಯಾಕ್ಸಿ ಸೇವೆ ಆರಂಭಿಸಿತ್ತು. ಕೂಡಲೇ ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವಂತೆ ಎಸ್‌ಟಿಎಯಿಂದ ಶೋಕಾಸ್‌ ನೋಟಿಸ್‌ ನೀಡಲಾಗಿತ್ತು. ಆದರೂ, ಸೇವೆ ಮುಂದುವರಿಸಿದ್ದರಿಂದ ಕಾರ್ಯಾಚರಣೆ ಮಾಡಿ, 252 ಓಲಾ ಬೈಕ್‌ ಟ್ಯಾಕ್ಸಿ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿತ್ತು.

Advertisement

ಕಳೆದ ಫೆಬ್ರವರಿಯಲ್ಲಿ ಮತ್ತೂಮ್ಮೆ ನೋಟಿಸ್‌ ನೀಡಿದಾಗ ಸರಿಯಾದ ಸಮಜಾಯಿಷಿ ನೀಡಲಿಲ್ಲ. ಸುರಕ್ಷತೆ ಹಿನ್ನೆಲೆಯಲ್ಲಿ ಕ್ಯಾಬ್‌ಗಳಲ್ಲಿ ಚೈಲ್ಡ್‌ ಲಾಕ್‌ ಸಿಸ್ಟ್‌ಂ ತೆರವುಗೊಳಿಸುವಂತೆ ಹೈಕೋರ್ಟ್‌ ಆದೇಶಿಸಿದ್ದರೂ ಹಲವು ಕ್ಯಾಬ್‌ಗಳಲ್ಲಿ ತೆರವು ಮಾಡಿರಲಿಲ್ಲ. ಈ ಎಲ್ಲ ಕಾರಣಗಳಿಂದ ಸಂಸ್ಥೆಯ ಅಗ್ರಿಗೇಟರ್‌ ಪರವಾನಗಿ ಅಮಾನತುಗೊಳಿಸುವ ಕಠಿಣ ಕ್ರಮ ಕೈಗೊಳ್ಳಲಾಗಿತ್ತು.

24 ಗಂಟೆ ಕೆಲಸ; ಅಪಘಾತ ಹೆಚ್ಚಳ ಸಾಧ್ಯತೆ: ರಾಜ್ಯ ಸಾರಿಗೆ ಪ್ರಾಧಿಕಾರದ ಸದಸ್ಯ ಎಡಿಜಿಪಿ ಪಿ.ಎಸ್‌. ಸಂಧು ಮಾತನಾಡಿ, ದಿನದ 24 ಗಂಟೆ ಚಾಲಕರು ಕೆಲಸ ಮಾಡುವುದರಿಂದ ವಿಶ್ರಾಂತಿ ಇಲ್ಲದೆ ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ. ಹಾಗಾಗಿ, ಸಂಸ್ಥೆಯು ಚಾಲಕರ ಕೆಲಸ ಅವಧಿ ನಿಗದಿಗೊಳಿಸಬೇಕು. ಚಾಲಕರೇ ಕೆಲಸ ಮಾಡಲು ಮುಂದೆ ಬಂದರೂ ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಅವಧಿ ಕಡಿಗೊಳಿಸಬೇಕೆಂದು ಓಲಾ ಸಂಸ್ಥೆಗೆ ಸೂಚಿಸಿರುವುದಾಗಿ ಹೇಳಿದರು.

ರ್ಯಾಪಿಡೋಗೂ ನೋಟಿಸ್‌: ನಗರದಲ್ಲಿ ಅನಧಿಕೃತವಾಗಿ ಟ್ಯಾಕ್ಸಿ ಸೇವೆ ಆರಂಭಿಸಿರುವ ರ್ಯಾಪಿಡೋ ಸಂಸ್ಥೆಗೂ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಸಾರಿಗೆ ಆಯುಕ್ತರೂ ಆದ ವಿ.ಪಿ. ಇಕ್ಕೆರಿ ತಿಳಿಸಿದರು. ಉದ್ದೇಶಿತ ಸಂಸ್ಥೆಯು ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಮಾ. 19ರಂದು ರ್ಯಾಪಿಡೋ ಸಂಸ್ಥೆಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದು, ಸ್ಪಷ್ಟನೆಗೆ ಎದುರು ನೋಡುತ್ತಿದ್ದೇವೆ. ಹತ್ತು ದಿನಗಳಲ್ಲಿ ನೋಟಿಸ್‌ಗೆ ಸ್ಪಂದಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮಾರ್ಚ್‌ 27ಕ್ಕೆ ಸಭೆ: ಕಳೆದ ವರ್ಷ ರಾಜ್ಯ ಸರ್ಕಾರ ಬೆಂಗಳೂರು ನಗರದಲ್ಲಿ ಬೈಕ್‌ ಟ್ಯಾಕ್ಸಿ ಸೇವೆ ಆರಂಭಿಸಲು ಅವಕಾಶ ನೀಡುವ ಸಂಬಂಧ ಸಾಧಕ-ಬಾಧಕ ಅಧ್ಯಯನ ಮಾಡಲು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆದರೆ, ಇದುವರೆಗೂ ಆ ಸಮಿತಿ ಅಧ್ಯಯನ ವರದಿ ನೀಡಿಲ್ಲ. ಮಾ. 27ರಂದು ಸಮಿತಿಯ ಸಭೆ ನಡೆಯಲಿದೆ.

ಓಲಾ ಸ್ಪಷ್ಟನೆ: ಕೆಲದಿನಗಳಿಂದ ಎದುರಿಸುತ್ತಿದ್ದ ಸಮಸ್ಯೆಗಳು ಬಗೆಹರಿದಿವೆ. ಈ ಅವಧಿಯಲ್ಲಿ ಚಾಲಕ ಪಾಲುದಾರರು ಹಾಗೂ ಪ್ರಯಾಣಿಕರಿಗೆ ಉಂಟಾದ ಅನನುಕೂಲತೆಗೆ ವಿಷಾದಿಸುತ್ತೇವೆ. ಚಲನಶೀಲತೆಯ ಸವಾಲುಗಳನ್ನು ಎದುರಿಸಲು ರಾಜ್ಯ ಸರ್ಕಾರದೊಂದಿಗೆ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇವೆ. ಅಲ್ಲದೆ, ಮುಂದಿನ ದಿನಗಳಲ್ಲಿ ಚಾಲಕರ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸಲು ಬದ್ಧರಾಗಿದ್ದೇವೆ ಎಂದು ಓಲಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next