ಬೆಂಗಳೂರು: ಶಾಂತಿನಗರ ವಿಧಾನಸಭೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚುವರಿಯಾಗಿ 15 ಕೋಟಿ ರೂ. ಅನುದಾನ ನೀಡುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದ್ದಾರೆ.
ಶಾಂತಿನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಬಿಎಂಪಿ ವತಿಯಿಂದ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಎನ್.ಎ.ಹ್ಯಾರೀಸ್ ಹಾಗೂ ಮೇಯರ್ ಆರ್.ಸಂಪತ್‌ರಾಜ್ ಅವರೊಂದಿಗೆ ಶುಕ್ರವಾರ ಪರಿಶೀಲಿಸಿದ ಅವರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಶೀಘ್ರ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ ಕಾಮಗಾರಿಗಳಿಗೆ ಅಗತ್ಯ ಅನುದಾನ ನೀಡುವುದಾಗಿ ತಿಳಿಸಿದರು.
ಮೊದಲಿಗೆ ದೊಮ್ಮಲೂರಿನ ಕೇಂಬ್ರಿಡ್ಜ್ ಬಡಾವಣೆಯಲ್ಲಿ ಮಳೆಗಾಲದಲ್ಲಿ ರಾಜಕಾಲುವೆ ನೀರು ವಸತಿ ಪ್ರದೇಶಗಳಿಗೆ ಪ್ರವೇಶಿಸಿ ತೊಂದರೆಯಾಗುವ ಪ್ರದೇಶಕ್ಕೆ ಭೇಟಿ ನೀಡಿದ ಅವರು, ರಾಜಕಾಲುವೆಯಲ್ಲಿ ಸಂಪೂರ್ಣವಾಗಿ ತ್ಯಾಜ್ಯ ತುಂಬಿ ನೀರು ಸಮರ್ಪಕವಾಗಿ ಹರಿಯದಿರುವುದನ್ನು ಪರಿಶೀಲಿಸಿ, ಮುಂದೆ ಈ ರೀತಿ ಆಗದಂತೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ನಂತರ ಜೋಗುಪಾಳ್ಯ, ಹಲಸೂರು ಸೇರಿ ಸುಮಾರು 13 ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ ಅವರು, ರಾಜಕಾಲುವೆಗಳಲ್ಲಿ ತುಂಬಿರುವ ಹೂಳನ್ನು ಶೀಘ್ರ ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ತಿಳಿಸಿದರು. ನಂತರ ವಿವೇಕನಗರದ ರಸ್ತೆ ಅಗಲೀಕರಣಕ್ಕೆ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಿ ಶೀಘ್ರ ಯೋಜನೆ ಕೈಗೆತ್ತಿಕೊಳ್ಳುವಂತೆ ಆಯುಕ್ತರಿಗೆ ಸೂಚಿಸಿದರು.
ಆನೆಪಾಳ್ಯದ ಬಳಿ ಬೃಹತ್ ಮಳೆನೀರು ಕಾಲುವೆ ನಿರ್ಮಿಸುತ್ತಿರುವ ಕಾಮಗಾರಿ ವೀಕ್ಷಿಸಿದ ಅವರು, ಬೃಹತ್ ಮಳೆನೀರು ಕಾಲುವೆಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಯನ್ನು ಡಿಸೆಂಬರ್ ತಿಂಗಳೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದ ಜಾರ್ಜ್, ವಿವಿಧ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿರುವ ಕುರಿತು ಶಾಸಕರನ್ನು ಪ್ರಶ್ನಿಸಿದರು.
ಈ ವೇಳೆ ಶಾಸಕ ಎನ್.ಎ.ಹ್ಯಾರೀಸ್ ಹಲವು ಕಾಮಗಾರಿಗಳಿಗೆ ಅನುದಾನದ ಕೊರತೆಯಾಗಿರುವುದರಿಂದ ಶೀಘ್ರ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕ್ಷೇತ್ರದಲ್ಲಿನ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ನೀಡುವಂತೆ ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಜಾರ್ಜ್, ನಗರಾಭಿವೃದ್ಧಿ ಸಚಿವರ ನಿಧಿಯಿಂದ 15 ಕೋಟಿ ರೂ. ನೀಡುವುದಾಗಿ ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಹೇಳಿದರು.
ಈ ವೇಳೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಬೃಹತ್ ಮಳೆನೀರು ಕಾಲುವೆ ಮುಖ್ಯ ಎಂಜಿನಿಯರ್ ಬೆಟ್ಟೇಗೌಡ ಸೇರಿದಂತೆ ಪ್ರಮುಖರು ಹಾಜರಿದ್ದರು.