Advertisement

ಹಳೆಯ ಮಾಡು, ಶಿಥಿಲ ಗೋಡೆ ಇದು ಸರಕಾರಿ ಶಾಲೆ!

02:44 PM May 23, 2018 | Team Udayavani |

ಸುಳ್ಯ : ಇನ್ನೊಂದು ವಾರದೊಳಗೆ ಪ್ರಾಥಮಿಕ, ಪ್ರೌಢಶಾಲೆ ತರಗತಿಗಳು ಪುನಾರಂಭಗೊಳ್ಳಲಿದೆ. ತಾಲೂಕಿನ
ವಿವಿಧ ಶಾಲೆಗಳ ದುರಸ್ತಿಗೆ 13.71 ಲಕ್ಷ ರೂ., ಹೊಸ ಕೊಠಡಿಗೆ 31.50 ಲಕ್ಷ ರೂ. ಕ್ರಿಯಾ ಯೋಜನೆ ತಯಾರಿಸಿ, ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Advertisement

ತಾಲೂಕಿನಲ್ಲಿ ಸರಕಾರಿ 139 ಪ್ರಾಥಮಿಕ, 16 ಪ್ರೌಢಶಾಲೆಗಳಿವೆ. 13 ಶತಮಾನ ಪೂರೈಸಿದ ಶಾಲೆಗಳು ಇವೆ. ಅವುಗಳಲ್ಲಿ ಹಲವು ಶಾಲೆಗಳು ದುರಸ್ತಿಗೆ ಅನುದಾನ ಕೋರಿ ಮನವಿ ಸಲ್ಲಿಸಿವೆ.

ಅದಕ್ಕೆ ಸರಕಾರದ ಮಟ್ಟದಲ್ಲಿ ಸ್ಪಂದನೆ ಸಿಕ್ಕಿಲ್ಲ. ಕೆಲ ಶಾಲೆಗಳಲ್ಲಿ ಈಗಲೂ ಶಿಕ್ಷಕರ ಕೊರತೆ ಇದ್ದು, ಹೊಸ ನೇಮಕಾತಿ ನಿರೀಕ್ಷೆಯಲ್ಲಿದ್ದಾರೆ. ಪ್ರತಿ ವರ್ಷ ಮಕ್ಕಳ ಸಂಖ್ಯೆ ಇಳಿಕೆ ಎನ್ನುವ ಆಪಾದನೆ ಹೊತ್ತುಕೊಂಡೇ ವರ್ಷವಿಡಿ ಕಾರ್ಯ ನಿರ್ವಹಿಸುವ ಸರಕಾರಿ ಶಾಲೆಗಳು ಮೂಲ ಕೊರತೆಗಳಿಂದ ಹೊರತಾಗಿಲ್ಲ. ಗುಣಮಟ್ಟದ ಶಿಕ್ಷಣ, ಸುರಕ್ಷತೆ ದೃಷ್ಟಿಯಿಂದ ಶಾಲೆಗಳ ಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಬೇಕಿದೆ ಎಂಬ ಬೇಡಿಕೆಯು ಪ್ರತಿ ಗ್ರಾಮ, ತಾಲೂಕು ಸಭೆಗಳಲ್ಲಿ ಕೇಳಿ ಬರುತ್ತಿದೆ.

ಪ್ರಸ್ತಾವನೆ ಪಟ್ಟಿ
2018-19ನೇ ಸಾಲಿನಲ್ಲಿ ಆಯಾ ಜಿ.ಪಂ. ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ದುರಸ್ತಿಗೆ ಅನುದಾನಕ್ಕೆ ಬೇಡಿಕೆ ಪಟ್ಟಿ ಸಲ್ಲಿಸಲಾಗಿದೆ. ಗೂನಡ್ಕ ಸ.ಹಿ.ಪ್ರಾ. ಶಾಲೆ-1.75 ಲಕ್ಷ ರೂ., ಅಯ್ಯನಕಟ್ಟೆ ಸ.ಹಿ.ಪ್ರಾ. ಶಾಲೆಗೆ 1.75 ಲಕ್ಷ ರೂ., ಮಾವಿನಕಟ್ಟೆ ಸ.ಹಿ.ಪ್ರಾ. ಶಾಲೆಗೆ 1.50 ಲಕ್ಷ ರೂ., ಶೇಣಿ ಸ.ಹಿ.ಪ್ರಾ. ಶಾಲೆಗೆ 1.11 ಲಕ್ಷ ರೂ. ಸಹಿತ 6.11 ಲಕ್ಷ ರೂ. ಕ್ರಿಯಾಯೋಜನೆ ಪಟ್ಟಿ ರೂಪಿಸಲಾಗಿದೆ.

ಪ್ರೌಢಶಾಲೆಗಳ ಪೈಕಿ ಎಡಮಂಗಲ ಸರಕಾರಿ ಪ್ರೌಢಶಾಲೆಗೆ 3 ಲಕ್ಷ ರೂ., ಏನೆಕಲ್ಲು ಸ. ಪ್ರೌಢಶಾಲೆಗೆ 2.10 ಲಕ್ಷ ರೂ., ಗಾಂಧಿನಗರ ಪ್ರೌಢಶಾಲೆಗೆ 2.50 ಲಕ್ಷ ರೂ. ಸಹಿತ 7.60 ಲಕ್ಷ ರೂ. ಅಂದಾಜು ಮೊತ್ತದ ಕ್ರಿಯಾಯೋಜನೆ ತಯಾರಿಸಿಲಾಗಿದೆ. ಶಾಲಾ ಕೊಠಡಿ ನಿರ್ಮಾಣಕ್ಕೆ ಸಂಬಂಧಿಸಿ, ಎಣ್ಮೂರು ಸರಕಾರಿ ಪ್ರೌಢಶಾಲೆಯಲ್ಲಿ 1 ಕೊಠಡಿ ನಿರ್ಮಾಣಕ್ಕೆ 15.75 ಲಕ್ಷ ರೂ., ಗುತ್ತಿಗಾರು ಸ. ಪ್ರೌಢಶಾಲೆಗೆ 15.75 ಲಕ್ಷ ರೂ. ಸಹಿತ ಒಟ್ಟು 31.50 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ.

Advertisement

ಶತಮಾನದ 13 ಶಾಲೆ
ತಾಲೂಕಿನಲ್ಲಿ 13 ಪ್ರಾಥಮಿಕ ಶಾಲೆಗಳು 100 ವರ್ಷ ದಾಟಿವೆ. ಅವುಗಳ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿ, ವಿಶೇಷ ಅನುದಾನ ಒದಗಿಸುವ ಅಗತ್ಯವಿದೆ.

ಶಾಲಾ ಖರ್ಚು
66 ಕಿರಿಯ ಪ್ರಾಥಮಿಕ ಶಾಲೆಗಳಿಗೆ ತಲಾ 5 ಸಾವಿರ ರೂ.ನಂತೆ 3.30 ಲಕ್ಷ ರೂ., ಹಿರಿಯ ಪ್ರಾಥಮಿಕ ಶಾಲೆಗಳಿಗೆ
ತಲಾ 5,200 ರೂ.ನಂತೆ 18 ಶಾಲೆಗಳಿಗೆ 37.98 ಲಕ್ಷ ರೂ., ಪ್ರೌಢಶಾಲೆಗಳಿಗೆ ತಲಾ 5,500 ರೂ.ನಂತೆ 18
ಶಾಲೆಗಳಿಗೆ 8.8 ಲಕ್ಷ ರೂ. ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವನೆ ಕಳುಹಿಸಲಾಗಿದೆ.

ಅನುದಾನ ಬಂದಿಲ್ಲ
ಸರ್ವಶಿಕ್ಷಣ ಅಭಿಯಾನದಡಿ ಪ್ರಾಥಮಿಕ ಶಾಲಾ ಕಟ್ಟಡ ದುರಸ್ತಿಗೆಂದು ಕಳೆದ ಬಾರಿ ಸುಳ್ಯ ತಾಲೂಕಿನ 61 ಶಾಲೆಗಳ
ಅಗತ್ಯ ಕಾಮಗಾರಿಗಳ ಕ್ರಿಯಾ ಯೋಜನೆ ರಚಿಸಿ ಪ್ರಸ್ತಾವನೆ ಪಟ್ಟಿ ಕಳುಹಿಸಲಾಗಿತ್ತು. ಜಿಲ್ಲಾ ಮಟ್ಟದಲ್ಲಿ ಏಳು ಬ್ಲಾಕ್‌ಗಳಿಗೆ 4 ಕೋಟಿ ರೂ. ಅಂದಾಜು ಪಟ್ಟಿ ರವಾನಿಸಲಾಗಿತ್ತು. ಅದರಲ್ಲಿ 99.54 ಲಕ್ಷ ರೂ. ಮಾತ್ರ ಬಿಡುಗಡೆಗೊಂಡಿತ್ತು. ಏಳು ಬ್ಲಾಕ್‌ಗಳ ಪೈಕಿ ಸುಳ್ಯ ತಾಲೂಕಿಗೆ ನಯಾ ಪೈಸೆ ಅನುದಾನ ಮಂಜೂರುಗೊಂಡಿಲ್ಲ.

ದುರಸ್ತಿಗೆ ಕ್ರಮ
ಪ್ರತಿ ಶಾಲೆಗಳ ಗುಣಮಟ್ಟದ ಬಗ್ಗೆ ಸಿಆರ್‌ಪಿಗಳಿಂದ ವರದಿ ಸಂಗ್ರಹಿಸಲಾಗುತ್ತಿದೆ. ಅದನ್ನು ಪರಿಶೀಲಿಸಿ, ವಿವಿಧ ಮೂಲಗಳ ಅನುದಾನ ಬಳಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನಷ್ಟೇ ಅನುದಾನ ಬರಬೇಕಿದ್ದು, ಬಂದ ತತ್‌ಕ್ಷಣ ದುರಸ್ತಿಗೆ ಆದ್ಯತೆ ನೀಡಲಾಗುವುದು.
– ಲಿಂಗರಾಜೇ ಅರಸ್‌
ಕ್ಷೇತ್ರ ಶಿಕ್ಷಣಾಧಿಕಾರಿ, ಸುಳ್ಯ 

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next