ಸುಬ್ರಹ್ಮಣ್ಯ: ಇತ್ತೀಚೆಗೆ ಮಂಗಳೂರಿನ ಕಾಟಿಪಳ್ಳದಲ್ಲಿ ಹತ್ಯೆಗೊಳಗಾದ ದೀಪಕ್ ರಾವ್ ಅವರ ಕುಟುಂಬದ ನೆರವಿಗೆ ಕುಕ್ಕೆ ಸುಬ್ರಹ್ಮಣ್ಯ ಜಾಗೃತ ಹಿಂದೂ ಸಮಾಜ ಮುಂದಾಗಿದ್ದು ಸಾಂತ್ವನ ನಿಧಿ ಸಂಗ್ರಹಿಸಿದೆ, ಈ ವೇಳೆ ಲಕ್ಷಕ್ಕೂ ಮಿಕ್ಕಿದ
ಧನ ಸಂಗ್ರಹವಾಗಿದೆ.
ಪುತ್ರನನ್ನು ಕಳೆದುಕೊಂಡಿರುವ ತಾಯಿ, ಅಣ್ಣನಿಲ್ಲದ ನೋವಿನಲ್ಲಿರುವ ಮೂಗ ಸಹೋದರನ ನೋವಿಗೆ ಸ್ಥಳೀಯ ಹಿಂದೂ ಬಾಂಧವರು ಸ್ಪಂದಿಸಿ, ಎರಡು ದಿನಗಳ ಕಾಲ ಸಾಂತ್ವನ ನಿಧಿ ಸಂಗ್ರಹ ಅಭಿಯಾನ ನಡೆಸಿದ್ದರು. ಕ್ಷೇತ್ರಕ್ಕೆ ಆಗಮಿಸಿದ ಭಕ್ತರು, ಸ್ಥಳಿಯ ಉದ್ಯಮಿಗಳು, ವರ್ತಕರು, ವ್ಯಾಪಾರಸ್ಥರು, ನಾಗರಿಕರು ಸಾಕಷ್ಟು ನೆರವು ನೀಡಿದ್ದಾರೆ. ವೃದ್ಧೆಯೊಬ್ಬರು ಕಣ್ಣೀರು ಸುರಿಸುತ್ತಲೇ ಧನಸಹಾಯ ನೀಡಿದರೆ, ಅಂಗವಿಕಲ ಭಕ್ತೆಯೊಬ್ಬರು ಕೂಡ ಕಣ್ಣೀರು ಮಿಡಿದರು. ಒಟ್ಟು 1.12 ಲಕ್ಷ ರೂ. ಸಂಗ್ರಹವಾಗಿದೆ.
ಮಂಗಳವಾರ ಸುಬ್ರಹ್ಮಣ್ಯ ಹಿಂದೂ ಸಮಾಜ ಬಾಂಧವರು ದೀಪಕ್ ಅವರ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ರಾಜೇಶ್ ಎನ್.ಎಸ್. ಮಾತನಾಡಿ, ದೀಪಕ್ ಅವರನ್ನು ತಂದುಕೊಡಲು ಯಾರಿಂದಲೂ ಸಾಧ್ಯವಿಲ್ಲ. ಮಗನ ಸಾವನ್ನು ಸಹಿಸುವ ಶಕ್ತಿಯನ್ನು ದೇವರು ತಾಯಿ ಹಾಗೂ ಕುಟುಂಬಕ್ಕೆ ನೀಡುವಂತೆ ಕುಕ್ಕೆ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದೇವೆ ಎಂದರಲ್ಲದೆ, ಎಲ್ಲ ದಾನಿಗಳ ಸಹಕಾರದಿಂದ ಸಂಗ್ರಹಿಸಿದ ನಿಧಿಯನ್ನು ದೀಪಕ್ ತಾಯಿಗೆ ಹಸ್ತಾಂತರಿಸಿದರು.
ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ, ಯುವಮೋರ್ಚಾ ಮಂಗಳೂರು ಉತ್ತರ ಅಧ್ಯಕ್ಷ ಯಶ್‌ಪಾಲ್, ಬಂಟ್ವಾಳ ಯುವಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ನಿಧಿ ಸಂಗ್ರಹ ಪ್ರಮುಖರಾದ ಸುಬ್ರಹ್ಮಣ್ಯದ ಶಿವಕುಮಾರ್ ಕಾಮತ್, ಪ್ರಸಾದ್ ರೈ, ಪ್ರಶಾಂತ್ ಭಟ್ ಮಾಣಿಲ, ಶ್ರೀಕುಮಾರ್ ನಾಯರ್, ಲೋಕೇಶ್ ಎನ್. ಎಸ್., ದೀಪಕ್, ಚಿದಾನಂದ ಕಂದಡ್ಕ, ದಿನೇಶ್ ಸಂಪ್ಯಾಡಿ, ಅಶೋಕ ಆಚಾರ್ಯ, ಪ್ರಶಾಂತ ಆಚಾರ್ಯ, ಯುವ ತೇಜಸ್ಸಿನ ಗುರುಪ್ರಸಾದ್ ಪಂಜ, ಆಶಿತ್ ಕಲ್ಲಾಜೆ ಉಪಸ್ಥಿತರಿದ್ದರು.