ದೊಡ್ಡಬಳ್ಳಾಪುರ: ವಿತ್ತ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿರುವ ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆಯನ್ನು 250 ಹಾಸಿಗೆಗಳ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆ ಗೇರಿಸಲು 10 ಕೋಟಿ ರೂ. ಅನುದಾನ ನೀಡಿ ರುವುದನ್ನು ಬಿಟ್ಟರೆ, ತಾಲೂಕಿಗೆ ಯಾವುದೇ ಕೊಡುಗೆ ನೀಡಿಲ್ಲ ಎಂಬ ಕೂಗು ತಾಲೂಕಿನ ಎಲ್ಲೆಡೆ ಜನರಿಂದ ಕೇಳಿಬರುತ್ತಿದೆ.
ಬರಪೀಡಿತ ತಾಲೂಕಿಗೆ ನೀರಾವರಿಗಾಗಿ ಹೆಚ್ಚಿನ ಹಣ ಮೀಸಲಿಡಬೇಕಿತ್ತು. ಕೃಷಿಗಾಗಿ ಮೀಸಲಿಟ್ಟಿರುವ ಇಸ್ರೇಲ್ ಮಾದರಿ ಕೃಷಿ ಯೋಜನೆಗೆ 145 ಕೋಟಿ ರೂ., ಸಾವಯವ ಕೃಷಿಗೆ 35 ಕೋಟಿ ರೂ., ಶೂನ್ಯ ಬಂಡವಾಳ ಕೃಷಿ ಯೋಜನೆಗೆ 40 ಕೋಟಿ ರೂ. ಮೀಸಲಿಟ್ಟಿರುವ ಹಣ ಸಾಲದು ಎನ್ನುವುದು ಹಲವಾರು ರೈತರ ಅಭಿಪ್ರಾಯವಾಗಿದೆ.
ನೇಕಾರರಿಗೆ ಯಾವುದೇ ಯೋಜನೆಗಳಿಲ್ಲ: ವಿದ್ಯುತ್ ಮಗ್ಗಗಳ ಘಟಕಕ್ಕೆ ಅಕೋಸ್ಟಿಕ್ ಉಪಕರಣಗಳ ಅಳವಡಿಕೆಗೆ ಶೇ.5ರಷ್ಟು ಸಹಾಯಧನ ನೀಡಲು 5 ಕೋಟಿ ರೂ ಸಹಾಯಧನ ಬಿಟ್ಟರೆ ನೇಕಾರರಿಗೆ ಯಾವುದೇ ಯೋಜನೆಗಳಿಲ್ಲ. ಕುಡಿಯುವ ನೀರಿಗಾಗಿ ಕಾವೇರಿ ನೀರು ಹರಿಸಲು ಸಂಪರ್ಕ ಕಲ್ಪಿಸುವುದು. ತಿಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೊರವೆಹಳ್ಳದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಲು ಘೋಷಿಸುವುದು.
ನಾಯಂಡಹಳ್ಳಿಯಿಂದ ತ್ಯಾಜ್ಯ ನೀರನ್ನು ಸಂಸ್ಕರಿಸಿ ದೊಡ್ಡಬಳ್ಳಾಪುರ ಕೆರೆಗಳಿಗೆ ನೀರು ತುಂಬಿಸುವುದು, ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ. ಸಾಸಲು ಹೋಬಳಿಯಲ್ಲಿ ಪದವಿ ಪೂರ್ವ ಕಾಲೆಜು ಮಂಜೂರು. ದೊಡ್ಡಬಳ್ಳಾಪುರ ಪ್ರಾದೇಶಿಕ ಸಾರಿಗೆ ಕಚೇರಿ ಸ್ಥಾಪನೆ. ಸಂಚಾರ ಪೊಲೀಸ್ ಠಾಣೆ ಮಂಜೂರು. ಬೆಂಗಳೂರು-ದೊಡ್ಡಬಳ್ಳಾಪುರ ಉಪನಗರ ರೈಲ್ವೆ ಸಂಚಾರ ಪ್ರಾರಂಭಿಸುವುದು, ಪ್ರವಾಸೋದ್ಯಮ, ಜಿಲ್ಲಾ ಕ್ರೀಡಾಂಗಣದ ಕುರಿತಂತೆ ಯಾವುದೇ ಪ್ರಸ್ತಾವನೆಯಿಲ್ಲ.
ತಾಲೂಕಿನಲ್ಲಿ ಎತ್ತಿನಹೊಳೆ ನೀರು ಸಂಗ್ರಹ ಮಾಡುವ ಕೆರೆಗಳ ಹೂಳೆತ್ತಲು 120 ಕೋಟಿ ರೂ. ನೀಡಲಾಗಿದೆ. ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ನಿಟ್ಟಿನಲ್ಲಿ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದರೂ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸದಿರುವುದು ದೊಡ್ಡಬಳ್ಳಾಪುರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೆ ಸಹಜವಾಗಿ ಅಸಮಾಧಾನವಾಗಿದೆ. ಎತ್ತಿನ ಹೊಳೆ ಯೋಜನೆ ಪ್ರಗತಿಯಲ್ಲಿರುವುದರಿಂದ ಬೇರೆ ಯೋಜನೆ ಅಸಾಧ್ಯ ಎನ್ನಲಾಗಿದ್ದು, ಸ್ಥಳೀಯ ಅಂತರ್ಜಲಮಟ್ಟ ಏರಿಕೆ, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿಲ್ಲ.
ಈಡೇರದ ನೇಕಾರರ ಬೇಡಿಕೆಗಳು: ಅಕೋಸ್ಟಿಕ್ ಉಪಕರಣಗಳ ಅಳವಡಿಕೆಗೆ ಶೇ.5ರಷ್ಟು ಸಹಾಯಧನ ನೀಡಲು 5 ಕೋಟಿ ರೂ. ಸಹಾಯಧನ ಬಿಟ್ಟರೆ ನೇಕಾರರಿಗೆ ಯಾವ ಕೊಡುಗೆಯನ್ನೂ ನೀಡಿಲ್ಲ. ನೇಕಾರರನ್ನು ಅಸಂಘಟಿತ ಕಾರ್ಮಿಕರ ವ್ಯಾಪ್ತಿಗೆ ತಂದು ಕನಿಷ್ಠ ಕೂಲಿ ನಿಗದಿ, ಬೆಂಗಳೂರಿನಲ್ಲಿ ನೇಕಾರರ ಭವನ ನಿರ್ಮಾಣ, ನೇಕಾರರಿಗೆ ಬಂಡವಾಳ ದೊರಕಿಸಿಕೊಡಲು ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆ,
ಕೈಮಗ್ಗ, ವಿದ್ಯುತ್ ಮಗ್ಗಗಳ ಇಲಾಖೆಗಳಿಗೆ ಹೆಚ್ಚಿನ ಅನುದಾನ, ಕಚ್ಚಾ ಸಾಮಗ್ರಿಗಳಿಗೆ ಸಹಾಯಧನ, ಜವಳಿ ಹಾಗೂ ಸಿದ್ಧ ಉಡುಪು ವಲಯದ ಅಭಿವೃದ್ಧಿಗಾಗಿ ಹೊಸ ಜವಳಿ ನೀತಿ ಜಾರಿಗೆ ಬಜೆಟ್ನಲ್ಲಿ ಹಣ ಮೀಸಲಿಡಬೇಕಿತ್ತು. ಅಲ್ಲದೇ, ನೇಕಾರರಿಗೆ ರಿಯಾಯಿತಿ ದರದಲ್ಲಿ ನೂಲುಗಳನ್ನು ವಿತರಿಸಲು ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ತಾಲೂಕಿನ ನೇಕಾರ ಬಂಧುಗಳಿಂದ ವ್ಯಾಪಕವಾಗಿ ಕೇಳಿಬಂದಿವೆ.