Advertisement

7 ದಿನಕ್ಕೆ 10 ಕೋಟಿ ರೂ.; ಚರ್ಚೆ ಶೂನ್ಯ 

01:32 AM Feb 15, 2019 | |

ಬೆಂಗಳೂರು: ಏಳು ದಿನಗಳ ರಾಜ್ಯ ವಿಧಾನಮಂಡಲ ಅಧಿವೇಶನ ಈ ಬಾರಿ ಗದ್ದಲ, ಗಲಾಟೆಯಲ್ಲೇ ಅಂತ್ಯಗೊಂಡಿದ್ದು, 10 ಕೋಟಿ ರೂ. ವೆಚ್ಚವಾದರೂ ಪ್ರತಿಫ‌ಲ “ಶೂನ್ಯ’ ಎಂಬಂತಾಗಿದೆ.

Advertisement

ವಿಧಾನ ಮಂಡಲದ ಅಧಿವೇಶನಕ್ಕೆ ಒಂದು ದಿನಕ್ಕೆ 1.5 ಕೋಟಿ ರೂ. ಅಂದಾಜು ವೆಚ್ಚವಾಗುತ್ತದೆ. ಈ ಬಾರಿ ಏಳು ದಿನ ಅಧಿವೇಶನ ಸಮಾವೇಶಗೊಂಡಿದ್ದು, ಅದರಲ್ಲಿ ಅಧಿಕೃತ ಕಾರ್ಯಸೂಚಿಯಲ್ಲಿ ನಿಗದಿ ಪಡಿಸಿದ ವಿಷಯಗಳ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ. ಜತೆಗೆ, ರಾಜ್ಯದಲ್ಲಿ ಆವರಿಸಿರುವ ಬರ ಸೇರಿ ಇತರೆ ಯಾವುದೇ ಸಮಸ್ಯೆಗಳ ಬಗ್ಗೆಯೂ ಚರ್ಚೆಯಾಗಲಿಲ್ಲ.

ಶಾಸಕರು ಒಂದು ದಿನ ಕಲಾಪಕ್ಕೆ ಬಂದು ಸಹಿ ಹಾಕಿದರೆ, (ಚರ್ಚೆಯಲ್ಲಿ ಪಾಲ್ಗೊಳ್ಳದಿದ್ದರೂ) ಅವರಿಗೆ 2,500ರೂ.ಹಾಜರಾತಿ ವಿಶೇಷ ಭತ್ಯೆ ಪಡೆಯುತ್ತಾರೆ. ವಿಧಾನಸಭೆಯ ಸಚಿವಾಲಯದ ಸುಮಾರು 900 ಸಿಬ್ಬಂದಿ ಕಳೆದ ಹತ್ತು ದಿನಗಳಿಂದ ಅಧಿವೇಶನದ ವಿಶೇಷ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಈ ಕಾರ್ಯದಲ್ಲಿ ತೊಡಗಿಕೊಳ್ಳುವ ಪ್ರತಿಯೊಬ್ಬ ಸಿಬ್ಬಂದಿಗೂ ಪ್ರತಿ ದಿನ 750 ರೂ. ವಿಶೇಷ ಭತ್ಯೆ ನೀಡಲಾಗುತ್ತದೆ. ವಿಧಾನಸಭೆಯ ಅಧಿಕಾರಿಗಳ ಹೊರತಾಗಿ ಸರ್ಕಾರದ ವಿವಿಧ ಇಲಾಖೆಗಳ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುವ ಸುಮಾರು 3 ಸಾವಿರ ಸಿಬ್ಬಂದಿ ಅಧಿವೇಶನದ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ.

ಅವರಿಗೂ ಅಧಿವೇಶನದ ಸಂದರ್ಭದಲ್ಲಿ 300 ರೂ. ವಿಶೇಷ ಭತ್ಯೆ ನೀಡಲಾಗುತ್ತದೆ. ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡಿ ನಡೆಸುವ ಅಧಿವೇಶನದಲ್ಲಿ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಚರ್ಚೆಯಾಗದೇ ಶಾಸಕರ ಖರೀದಿ ವಿಷಯವೇ ಮಹತ್ವ ಪಡೆಯಿತು.

ರಾಜ್ಯದಲ್ಲಿ 156 ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ಜನ ಜಾನುವಾರುಗಳಿಗೆ ಕುಡಿಯುವ ನೀರು,ಮೇವಿನ ಸಮಸ್ಯೆ, ಸರ್ಕಾರ ಗೋ ಶಾಲೆ ತೆರೆಯದಿರುವುದು, ಬರ ಕಾಮಗಾರಿಯಡಿಯಲ್ಲಿ ನರೇಗಾ ಯೋಜನೆಯಲ್ಲಿ ಜನರಿಗೆ ಉದ್ಯೋಗ ನೀಡದಿರುವುದರಿಂದ ಬರ ಪೀಡಿತ ಪ್ರದೇಶಗಳ ಜನರು ಗುಳೆ ಹೋಗುತ್ತಿದ್ದಾರೆ. ಈ ಎಲ್ಲ ವಿಷಯಗಳ ಕುರಿತು ಗಂಭೀರ ಚರ್ಚೆಯಾಗುತ್ತದೆ ಎಂದುಕೊಂಡಿದ್ದ ರಾಜ್ಯದ ಜನತೆಯ ನಿರೀಕ್ಷೆ ಹುಸಿಯಾಗಿದೆ.

Advertisement

ಬಜೆಟ್‌ ಮೇಲೂ ಚರ್ಚೆಯಿಲ್ಲ: ರಾಜ್ಯದ ಜನರ ಮೇಲೆ ರಾಜ್ಯ ಸರ್ಕಾರ ಖರ್ಚು ಮಾಡುವ, ಆದಾಯ ಪಡೆಯುವ ಬಜೆಟ್‌ ಮೇಲೆ ಯಾವುದೇ ಚರ್ಚೆಯೂ ನಡೆಯಲಿಲ್ಲ. ರಾಜ್ಯಪಾಲರ ಭಾಷಣ, ಬಜೆಟ್‌ ಮಂಡನೆ, ಆಪರೇಷನ್‌ ಆಡಿಯೋ ವಿಚಾರದಲ್ಲಿನ ಆರೋಪ-ಪ್ರತ್ಯಾರೋಪಕ್ಕೆ ಸೀಮಿತವಾಯಿತು. ರಾಜ್ಯಪಾಲರ ಭಾಷಣದ ಮೇಲೂ ಚರ್ಚೆಯಾಗಲಿಲ್ಲ, 2,43 ಲಕ್ಷ ಕೋಟಿ ಮೊತ್ತದ ಬಜೆಟ್‌ ಮೇಲೂ ಚರ್ಚೆಯಾಗಲಿಲ್ಲ.

ಸಾರ್ವಜನಿಕರ ಕೋಟ್ಯಂತರ ರೂ. ಖರ್ಚು ಮಾಡಿ ಅಧಿವೇಶನ ನಡೆಸುತ್ತೇವೆ. ನಾವ್ಯಾರೂ ಇದನ್ನು ನಮ್ಮ ಜೇಬಿನಿಂದ ಹಾಕುವುದಿಲ್ಲ. ಸಭಾಧ್ಯಕ್ಷರೊಬ್ಬರೇ ಕಲಾಪ ನಡೆಸಲು ಮನಸು ಮಾಡಿದರೆ, ಸಾಧ್ಯವಾಗುವುದಿಲ್ಲ. ಜನರಿಂದ ಆಯ್ಕೆಯಾದ ಶಾಸಕರಿಗೂ ಚರ್ಚೆ ಮಾಡಬೇಕು ಎಂಬ ಬುದಿಟಛಿ ಬರಬೇಕು.
● ರಮೇಶ್‌ ಕುಮಾರ್‌, ವಿಧಾಸಭಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next