Advertisement

ಆರ್‌.ಆರ್‌.ನಗರ ಉಪಚುನಾವಣೆ : ಮತದಾರರೆಲ್ಲರಿಗೂ ಕೈಗವಸು

12:04 PM Oct 17, 2020 | Suhan S |

ಬೆಂಗಳೂರು: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾಕ್ರಮವಾಗಿ ಆರ್‌.ಆರ್‌. ನಗರ ಉಪಚುನಾವಣೆಯಲ್ಲಿ ಮತ ಚಲಾಯಿಸುವ ಪ್ರತಿ ಮತದಾರರಿಗೂ ಕೈಗವಸು ನೀಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಹೇಳಿದರು.

Advertisement

ಈ ಕುರಿತು ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ಮತ್ತು ನಗರ  ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಶುಕ್ರವಾರ ರಾಜರಾಜೇಶ್ವರಿನಗರದ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ಮತ ಎಣಿಕೆ ಕೇಂದ್ರ ಹಾಗೂ ಸ್ಟ್ರಾಂಗ್‌ ರೂಂಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿ ಮಂಜುನಾಥ್‌ ಪ್ರಸಾದ್‌, ಸೋಂಕು ತಡೆಗೆ ಮುಂಜಾಗ್ರತಾ ಕ್ರಮವಾಗಿ ಮತದಾನ ದಿನ ಮತ ಚಲಾಯಿಸಲು ಪ್ರತಿ ಮತದಾರನಿಗೆ ಒಂದೊಂದು ಕೈಗವಸು ನೀಡಲಾಗುವುದು. ಮತದಾರರು ಒಂದು ಕೈಗೆ ಗವಸು ಹಾಕಿಕೊಂಡು ರಿಜಿಸ್ಟರ್‌ನಲ್ಲಿ ಸಹಿ ಹಾಕಬೇಕು ಮತ್ತು ಇವಿಎಂ ಯಂತ್ರದಲ್ಲಿ ಬಟನ್‌ ಒತ್ತಿ ತಮ್ಮ ಮತ ಚಲಾಯಿಸಬೇಕು. ಮತದಾರರಪಟ್ಟಿಯಲ್ಲಿರುವ 4.62 ಲಕ್ಷ ಮತದಾರರು ಬಂದರೂ ಎಲ್ಲರಿಗೂ ಕೈಗವಸು ನೀಡಲಾಗುವುದು ಎಂದರು.

ಎಡ ಕೈಗವಸೂ ನೀಡುತ್ತೇವೆ ಮತ ಚಲಾಯಿಸಲು ಎಡ ಚರರು ಬಂದರೆ ಅವರಿಗೆ ಎಡ ಕೈಗವಸು ನೀಡುವ ವ್ಯವಸ್ಥೆಯನ್ನೂ ಮಾಡಲಾಗುವುದು. ಶಾಹಿ ಹಾಕಿದ ಮೇಲೆ ಕೈಗವಸು ಹಾಕಿಕೊಳ್ಳ ಬೇಕು. ಶಾಹಿ ಒಣಗುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆಯೇ ಅಥವಾ ಈ ಅವಧಿಯಲ್ಲಿ ಕೈಗವಸು ನೀಡಿ ನಿರ್ವಹಣೆ ಮಾಡುವುದು ಹೇಗೆ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಇದಕ್ಕೂ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಕೋವಿಡ್ ಸೋಂಕು ಭೀತಿ ಹಿನ್ನೆಲೆಯಲ್ಲಿಈ ಬಾರಿ 1 ಕೊಠಡಿಯಲ್ಲಿ 7 ಟೇಬಲ್‌ಗ‌ಳಂತೆ 4 ಕೊಠಡಿಗಳಲ್ಲಿ ಒಟ್ಟು 28 ಟೇಬಲ್‌ ಇರಿಸಿ ಮತ ಎಣಿಕೆ ಮಾಡಲಾಗುತ್ತದೆ. ಇದಕ್ಕಾಗಿ ವಿಶಾಲವಾದ ಸ್ಟ್ರಾಂಗ್‌ ರೂಂ ವ್ಯವಸ್ಥೆ ಮಾಡಿದ್ದು, 24 ಸುತ್ತಿನ ಮತ ಎಣಿಕೆ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿ ಮಧ್ಯಾಹ್ನ 12.30ರ ವೇಳೆಗೆ ಎಣಿಕೆ ಮುಗಿಯಲಿದೆ ಎಂದರು.

Advertisement

ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಮಾತನಾಡಿ, ಮತ ಎಣಿಕೆ ಕೇಂದ್ರ ಹಾಗೂ ಸ್ಟ್ರಾಂಗ್‌ ರೂಂ ಪರಿಶೀಲನೆ ನಡೆಸಲಾಗಿದ್ದು, ಚುನಾವಣೆ ದಿನ ಹಾಗೂ ಮತಎಣಿಕೆ ದಿನ ಅಗತ್ಯ ಪೊಲೀಸ್‌ ಬಂದೋ ಬಸ್ತ್ ಮಾಡಿಕೊಳ್ಳಲಿದ್ದೇವೆ. ಸ್ಟ್ರಾಂಗ್‌ ರೂಂಗೆ ಹಲವು ಸುತ್ತಿನ (ಮಲ್ಟಿಲೇಯರ್‌ ಸೆಕ್ಯೂರಿ) ರಕ್ಷಣ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಈ ವೇಳೆ ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ಜೆ.ಮಂಜುನಾಥ, ವಲಯ ಜಂಟಿ ಆಯುಕ್ತ ನಾಗರಾಜ್‌ ಹಾಗೂಹೆಚ್ಚುವರಿ ಪೊಲೀಸ್‌ ಆಯುಕ್ತ ಸೌಮೇಂದು ಮುಖರ್ಜಿ ಇತರರಿದ್ದರು.

4.62 ಲಕ್ಷ ಮತದಾರರು  :  ಕೇಂದ್ರ ಚುನಾವಣಾ ಆಯೋಗದಿಂದ ಈಗಾಗಲೇ ವೀಕ್ಷಕರು(ಅಬ್ಸರ್ವರ್‌) ಬಂದಿದ್ದು, ಶನಿವಾರ (ಅ.17) ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅ.19ರಂದು ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಈಗಾಗಲೇ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಿಸಿದ್ದು, ಮತದಾರರ ಪಟ್ಟಿಗೆ ಹೊಸದಾಗಿ 1,616 ಮತದಾರರು ಸೇರ್ಪಡೆಗೊಂಡಿದ್ದಾರೆ. ಒಟ್ಟು ಮತದಾರರ ಸಂಖ್ಯೆ4,62,027 ಏರಿಕೆಯಾಗಿದೆ ಎಂದರು. ನ.3ರಂದು ಮತದಾನ ನಡೆಯಲಿದ್ದು, ನ.10ರಂದು ಮತ ಎಣಿಕೆ ನಡೆಯಲಿದೆ. ಜ್ಞಾನಾಕ್ಷಿವಿದ್ಯಾನಿಕೇತನ ಶಾಲೆಯಲ್ಲಿ ಮತಎಣಿಕೆ ಕಾರ್ಯ ನಡೆಸಲು ಸಿದ್ಧತೆ ನಡೆದಿದೆ. ಒಟ್ಟು678 ಮತಗಟ್ಟೆಗಳಿದ್ದು,4 ಮತ ಎಣಿಕೆ ಕೇಂದ್ರ ಮಾಡಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next