ಬೆಂಗಳೂರು: ರೌಡಿಶೀಟರ್ ಶಿವಕುಮಾರ್ ಅಲಿಯಾಸ್ ರುದ್ರೇಶ್ ಸೇರಿದಂತೆ ಹತ್ತಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಮೂರು ವರ್ಷಗಳಿಂದ ತಮಿಳುನಾಡಿನ ತಿರುವಣ್ಣಾ ಮಲೈನಲ್ಲಿ ತಲೆಸಮರೆಸಿಕೊಂಡಿದ್ದ ರೌಡಿಶೀಟರ್ ಗೌತಮ್ ಅಲಿಯಾಸ್ ಗುಬೇಂದ್ರನನ್ನು ಹೊಸೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರೌಡಿಶೀಟರ್ ಶಿವಕುಮಾರ್ ಮತ್ತು ವೇಲು ಕುಟುಂಬದ ನಡುವೆ ಆಗಾಗ್ಗ ಗಲಾಟೆ ನಡೆಯುತ್ತಿತ್ತು. ಈ ವಿಚಾರವಾಗಿ 2005ರಲ್ಲಿ ವೇಲುವಿನ ಸಂಬಂಧಿ ಸುಬ್ರಹ್ಮಣ್ಯನನ್ನು ಶಿವಕುಮಾರ್ ಹತ್ಯೆಗೈದಿದ್ದ. ಇದಕ್ಕೆ ಪ್ರತೀಕಾರವಾಗಿ ವೇಲು ಮತ್ತು ಆತನ ಬೆಂಬಲಿಗರು ಶಿವಕುಮಾರ್ ಸಹೋದರ ಅಶ್ವತ್ಥನಾರಾಯಣ ಕೊಲೆ ಮಾಡಿದ್ದರು.
ನಂತರ ಜೈಲು ಸೇರಿದ್ದ ಶಿವಕುಮಾರ್ ಅಲಿಯಾಸ್ ರುದ್ರೇಶ್ ಜೈಲಿನಿಂದ ಬಿಡುಗಡೆಯಾಗಿ ಬರುತ್ತಿದ್ದಂತೆ, ವೈಯಕ್ತಿಕ ಕಾರಣಕ್ಕೆ ಯಲಹಂಕದ ಬಳಿ ನಿವೃತ್ತ ಎಸ್ಪಿ ತಿಮ್ಮಯ್ಯ ಅವರನ್ನು ಕಲ್ಲು ಎತ್ತಿ ಹಾಕಿ ದಾರುಣವಾಗಿ ಕೊಲೆಗೈದಿದ್ದ. ನಂತರ ವೇಲುನನ್ನು 2011ರಲ್ಲಿ ಕೊಲೆಗೈದು ಜೈಲು ಸೇರಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಜೈಲಿನಿಂದ ಬಿಡುಗಡೆಯಾಗಿದ್ದ ಶಿವಕುಮಾರ್ ಮತ್ತೆ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದ್ದ. ದೊಡ್ಡ ಪೊಲೀಸ್ ಅಧಿಕಾರಿಯನ್ನೆ ಹತ್ಯೆಗೈದಿದ್ದೇನೆ. ಅದೇ ರೀತಿ ವೇಲು ಕುಟುಂಬವನ್ನು ನಿರ್ನಾಮ ಮಾಡುತ್ತೇನೆಂದು ಹೇಳಿಕೊಳ್ಳುತ್ತಿದ್ದ. ಈ ವಿಚಾರ ತಿಳಿದ ವೇಲು ಸಂಬಂಧಿ ಷಣ್ಮುಗ, ಗೌತಮ್, ರಂಜಿತ್, ಸೈಲೆಂಟ್ ಸುನೀಲ್ ಹಾಗೂ ಮಾರ್ಕೆಟ್ ವೇಲು ಜತೆ ಸೇರಿಕೊಂಡು 2012ರ ಡಿ.9ರಂದು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಶಿವಕುಮಾರ್‌ನನ್ನು ಬರ್ಬರವಾಗಿ ಹತ್ಯೆಗೈದಿದ್ದರು.
ಈ ಪ್ರಕರಣದಲ್ಲಿ ಗೌತಮ್ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ. ನಂತರ ಆಗಾಗ್ಗೆ ಬೆಂಗಳೂರಿಗೆ ಬರುತ್ತಿದ್ದ ಗೌತಮ್ 2013ರಲ್ಲಿ ಕಬ್ಬನ್‌ಪಾರ್ಕ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಮೇಲೆ ರಿವಾಲ್ವಾರ್‌ನಿಂದ ಕೊಲೆಗೆ ಯತ್ನಿಸಿದ್ದ. ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕೊಲೆ ಯತ್ನ ಆರೋಪಡಿಯಲ್ಲಿ ಆತನನ್ನು ಬಂಧಿಸಲಾಗಿತ್ತು. ವಿಪರ್ಯಾಸವೆಂದರೆ ಈ ವೇಳೆ ಗೌತಮ್ ವಿರುದ್ಧ ಶಿವಕುಮಾರ್ ಕೊಲೆ ಪ್ರಕರಣ ಇರುವುದು ಅಂದಿನ ತನಿಖಾಧಿಕಾರಿಗಳಿಗೆ ಮಾಹಿತಿ ಇರಲಿಲ್ಲ.
ಈ ಹಿನ್ನೆಲೆಯಲ್ಲಿ ಆರೋಪಿ ಜಾಮೀನು ಪಡೆದು ನಾಪತ್ತೆಯಾಗಿದ್ದ. ಈತನ ವಿರುದ್ಧ ಎಸ್.ಜೆ.ಪಾರ್ಕ್, ಅಶೋಕ್‌ನಗರ, ತಿಲಕನಗರ ಸೇರಿದಂತೆ 8 ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ 10ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಈತನ ಬಂಧನಕ್ಕಾಗಿ ಸಂಘಟಿತ ಅಪರಾಧ ವಿಭಾಗದ ಎಸಿಪಿ ಎಚ್.ಎ.ಮಹದೇವಪ್ಪ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು ಎಂದು ಸಿಸಿಬಿಯ ಹಿರಿಯ ಪೊಲೀಸರು ತಿಳಿಸಿದ್ದಾರೆ.
ತರಕಾರಿ ಹಣಕ್ಕೆ ಬಂದಾಗ ಬಂಧನ
ತಿರುವಣಮಲೈನಲ್ಲಿ ಸಗಟು ತರಕಾರಿ ವ್ಯಾಪಾರ ಮಾಡುತ್ತಿದ್ದ ಆರೋಪಿ ಗೌತಮ್‌ಗೆ ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯ ತರಕಾರಿ ವ್ಯಾಪಾರಿ ಹಣ ಕೊಡಬೇಕಿತ್ತು. ಬಹಳ ದಿನಗಳಿಂದ ವ್ಯಾಪಾರಿ ಹಣ ಕೊಟ್ಟಿರಲಿಲ್ಲ. ಇದಕ್ಕೆ ಕೋಪಗೊಂಡಿದ್ದ ಗೌತಮ್ ಸಾಕಷ್ಟು ಬಾರಿ ಧಮ್ಕಿ ಕೂಡ ಹಾಕಿದ್ದಾನೆ.
ಆದರೆ, ಬೆಂಗಳೂರಿಗೆ ಬರಲು ಸಾಧ್ಯವಾಗದ್ದರಿಂದ ತರಕಾರಿ ವ್ಯಾಪಾರಿಯಿಂದ ಹಣ ಪಡೆಯುವ ಸಲುವಾಗಿ ಹೊಸೂರಿಗೆ ಕರೆಸಿಕೊಂಡಿದ್ದ. ಇದೇ ವೇಳೆ ಮೂರು ವರ್ಷಗಳಿಂದ ಗೌತಮ್‌ನ ಚಲನವಲನಗಳ ಬಗ್ಗೆ ನಿಗಾವಹಿಸಿದ್ದ ತಿರುವಣಮಲೈ ಪೊಲೀಸರು ನೀಡಿದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಯಿತು ಎಂದು ಸಿಸಿಬಿ ಮೂಲಗಳು ತಿಳಿಸಿವೆ.