Advertisement

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

09:56 AM Sep 17, 2024 | Team Udayavani |

ಬೆಂಗಳೂರು: ತನ್ನ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿದ ಯುವಕನನ್ನು ರೌಡಿಶೀಟರ್‌ವೊಬ್ಬ ನಡುರಸ್ತೆಯಲ್ಲೇ ಬೆತ್ತಲೆಗೊಳಿಸಿ ಹಲ್ಲೆ ಮಾಡಿ ಅಟ್ಟಹಾಸ ಮೆರೆದ ಘಟನೆಗೆ ಸಂಬಂಧಿಸಿ ರೌಡಿಶೀಟರ್‌ ಪವನ್‌ ಗೌಡನನ್ನು ಪೊಲೀಸರು ಮಂಗಳವಾರ (ಸೆ.17ರಂದು) ಮುಂಜಾನೆ ಬಂಧಿಸಿದ್ದಾರೆ.

Advertisement

ಕಾಮಾಕ್ಷಿ ಪಾಳ್ಯ ಠಾಣೆ ಪೊಲೀಸರು ರೌಡಿಶೀಟರ್‌ ಪವನ್‌ ಕೆಂಗೇರಿ ಬಳಿಯ ಉಲ್ಲಾಳದಲ್ಲಿದ್ದ ಮಾಹಿತಿ ಪಡೆದು ಬಂಧನಕ್ಕೆ ಮುಂದಾಗಿದ್ದಾರೆ. ಈ ವೇಳೆ ಆರೋಪಿ ಪವನ್‌ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದು, ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ರೌಡಿಶೀಟರ್‌ ಪವನ್‌ ಮತ್ತು ಆತನ ಸಹಚರರು, ಸುಂಕದಕಟ್ಟೆಯಲ್ಲಿ ಅರ್ಜುನ್‌ ಎಂಬ ಯುವಕನನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ.

ರೌಡಿಗಳ ವಿಕೃತ ವರ್ತನೆಯ ವಿಡಿಯೋ ವೈರಲ್‌ ಆಗಿದ್ದು, ಪೊಲೀಸರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೌಡಿಶೀಟರ್‌ ಆಗಿರುವ ಪವನ್‌, ತನ್ನ ಸಹಚರರ ಜತೆ ಸೇರಿ ಕೆಲ ದಿನಗಳ ಹಿಂದೆ ಸುಂಕದಕಟ್ಟೆ ಬಳಿ ಅರ್ಜುನ್‌ಗೆ ಬೆದರಿಸಿ ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿಸಿದ್ದಾನೆ. ನಂತರ ಪವನ್‌ ಮತ್ತು ಸಹಚರರು ಆತನಿಗೆ ಮನಸೋ ಇಚ್ಛೆ ಥಳಿಸಿದ್ದಾರೆ.

ಅರ್ಜುನ್‌, ಪ್ರಾಣ ಉಳಿಸಿಕೊಳ್ಳಲು ಬೆತ್ತಲಾಗಿಯೇ ಸಾಕಷ್ಟು ದೂರ ಓಡಿ ಹೋಗಿದ್ದಾನೆ. ಪವನ್‌ನ ಅಟ್ಟಹಾಸವನ್ನು ಸಹಚರರೇ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Advertisement

ಬಾತ್ಮಿದಾರನಾಗಿದ್ದ ಅರ್ಜುನ್‌: ಅರ್ಜುನ್‌ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ಬಾತ್ಮೀದಾರನಾಗಿದ್ದ. ಇನ್ನು ರೌಡಿಶೀಟರ್‌ ಪವನ್‌, ಸುಂಕದಕಟ್ಟೆಯಲ್ಲಿ ವಾಸವಾಗಿದ್ದಾನೆ. ಆತನ ವಿರುದ್ಧ ಕಾಮಾಕ್ಷಿಪಾಳ್ಯ, ರಾಜಗೋಪಾಲನಗರ ಠಾಣೆಯಲ್ಲಿ ಕೊಲೆ, ಡಕಾಯಿತಿ ಸೇರಿ ಹಲವು ಪ್ರಕರಣಗಳು ದಾಖಲಾಗಿವೆ.

ಅಲ್ಲದೆ, ರಾಜಗೋಪಾಲನಗರ ಠಾಣೆಯ ರೌಡಿಶೀಟರ್‌ ಆಗಿದ್ದಾನೆ. ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಪವನ್‌, ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಬಳಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಪವನ್‌, ಕಾಮಾಕ್ಷಿಪಾಳ್ಯ ಮತ್ತು ಸುಂಕದಕಟ್ಟೆ ಸುತ್ತಮುತ್ತ ಅಪರಾಧ ಕೃತ್ಯಗಳನ್ನು ಎಸಗುತ್ತಾ ರಾಜಾರೋಷವಾಗಿ ಓಡಾಡುತ್ತಿದ್ದ. ಪವನ್‌ ಮತ್ತು ಸಹಚರರಿಂದ ರೋಸಿ ಹೋಗಿದ್ದ ಸ್ಥಳೀಯರು ದೂರು ಕೊಟ್ಟರೂ ಪೊಲೀಸರು ಕಾನೂನು ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.

ಪವನ್‌, ಹುಡುಗರ ಗುಂಪು ಕಟ್ಟಿಕೊಂಡು ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ. ಆತನ ಉಪಟಳದ ಬಗ್ಗೆ ಅರ್ಜುನ್‌, ಇತ್ತೀಚೆಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದ. ಅದರಿಂದ ಕೆರಳಿದ್ದ ಪವನ್‌ ಮತ್ತು ಸಹಚರರ ಅರ್ಜುನ್‌ನನ್ನು ಸುಂಕದಕಟ್ಟೆಗೆ ಎಳೆದುಕೊಂಡು ಬಂದು ಕ್ರೌರ್ಯ ಮೆರೆದಿದ್ದಾನೆ. ಈ ಘಟನೆ ನಡೆದು ತಿಂಗಳು ಕಳೆದರೂ ಪೊಲೀಸರು ಪವನ್‌ ಮತ್ತು ಸಹಚರರ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಈ ಮಧ್ಯೆ ಪವನ್‌ ಮತ್ತು ಸಹಚರರು ವಿಶ್ವಾಸ್‌ ಎಂಬಾತನ ಮೇಲೆ ಭಾನುವಾರ ಹಲ್ಲೆ ನಡೆಸಿದ್ದಾರೆ. ವಿಶ್ವಾಸ್‌ ಕೂಡ ತನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದ ಎಂಬ ಕಾರಣಕ್ಕೆ ಪವನ್‌ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಸಹಚರರಿಂದಲೇ ವಿಡಿಯೋ ಬಹಿರಂಗ

ರೌಡಿಶೀಟರ್‌ ಪವನ್‌ ಮತ್ತು ಸಹಚರರು, ಭಾನುವಾರ ರಾತ್ರಿ ವಿಶ್ವಾಸ್‌ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆ ನಡೆದ ಕೆಲವೇ ಹೊತ್ತಿನ ಬಳಿಕ ತಿಂಗಳ ಹಿಂದೆ ಅರ್ಜುನ್‌ ಮೇಲೆ ಹಲ್ಲೆ ನಡೆಸಿದ್ದ ವಿಡಿಯೋ ಬಹಿರಂಗವಾಗಿದೆ. ರೌಡಿ ಪವನ್‌ ಸಹಚರರೇ ಈ ವಿಡಿಯೋ ಬಹಿರಂಗಪಡಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಸದ್ಯ ವಿಶ್ವಾಸ್‌ನಿಂದ ದೂರು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಹಲ್ಲೆಗೊಳಗಾಗಿದ್ದ ಅರ್ಜುನ್‌, ಘಟನೆ ನಡೆದು ತಿಂಗಳಾದರೂ ಏಕೆ ದೂರು ಕೊಟ್ಟಿರಲಿಲ್ಲ ಎಂಬುದು ಗೊತ್ತಿಲ್ಲ. ಪವನ್‌ ಮತ್ತು ಸಹಚರರ ಬಂಧನಕ್ಕೆ ಕ್ರಮ ಸೂಚಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್‌ ಪ್ರತಿಕ್ರಿಯಿಸಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next