ಬೆಂಗಳೂರು:ರೌಡಿಶೀಟರ್ ಲಕ್ಷ್ಮಣ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಯುವತಿಯೊಬ್ಬಳು ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದು, ಮಂಗಳವಾರ ಕೋರ್ಟ್ ಗೆ ಹಾಜರುಪಡಿಸಿದ್ದರು. ಆರು ಮಂದಿ ಆರೋಪಿಗಳಿಗೂ 1ನೇ ಎಸಿಎಂಎಂ ಕೋರ್ಟ್ ಹತ್ತು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ಮಾರ್ಚ್ 7ರಂದು ಮಹಾಲಕ್ಷ್ಮಿ ಲೇಔಟ್ ನಲ್ಲಿ ಹಾಡಹಗಲೇ ರೌಡಿ ಲಕ್ಷ್ಮಣನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ದೇವರಾಜ್, ಹೇಮಂತ್, ಕ್ಯಾಟ್ ರಾಜ, ರೂಪೇಶ್ ಚೇತನ್ ಹಾಗೂ ವರ್ಷಿಣಿಯನ್ನು ಕಳೆದ ರಾತ್ರಿ ಬಂಧಿಸಿದ್ದರು.
ಸುಂದರಿಯ ಸ್ಕೆಚ್ ಗೆ ರೌಡಿ ಲಕ್ಷ್ಮಣ ಬಲಿ?
ರೌಡಿಶೀಟರ್ ಲಕ್ಷ್ಮಣ ಕೊಲೆಯ ಹಿಂದೆ ವರ್ಷಿಣಿ ಕೈವಾಡ ಇದ್ದಿರುವುದನ್ನು ಪೊಲೀಸರು ತನಿಖೆ ವೇಳೆ ಪತ್ತೆಹಚ್ಚಿದ್ದಾರೆ. ಲಂಡನ್ ನ ಕೇಂಬ್ರಿಡ್ಜ್ ವಿವಿಯಲ್ಲಿ ಎಂಎಸ್ (ಸೈಕಾಲಜಿ) ವಿದ್ಯಾರ್ಥಿನಿಯಾಗಿದ್ದ ವರ್ಷಿಣಿ ರೌಡಿ ಲಕ್ಷ್ಮಣ ಜೊತೆ ಸಂಪರ್ಕದಲ್ಲಿದ್ದಳು. ಊರಿನಲ್ಲಿದ್ದುಕೊಂಡೇ ಲಕ್ಷ್ಮಣನಿಗೆ ತಾನು ಲಂಡನ್ ನಲ್ಲಿಯೇ ಇದ್ದಿರುವುದಾಗಿ ನಂಬಿಸಿದ್ದಾಳೆ ಎನ್ನಲಾಗಿದೆ.
ಏತನ್ಮಧ್ಯೆ ರೂಪೇಶ್ ಎಂಬ ರೌಡಿ ಜೊತೆ ವರ್ಷಿಣಿ ಸಂಪರ್ಕದಲ್ಲಿದ್ದಳು. ಲಕ್ಷ್ಮಣನಿಂದ ಲಕ್ಷಾಂತರ ರೂಪಾಯಿ ಪಡೆದಿದ್ದ ವರ್ಷಿಣಿ ಆತನ ಕೊಲೆಗೆ ಸ್ಕೆಚ್ ಹಾಕಿದ್ದಳು. 4 ತಿಂಗಳ ಹಿಂದೆ ವರ್ಷಿಣಿ ತಂದೆಗೂ, ಲಕ್ಷ್ಮಣನಿಗೂ ಜಾಗದ ವಿಚಾರದಲ್ಲಿ ಗಲಾಟೆ ನಡೆದಿತ್ತು ಎಂದು ಹೇಳಲಾಗಿದೆ. ಅಲ್ಲದೇ ರೂಪೇಶ್ ನನ್ನು ಪ್ರೀತಿಸುತ್ತಿದ್ದ ವರ್ಷಿಣಿ ಲಕ್ಷ್ಮಣನ ಜೊತೆ ನಿಕಟ ಸಂಪರ್ಕ ಹೊಂದಿದ್ದಳು ಎಂದು ವರದಿ ತಿಳಿಸಿದೆ.
ಪೂರ್ವ ಯೋಜನೆಯಂತೆ ರೂಪೇಶ್ ಹಾಗೂ ಆತನ ಸಹಚರರು ಸ್ಕಾರ್ಪಿಯೋ ವಾಹನದಲ್ಲಿ ಬಂದು ಲಕ್ಷ್ಮಣನನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು. ಕೊಲೆ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.