Advertisement

ರೌಡಿ ಲಿಸ್ಟ್ ಪರಿಷ್ಕರಣೆ: ಚುನಾವಣೆ ಬಳಿಕ ಪುನರಾರಂಭ 

11:16 AM Apr 30, 2018 | Team Udayavani |

ಮಹಾನಗರ: ರೌಡಿ ಲಿಸ್ಟ್‌ ಪರಿಷ್ಕರಣೆಗೆ ಸರಕಾರ ಈಗಾಗಲೇ ಆದೇಶ ಹೊರಡಿಸಿದ್ದು, ಚುನಾವಣ ಪ್ರಕ್ರಿಯೆಯ ಕಾರಣ ಈಗ ಸ್ಥಗಿತಗೊಳಿಸಲಾಗಿದೆ. ಮೇ 15ರ ಬಳಿಕ ಈ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು ಎಂದು ಪೊಲೀಸ್‌ ಆಯುಕ್ತ ವಿಪುಲ್‌ ಕುಮಾರ್‌ ಹೇಳಿದರು.

Advertisement

ರವಿವಾರ ತಮ್ಮ ಕಚೇರಿಯಲ್ಲಿ ನಡೆದ ದಲಿತರ ಮಾಸಿಕ ಕುಂದುಕೊರತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಹಿಂದಿನ ರೌಡಿ ಲಿಸ್ಟ್‌ನಲ್ಲಿ ಇವರಲ್ಲಿ ನಿಷ್ಕ್ರಿಯರಾದವರು, ವಯಸ್ಸಾದವರು ಇದ್ದರೆ ಅಂಥವರ ಹೆಸರನ್ನು ತೆಗೆದು ಹಾಕಿ ಪರಿಷ್ಕೃತ ಪಟ್ಟಿ ತಯಾರಿಸುವ ಬಗ್ಗೆ ಚುನಾವಣೆ ಘೋಷಣೆ ಆಗುವ ಮೊದಲೇ ಸರಕಾರ ಆದೇಶ ಹೊರಡಿಸಿತ್ತು. ಘೋಷಣೆಯಾದ ಬಳಿಕ ಈ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದರು.

ಆಕಾಶಭವನದ ಪರಪಾದೆಯಲ್ಲಿ ಮತದಾನದ ಸಂದರ್ಭ ಕೆಲವು ಮಂದಿ ರೌಡಿಗಳು ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕುವಂತೆ ಬೆದರಿಕೆ ಹಾಕುವ ಸಾಧ್ಯತೆ ಇದೆ. ಈ ಹಿಂದಿನ ಚುನಾವಣೆಯ ಸಂದರ್ಭ ಇಂತಹ ಘಟನೆ ನಡೆದ ನಿದರ್ಶನಗಳಾಗಿವೆ ಎಂದು ದಲಿತ ಮುಖಂಡರೊಬ್ಬರು ಸಭೆಯಲ್ಲಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್‌, ಪರಪಾದೆ ಪರಿಸರದಲ್ಲಿ ಪೊಲೀಸ್‌ ಪಥ ಸಂಚಲನ ನಡೆಸಲಾಗುವುದು ಎಂದರು.

ಕುಲಶೇಖರದಲ್ಲಿ ಪ್ರಾಕ್ಸಿ ಮತದಾನ ನಡೆಯುವ ಸಾಧ್ಯತೆ ಇದೆ ಎಂದು ಇನ್ನೋರ್ವ ದಲಿತ ಮುಖಂಡರು ಹೇಳಿದರು.  ನಂತೂರು ವೃತ್ತದ ಗಾತ್ರವನ್ನು ಕುಗ್ಗಿಸಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾದರೂ ಅಲ್ಲಿ ಖಾಸಗಿ ಬಸ್‌ಗಳು ಬಹಳಷ್ಟು ಹೊತ್ತು ನಿಲ್ಲುವುದರಿಂದ ಸಂಚಾರಕ್ಕೆ ಆಗಿಂದಾಗ್ಗೆ ತಡೆ ಉಂಟಾಗುತ್ತದೆ. ಆದ್ದರಿಂದ ಇಲ್ಲಿನ ಟೈಮ್‌ ಕೀಪಿಂಗ್‌ ವ್ಯವಸ್ಥೆಯನ್ನು ಕದ್ರಿ ಮಲ್ಲಿಕಟ್ಟೆಗೆ ಸ್ಥಳಾಂತರಿಸಬೇಕು, ಸೈಂಟ್‌ ಆ್ಯಗ್ನೆಸ್‌ ಕಾಲೇಜು ಎದುರಿನ ವಾಸ್‌ ಬೇಕರಿ ಬಳಿ ರಸ್ತೆಯಲ್ಲಿಯೇ ವಾಹನ ನಿಲುಗಡೆ ಮಾಡಲಾಗುತ್ತಿದ್ದು, ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ದಲಿತ ನಾಯಕರೊಬ್ಬರು ಮನವಿ ಮಾಡಿದರು.

ಬೀಟ್‌ ಸದಸ್ಯರಾಗಲು ಬನ್ನಿ
ಹೊಸ ಪೊಲೀಸ್‌ ಬೀಟ್‌ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಬೀಟ್‌ ಸದಸ್ಯರಾಗಲು ಅವಕಾಶವಿದ್ದು, ದಲಿತ ಮುಖಂಡರು ತಮ್ಮ ಪೊಲೀಸ್‌ ಠಾಣೆ ವ್ಯಾಪ್ತಿಯ ಬೀಟ್‌ಗೆ ಸೇರಲು ಮುಂದೆ ಬರಬೇಕು ಎಂದು ಡಿಸಿಪಿ ಹನುಮಂತರಾಯ ಅವರು ತಿಳಿಸಿದರು.

Advertisement

ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮೂರು ದಲಿತ ದೌರ್ಜನ್ಯ ಪ್ರಕರಣಗಳು ಒಂದು ವರ್ಷದಿಂದ ಇತ್ಯರ್ಥವಾಗದೆ ಬಾಕಿ ಇವೆ ಎಂದು ದಲಿತ ಮುಖಂಡ ಆನಂದ ಎಸ್‌.ಪಿ. ಅವರು ಹೇಳಿದರು. ಉರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದ ಸೆಂಟ್ರಿಂಗ್‌ ಶೀಟ್‌ ಕಳವು ಪ್ರಕರಣಕ್ಕೆ ಸಂಬಂಧಿಸಿ ಅಮಾಯಕ ಯುವಕನೊಬ್ಬನಿಗೆ ಪೊಲೀಸರು ವಿಚಾರಣೆ ನಡೆಸಿದ್ದರಿಂದ ಈ ಯುವಕ ಮನೆ ಬಿಟ್ಟು ಹೋದ ಬಗ್ಗೆ ಯುವಕನ ತಾಯಿ ಸಭೆಯಲ್ಲಿ ಪ್ರಸ್ತಾವಿಸಿದರು. ಡಿಸಿಪಿ ಹನುಮಂತರಾಯ ಪ್ರತಿಕ್ರಿಯಿಸಿ ಉರ್ವ ಠಾಣೆಯ ಅಧಿಕಾರಿಗಳಿಗೆ ಆಕೆಯ ಮನೆಗೆ ತೆರಳಿ ಸಮಜಾಯಿಷಿ ಹೇಳುವಂತೆ ಸೂಚಿಸಿದರು. ಡಿಸಿಪಿ ಉಮಾ ಪ್ರಶಾಂತ್‌ ಸಭೆಯಲ್ಲಿ ಉಪಸ್ಥಿತರಿದ್ದರು. 

ಎಚ್ಚರಿಕೆ ನೀಡಲಾಗಿದೆ
ರೌಡಿಸಂ ಬಗ್ಗೆ ಈಗಾಗಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ರೌಡಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವರಿಗೆ ಎಚ್ಚರಿಕೆ ನೀಡಿ ಬಾಂಡ್‌ ಬರೆಸಲಾಗಿದೆ. ಇನ್ನೂ ಹೊಸತಾಗಿ ಯಾರಾದರೂ ರೌಡಿಗಳ ಬಗ್ಗೆ ಮಾಹಿತಿ ಇದ್ದರೆ ಕೊಡಿ ಎಂದು ದಲಿತ ಮುಖಂಡರಿಗೆ ಸಲಹೆ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next