Advertisement

ರೌಡಿಶೀಟರ್‌ ಮಂಜ, ಸ್ನೇಹಿತನ ಜೋಡಿ ಕೊಲೆ

01:06 AM Aug 27, 2019 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ರೌಡಿಗಳ ನಡುವಿನ ಕಾದಾಟ ಮತ್ತೆ ಸದ್ದು ಮಾಡಿದೆ. ಭಾನುವಾರ ರಾತ್ರಿ ಹಳೇ ವೈಷಮ್ಯಕ್ಕೆ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ರೌಡಿಶೀಟರ್‌ ಹಾಗೂ ಆತನ ಸ್ನೇಹಿತನನ್ನು ಜೆ.ಪಿ ನಗರದ ರಸ್ತೆಯಲ್ಲಿ ಕೊಲೆ ಮಾಡಿದೆ. ತಲಘಟ್ಟಪುರ ಪೊಲೀಸ್‌ ಠಾಣೆಯ ರೌಡಿಶೀಟರ್‌ ಮಂಜುನಾಥ್‌ (27) ಆತನ ಸ್ನೇಹಿತ ವರುಣ್‌ ರೆಡ್ಡಿ (24) ಕೊಲೆಯಾದವರು.

Advertisement

ಸಿನಿಮೀಯ ಮಾದರಿಯಲ್ಲಿ ಈ ಜೋಡಿ ಕೊಲೆ ನಡೆದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಜೆ.ಪಿ ನಗರ ಠಾಣೆ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ. 2017ರಲ್ಲಿ ತಲಘಟ್ಟಪುರದಲ್ಲಿ ನಡೆದ ಟ್ಯಾಬ್ಲೆಟ್‌ ರಘು ಕೊಲೆ ಪ್ರಕರಣದಲ್ಲಿ ಮಂಜ ಭಾಗಿಯಾಗಿದ್ದ. ಈ ವೈಷಮ್ಯದಿಂದಲೇ ಕೊಲೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ಕಾರಿನಲ್ಲಿ ಬೆನ್ನಟ್ಟಿ ಕೊಲೆ!: ರೌಡಿಶೀಟರ್‌ ಮಂಜ ಹಾಗೂ ವರುಣ್‌ ಸೋಮವಾರ ರಾತ್ರಿ 11.30ರ ಸುಮಾರಿಗೆ ಜೆ.ಪಿ ನಗರ ಎರಡನೇ ಹಂತದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಂತಕರು ಸ್ವಿಫ್ಟ್ ಕಾರಿನಲ್ಲಿ ಅವರನ್ನು ಹಿಂಬಾಲಿಸಿದ್ದಾರೆ. ಇದನ್ನು ಗಮನಿಸಿದ ಮಂಜ ವೇಗವಾಗಿ ಹೋಗುವಂತೆ ಬೈಕ್‌ ಓಡಿಸುತ್ತಿದ್ದ ವರುಣ್‌ಗೆ ಹೇಳಿದ್ದಾನೆ. ವೇಗವಾಗಿ ಹೋಗುವಾಗ 24ನೇ ಕ್ರಾಸ್‌ನಲ್ಲಿ ಔಟರ್‌ ರಿಂಗ್‌ ರಸ್ತೆಗೆ ಬೈಕ್‌ ತಿರುಗಿಸುವಾಗ ಹಿಂದಿನಿಂದ ದುಷ್ಕರ್ಮಿಗಳ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ.

ರಸ್ತೆಯ ಮೇಲೆ ಬಿದ್ದ ವರುಣ್‌ನ ಮೇಲೆ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ತಪ್ಪಿಸಿಕೊಂಡು ಓಡುತ್ತಿದ್ದ ಮಂಜನನ್ನು ಬೆನ್ನಟ್ಟಿ ಸುಮಾರು 200 ಮೀಟರ್‌ ದೂರದಲ್ಲಿ ಆತನನ್ನೂ ಕೊಲೆಗೈದು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ಕಾರು ನಿಯಂತ್ರಣ ತಪ್ಪಿ ಫ‌ುಟ್‌ಪಾತ್‌ ಮೇಲೆ ಹತ್ತಿದ ಕಾರು, ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಕಂಬ ಮುರಿದು ಬೀಳುವ ಸ್ಥಿತಿಯಲ್ಲಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

ಈ ಭೀಕರ ಕೊಲೆಗಳನ್ನು ನೋಡಿದ ಕೆಲ ಸ್ಥಳೀಯರು ಕೂಡಲೇ ಕಂಟ್ರೋಲ್‌ ರೂಂಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು, ವರುಣ್‌ ಹಾಗೂ ಮಂಜನನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ಅಧಿಕಾರಿ ತಿಳಿಸಿದರು.

Advertisement

ಮಂಜನ ಜತೆ ಹೋಗಿ ಕೊಲೆಯಾದ ವರುಣ್‌: ಬಿಟಿಎಂ ಲೇಔಟ್‌ನಲ್ಲಿ ವಾಸವಿದ್ದ, ಚಿಕ್ಕಬಳ್ಳಾಪುರ ಮೂಲದ ವರುಣ್‌ ರೆಡ್ಡಿ, ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದ. ಭಾನುವಾರ 3 ಗಂಟೆ ಸುಮಾರಿಗೆ ಸ್ನೇಹಿತರ ಜತೆ ಹೊರಗಡೆ ಹೋಗುತ್ತೇನೆ ಎಂದು ಹೇಳಿ ಬಂದಿದ್ದ ರೆಡ್ಡಿ, ಕನಕಪುರ ಮುಖ್ಯರಸ್ತೆ ಸಮೀಪವಿರುವ ಮಂಜನ ಮನೆಗೆ ಬಂದಿದ್ದ.

ವರುಣ್‌ ವಿರುದ್ಧ ಪೊಲೀಸ್‌ ಠಾಣೆಗಳಲ್ಲಿ ಯಾವುದೇ ಅಪರಾಧ ಕೇಸುಗಳಿಲ್ಲ. ಆದರೆ, ಮಂಜನ ಸ್ನೇಹದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವರುಣ್‌ಗೆ ಕೊಲೆ ಮಾಡಿದ ದುಷ್ಕರ್ಮಿಗಳ ಜತೆಗೂ ವೈಷಮ್ಯವಿರಲಿಲ್ಲ. ಮಂಜನ ಜತೆ ಇದ್ದುದ್ದರಿಂದ ಆತನ ಸಹಚರ ಎಂದು ಭಾವಿಸಿ ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ರೌಡಿಗಳ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಲು ಕಠಿಣ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ.
-ಭಾಸ್ಕರ್‌ರಾವ್‌, ನಗರ ಪೊಲೀಸ್‌ ಆಯುಕ್ತ

ಆರೋಪಿಗಳು ಹೊಂಚು ಹಾಕಿ ಜೋಡಿ ಕೊಲೆ ಕೃತ್ಯ ಎಸಗಿದ್ದಾರೆ.ಹಳೆ ವೈಷಮ್ಯಕ್ಕೆ ಕೊಲೆ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು ತನಿಖೆ ಮುಂದುವರಿದಿದೆ.
-ಡಾ.ರೋಹಿಣಿ ಕಟೋಚ್‌ ಸೆಪಟ್‌, ದಕ್ಷಿಣ ವಿಭಾಗದ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next