Advertisement

ಅಧಿಕಾರಿಗಳ ಮುಂದಿದೆ ಸಮಸ್ಯೆಗಳ ಸಾಲು ಸಾಲು!

12:10 PM Jan 07, 2017 | Team Udayavani |

ಹುಬ್ಬಳ್ಳಿ: ಪಡಿತರ ಸರಿಯಾಗಿ ವಿತರಣೆ ಮಾಡುತ್ತಿಲ್ಲ, ಪದೇ-ಪದೇ ಆಧಾರ ನಕಲು ಪ್ರತಿ ಪಡೆಯುತ್ತೀರಿ. ದಿನದ ದುಡಿಮೆ ಕಳೆದುಕೊಂಡು ಪಡಿತರಕ್ಕಾಗಿ ಕಾಯುವ ಸ್ಥಿತಿ ಬಂದಿದೆ. ಇದಕ್ಕೆ ಪರಿಹಾರ ಇಲ್ಲವೇ ಎಂಬ ಆತಂಕದ ಪ್ರಶ್ನೆಗಳನ್ನು ಸಾರ್ವಜನಿಕರು ಅಧಿಕಾರಿಗಳ ಮುಂದಿಟ್ಟರು. 

Advertisement

ಶುಕ್ರವಾರ ನಡೆದ ವಾರ್ಡ್‌ 45ರಲ್ಲಿ ಬರುವ ಪ್ರದೇಶಗಳ ಕುಂದು-ಕೊರತೆ ನಿವಾರಣಾ ಸಭೆಯಲ್ಲಿ ಆಹಾರ ಮತ್ತು ನಾಗರಿಕ ಇಲಾಖೆ ಸಹಾಯಕ ಉಪನಿದೇಶಕ ನಾಗರಾಜ ಬನವಾಸಿ, ಕೊಳಚೆ ನಿರ್ಮೂಲನಾ ಮಂಡಳಿಯ ಹನುಮಂತ ರೆಡ್ಡಿ, ಪಾಲಿಕೆ ವಲಯ ಸಹಾಯಕ ಆಯುಕ್ತ ಕಾಂಬ್ಳೆ ಅವರಿಗೆ ಸಾರ್ವಜನಿಕರಿಂದ ವಿವಿಧ ಪ್ರಶ್ನೆಗಳು ಎದುರಾದವು. 

ವಾರ್ಡ್‌ನ ವಿವಿಧ ಪ್ರದೇಶಗಳಲ್ಲಿ ಸರಿಯಾಗಿ ಕುಡಿಯುವ ನೀರು ಸರಬರಾಜು ಆಗುವುದಿಲ್ಲ, ಚರಂಡಿ ಸ್ವತ್ಛ ಮಾಡುವುದಿಲ್ಲ, ರಸ್ತೆಗಳು ಹಾಳಾಗಿವೆ ಎಂಬ ಹಲವಾರು ಸಮಸ್ಯೆಗಳನ್ನು  ಪಾಲಿಕೆ ಸದಸ್ಯ ಮತ್ತು ಅಧಿಕಾರಿಗಳಿಗೆ ಹೇಳಿದರು. ಮಹಿಳೆಯೊಬ್ಬರು ಕಳೆದ 4 ತಿಂಗಳಿಂದ ಪಡಿತರ ವಿತರಣೆ ಮಾಡುತ್ತಿಲ್ಲ,

ಕೂಪನ್‌ ಪಡೆಯಲು ಅಲೆದಾಡಿಸುತ್ತಿದ್ದಾರೆ ಹೊರತು ಪಡಿತರ ಮಾತ್ರ ವಿತರಣೆ ಮಾಡುತ್ತಿಲ್ಲ ಎಂಬ ಸಮಸ್ಯೆಗೆ ಉತ್ತರಿಸಿದ ಆಹಾರ ಇಲಾಖೆ ಅಧಿಕಾರಿ ನಾಗರಾಜ ಬನವಾಸಿ, ಕಳೆದ ಬಾರಿ ಪಡಿತರ ಚೀಟಿಗೆ ಆಧಾರ ಲಿಂಕ್‌ ಮಾಡಬೇಕು ಎಂದು ಮಾಹಿತಿ ನೀಡಿದಾಗ ಒಂದು ಕಾರ್ಡ್‌ಗೆ ಒಬ್ಬೊಬ್ಬರು, ಇಬ್ಬರು ಮಾತ್ರ ಆಧಾರ ಲಿಂಕ್‌ ಮಾಡಿಸಿಕೊಂಡಿದ್ದಾರೆ.

ಇದರಿಂದ ಇನ್ನುಳಿದ ಪಡಿತರದಾರರಿಗೆ ಪಡಿತರ ವಿತರಣೆ ಮಾಡಲು ಅವಕಾಶ ಸಿಗುತ್ತಿಲ್ಲ. ಆದ್ದರಿಂದ ಇದೀಗ ಮತ್ತೆ ಆಧಾರ ಕಾರ್ಡ್‌ ಲಿಂಕ್‌ ಮಾಡಲು ಸೂಚನೆ ನೀಡಿದ್ದು, ಆದ್ದರಿಂದ ಎಲ್ಲ ಪಡಿತರದಾರರು ಆಧಾರ ಲಿಂಕ್‌ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು. 

Advertisement

ಗವಿ ಓಣಿಯ ಮೋಗೇರ ಚಾಳನಲ್ಲಿ ಕುಡಿಯುವ ನೀರು, ಒಳಚರಂಡಿ ಸಮಸ್ಯೆಯಾಗಿದ್ದು ಮೂರು ವಾರ್ಡ್‌ಗಳು ಈ ಭಾಗಕ್ಕೆ ಕೂಡುತ್ತಿದ್ದು ಯಾರ ಬಳಿ ಕೆಲಸ ಮಾಡಿಸಿಕೊಳ್ಳಬೇಕು ಎಂದು ತಿಳಿಯುತ್ತಿಲ್ಲ. ಈ ಕುರಿತು ಗವಿ ಓಣಿಯನ್ನು ಒಂದೇ ವಾರ್ಡ್‌ಗೆ ಸೇರಿಸುವ ಮೂಲಕ ವಾರ್ಡ್‌ನ ಅಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು.

ಗವಿ ಓಣಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಶನಿವಾರ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರ ಸಮ್ಮುಖದಲ್ಲಿ ಭೇಟಿ ನೀಡಿ ಸಮಸ್ಯೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ಗಿರಣಿ ಚಾಳದ ನಿವಾಸಿಯೊಬ್ಬರು ನೀರಿನ ಬಿಲ್‌ ಮನ್ನಾ ಮಾಡಿ ದಿನನಿತ್ಯ ದುಡಿದುಕೊಂಡು ಜೀವನ ನಡೆಸುತ್ತಿರುವ ನಮಗೆ ಸಾವಿರಾರು ರೂ. ನೀರಿನ ಬಿಲ್‌ ಪಾವತಿಗೆ ಸಾಧ್ಯವಾಗದು ಎಂದರು. 

ಸೂರು ನೀಡಿ: ಗಿರಣಿ ಚಾಳ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ನಿವಾಸಿಗಳಿಗೆ  ಸರಿಯಾದ ಮನೆಗಳಿಲ್ಲ. ಆಶ್ರಯ ಯೋಜನೆಯಲ್ಲಿ ಸೂರು ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಬಡವರಿಗೆ 7.25 ಯೋಜನೆಯಡಿ ಹಾಗೂ ಪರಿಶಿಷ್ಟ ಜಾತಿ, ಪಂಗಡದವರಿಗೆ ವಿಶೇಷ ಯೋಜನೆಗಳಿದ್ದು, ಅಂಥವರು ಪಾಲಿಕೆ ನಲ್ಮ ಕಚೇರಿಗೆ ಭೇಟಿ ನೀಡಿ ಸೂಕ್ತ ದಾಖಲಾತಿಗಳನ್ನು ಹಾಜರುಪಡಿಸಿದರು. 

ಅಂಥವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದರು. ಇನ್ನು ಬಡವರು ನಿರುದ್ಯೋಗಿಗಳಿಗೆ ವಿವಿಧ ಯೋಜನೆಗಳಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು. ಪಾಲಿಕೆ ಸದಸ್ಯ ಮೋಹನ ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು. ಹನುಮಂತಪ್ಪ ಮಾನಪಲ್ಲಿ, ಮೇಘರಾಜ ಹಿರೇಮನಿ, ಕಾಲಕುಡಕಿ, ಕೃಷ್ಣಾ  ಜಕ್ಕಪ್ಪನವರ ಸೇರಿದಂತೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next