ಶುಕ್ರವಾರ ಗುಡ್ ಫ್ರೈಡೆ, ಶನಿವಾರ ವಾರಾಂತ್ಯ ಹಾಗೂ ರವಿವಾರ ರಜೆಯಾದ್ದರಿಂದ ವಿವಿಧ ಜಿಲ್ಲೆಗಳಿಂದ ಬಹಳಷ್ಟು ಭಕ್ತರು ಕರಾವಳಿಯ ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕದ್ರಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರೀ, ಉಡುಪಿ ಶ್ರೀಕೃಷ್ಣ ಮಠ, ಕೊಲ್ಲೂರು ಶ್ರೀ ಮುಕಾಂಬಿಕಾ ದೇಗುಲಗಳಿಗೆ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದರುಶನ ಪಡೆದು ಭೋಜನ ಪ್ರಸಾದ ಸ್ವೀಕರಿಸಿದ್ದಾರೆ.
ಕೊಕ್ಕಡದ ಸೌತಡ್ಕ ಶ್ರೀ ಮಹಾಗಣಪತಿ, ಮಣ್ಣಿನ ಹರಕೆಯ ಕ್ಷೇತ್ರ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ.
20 ಸಾವಿರ ಭಕ್ತರು
ಉಡುಪಿ: ಶ್ರೀಕೃಷ್ಣಮಠಕ್ಕೆ ಸುಮಾರು 20,000 ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ಬೆಳಗ್ಗಿನಿಂದ ರಾತ್ರಿವರೆಗೂ ಕೃಷ್ಣ ಮಠದ ಮುಂಭಾಗದಿಂದ ಗೀತಾ ಮಂದಿರದ ಬಳಿಯ ಬಿರ್ಲಾ ಛತ್ರದವರೆಗೂ ಸರದಿ ಸಾಲಿತ್ತು. ಮಧ್ಯಾಹ್ನ ಮತ್ತು ರಾತ್ರಿ ಸುಮಾರು 12,000 ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು.
ಎ. 7ರಿಂದ 9ರ ತನಕ ರಜಾ ದಿನವಾಗಿರುವುದರಿಂದ ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ಭಕ್ತರು ಇಲ್ಲಿಗೆ ಆಗಮಿಸಿದ್ದಾರೆ.
ದೇಗುಲ ಹಾಗೂ ಖಾಸಗಿ ವಸತಿಗ್ರಹಗಳು ಭರ್ತಿಯಾಗಿದ್ದು, ತಂಗಲು ವ್ಯವಸ್ಥೆ ಇಲ್ಲದೇ ಅನೇಕ ಭಕ್ತರು ದೇಗುಲದ ಹೊರಾವರಣ, ಅಭಯಾರಣ್ಯದ ಪ್ರದೇಶಗಳನ್ನು ಆಶ್ರಯಿಸಬೇಕಾಯಿತು. ದೇಗುಲದ ವಾಹನ ನಿಲುಗಡೆ ಜಾಗವು ಭರ್ತಿಯಾಗಿದ್ದರಿಂದ ಅನೇಕ ಭಕ್ತರು ವಸತಿ ಗ್ರಹ ಅಲ್ಲದೇ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆಗೊಳಿಸಿದ್ದರಿಂದ ಸುಗಮ ವಾಹನ ಸಂಚಾರಕ್ಕೆ ತೊಡಕಾಯಿತು.
ಮಾರಣಕಟ್ಟೆ
ದೇಗುಲದಲ್ಲಿ ಭಕ್ತಸಾಗರ
ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದಲ್ಲಿ ಎ. 7ರಂದು ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಶ್ರೀದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ಅನುವಂಶೀಯ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ, ಸಿಬಂದಿ ಭಕ್ತರ ಅನಾಯಾಸ ದರ್ಶನಕ್ಕೆ ಸಹಕರಿಸಿದರು.
Advertisement