Advertisement

‘ದೇಶಕ್ಕಾಗಿ ನಿಮ್ಮ ಮನೆ ನಾಯಿಯೂ ಸತ್ತಿಲ್ಲ’ಎಂದ ಖರ್ಗೆ ಕ್ಷಮೆಗೆ ಬಿಜೆಪಿ ಆಗ್ರಹ

03:49 PM Dec 20, 2022 | Team Udayavani |

ಹೊಸದಿಲ್ಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಹೇಳಿಕೆ ಕುರಿತಂತೆ ಇಂದು ಸಂಸತ್ತಿನಲ್ಲಿ ಭಾರೀ ಗದ್ದಲ ನಡೆಯಿತು. ಖರ್ಗೆ ಅವರು ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.

Advertisement

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು “ಭಾರತ್ ತೋಡೋ (ಭಾರತವನ್ನು ವಿಭಜಿಸಿ)” ಎಂದು ಲೇವಡಿ ಮಾಡಿದ್ದಕ್ಕಾಗಿ ಬಿಜೆಪಿಗೆ ತಿರುಗೇಟು ನೀಡುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿಕೆ ನೀಡಿದ್ದರು.

“ನಿಮ್ಮ ಮನೆಯ ನಾಯಿಯಾದರೂ ದೇಶಕ್ಕಾಗಿ ಸತ್ತಿದೆಯೇ? ಆದರೂ, ಅವರು (ಬಿಜೆಪಿ) ದೇಶಭಕ್ತರೆಂದು ಹೇಳಿಕೊಳ್ಳುತ್ತಾರೆ. ನಾವು ಏನನ್ನಾದರೂ ಹೇಳಿದರೆ ನಮ್ಮನ್ನು ದೇಶದ್ರೋಹಿ ಎಂದು ಕರೆಯಲಾಗುತ್ತದೆ” ಎಂದು ಖರ್ಗೆ ರಾಜಸ್ಥಾನದ ಅಲ್ವಾರ್ ನಲ್ಲಿ ಹೇಳಿದ್ದರು.

ಕಾಂಗ್ರೆಸ್ ಪಕ್ಷವು ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದೆ ಎಂದು ಹೇಳಿದ ಅವರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರಂತಹ ನಾಯಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದಿದ್ದರು.

ಇದನ್ನೂ ಓದಿ:ಎರಡನೇ ಹಾಡು ರಿಲೀಸ್‌ ಗೆ ʼಪಠಾಣ್‌ʼ ರೆಡಿ: ಮತ್ತೆ ಬೋಲ್ಡ್‌ ಲುಕ್‌ ನಲ್ಲಿ ಕಾಣಿಸಿಕೊಂಡ ದೀಪಿಕಾ

Advertisement

ಚೀನಾದೊಂದಿಗಿನ ಗಡಿ ಘರ್ಷಣೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡದಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. “ಬಿಜೆಪಿ ಸರ್ಕಾರವು ಹೊರನೋಟಕ್ಕೆ ಸಿಂಹದಂತೆ ಮಾತನಾಡುತ್ತಾರೆ, ಆದರೆ ನಿಜವಾಗಿಯೂ ಅವರು ಇಲಿಯಂತೆ ವರ್ತಿಸುತ್ತಾರೆ” ಎಂದು ವ್ಯಂಗ್ಯವಾಡಿದ್ದರು.

ಇಂದು ಸಂಸತ್ತಿನಲ್ಲಿ ಸದನ ಪ್ರಾರಂಭವಾದ ತಕ್ಷಣ ಬಿಜೆಪಿಯು ಖರ್ಗೆ ಕ್ಷಮೆಯಾಚನೆಗೆ ಆಗ್ರಹಿಸಿತು. ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ, ಅವರು ಆಕ್ಷೇಪಾರ್ಹ ಭಾಷೆ ಬಳಸಿದ ಮತ್ತು ಸುಳ್ಳು ಹರಡಲು ಪ್ರಯತ್ನಿಸಿದರು. ಅಲ್ವಾರ್ ನಲ್ಲಿ ಆಕ್ಷೇಪಾರ್ಹ ಭಾಷೆ ಬಳಸಿದ್ದಕ್ಕಾಗಿ ಅವರು ಕ್ಷಮೆಯಾಚಿಸಬೇಕು ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next