ಬೆಂಗಳೂರು: ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತವೆ ಎಂಬ ಭಯ ಸರ್ಕಾರಕ್ಕೆ ಕಾಡುತ್ತಿದ್ದು ಆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಮಾದರಿ ಶಾಲೆಗಳನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ನಡೆದ ಕನ್ನಡ ಶಾಲೆ ಉಳಿಸಿ:ಕನ್ನಡ ಬೆಳೆಸಿ ಕುರಿತ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ವರ್ಷವೇ 3 ಸಾವಿರ ಮಾದರಿ ಶಾಲೆಗಳನ್ನು ಮಾರ್ಪಾಟು ಮಾಡಿ ತರಗತಿ ಆರಂಭಿಸುವ ಆಲೋಚನೆ ಇದೆ ಎಂದು ತಿಳಿಸಿದರು.
ಮಾದರಿ ಶಾಲೆಗಳು ಎಂದರೆ ವಿಶೇಷತೆ ಇರುವುದಿಲ್ಲ. ಇರುವಂತಹ ಸವಲತ್ತುಗಳನ್ನು ಬಳಸಿಕೊಳ್ಳಲಾಗುವುದು. ಶಾಲೆಗಳಲ್ಲಿ ತರಗತಿಗಳು ಇರುವಷ್ಟು ಕೊಠಡಿ ಹಾಗೂ ಶಿಕ್ಷಕರನ್ನು ಒದಗಿಸಲಾಗುತ್ತದೆ. ಇಂಗ್ಲಿಷ್ ಕಲಿಕೆ ಬಗ್ಗೆ ಪ್ರತ್ಯೇಕ ತರಗತಿ ಇರಲಿದೆ. ನ್ಪೋಕನ್ ಇಂಗಿಷ್ ಕಲಿಕೆಗಾಗಿಯೇ ವಿಶೇಷ ಶಿಕ್ಷಕರು ಮಾದರಿ ಶಾಲೆಯಲ್ಲಿ ಇರಲಿದ್ದಾರೆ ಎಂದರು.
ರಾಜ್ಯದಲ್ಲಿ ಸುಮಾರು 47 ಸಾವಿರ ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿವೆ.3800 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳು ಇದ್ದಾರೆ. 562 ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿ ಕಲಿಯುತ್ತಿದ್ದಾರೆ. ಅಂತಹ ಶಾಲೆಗಳನ್ನು ಸರ್ಕಾರ ನಡೆಸುತ್ತಿದೆ. ಎರಡೂ ಕಿ.ಮೀ ವ್ಯಾಪ್ತಿಯಲ್ಲಿ ಒಂದು ಶಾಲೆ ಇರಬೇಕು ಎಂಬ ನಿಯಮ ಮತ್ತು ಜನಸಂಖ್ಯೆ ಇಳಿಕೆ ,ಮತ್ತು ಇಂಗ್ಲೀಷ್ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯ ಸಂಖ್ಯೆ ಕಡಿಮೆ ಆಗಿತ್ತು. ಆದರೆ ಈಗ ಕೋವಿಡ್ ನಂತರ ಸರ್ಕಾರ ಶಾಲೆಗಳ ದಾಖಲಾತಿ ಪ್ರಮಾಣ ಅಧಿಕವಾಗಿದೆ ಎಂದು ಹೇಳಿದರು.
ಕನ್ನಡ ಮಾಧ್ಯಮದಲ್ಲಿ ಓದಿದರೆ ನಮ್ಮ ಮಕ್ಕಳು ತಾಂತ್ರಿಕತೆ ಹಿಂದುಳಿಯಲಿದ್ದಾರೆ ಎಂಬ ಮನಸ್ಥಿತಿ ಪೋಷಕರಲ್ಲಿದೆ.ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜಯಿರಿಸಿದೆ. ದ್ವಿ ಭಾಷೆಯಲ್ಲಿ ಮಕ್ಕಳಿಗೆ ಪುಸ್ತಕ ಪದ್ಧತಿ ಆರಂಭಿಸಿದೆ. ಕನ್ನಡ ಜತೆಗೆ ಮಕ್ಕಳಿಗೆ ಇಂಗ್ಲಿಷ್ ಶಬ್ಧ ಕೂಡ ಪರಿಚಯ ಆಗಬೇಕು ಎಂಬ ಉದ್ದೇಶ ಕೂಡ ಇದೆ.ಸರ್ಕಾರ ಮುದ್ರಣ ಹೊರೆಯಾದರೂ ಕೂಡ ಆ ವೆಚ್ಚವನ್ನು ಸರಿದೂಗಿಸಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಸರ್ಕಾರ ಕನ್ನಡ ಶಾಲೆಯ ಮಕ್ಕಳಿಗೆ ಕೈಗೆತ್ತಿಕೊಳ್ಳಲು ಮುಂದಾಗಿದ್ದ 200 ಕೋಟಿ ರೂ. ಶಿಷ್ಯ ವೇತನದ ಬಗ್ಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜತೆಗೆ ಮಾಹಿತಿ ಪಡೆದು ಮುಖ್ಯಮಂತ್ರಿಯೊಂದಿಗೆ ಸಮಾಲೋಚನೆ ನಡೆಸುವುದಾಗಿ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಸಾಹಿತಿ ಎಸ್.ಎಲ್.ಭೈರಪ್ಪ ಸೇರಿದಂತೆ ಮತ್ತತಿರರು ಉಪಸ್ಥಿತರಿದ್ದರು.