Advertisement

ಉತ್ತರ ಕರ್ನಾಟಕದ ಮನೆ ಮನೆಯಲ್ಲೂ ರೊಟ್ಟಿ ಹಬ್ಬದ ಸಂಭ್ರಮ

09:20 PM Aug 12, 2021 | Team Udayavani |

ಕೊಪ್ಪಳ: ಉತ್ತರ ಕರ್ನಾಟಕದ ವಿಶೇಷ ಹಬ್ಬ ಎಂದೆನಿಸಿದ ರೊಟ್ಟಿ ಹಬ್ಬವು ಜಿಲ್ಲಾದ್ಯಂತ ಕೋವಿಡ್‌ ಮಧ್ಯೆ ಸಂಭ್ರಮದಿಂದಲೇ ಜರುಗಿತು. ನಗರ ಸೇರಿ ಗ್ರಾಮೀಣ ಪ್ರದೇಶದಲ್ಲೂ ಮನೆ ಮನೆಯಲ್ಲಿ ನಾರಿಯರು ಎಳ್ಳು ರೊಟ್ಟಿ, ಶೇಂಗಾ ಪುಡಿ, ಕಾಳು, ಬದನೆ ಪಲ್ಲೆಯೊಂದಿಗೆ ಅಕ್ಕಪಕ್ಕದ ಮನೆಯವರೊಂದಿಗೆ ರೊಟ್ಟಿಗಳ ವಿನಿಮಯ ಮಾಡಿಕೊಂಡು ರೊಟ್ಟಿ ಹಬ್ಬ ಆಚರಿಸಿದರು.

Advertisement

ಎರಡು ವರ್ಷಗಳಿಂದ ಇಡೀ ಜಗತ್ತಿನಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸಿ ಒಬ್ಬರ ಮನೆಗೆ ಒಬ್ಬರು ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಬ್ಬ ಹರಿದಿನಗಳ ಸಂಭ್ರಮ ಮಂಕಾಗಿದೆ. ಆದರೆ ಕೋವಿಡ್‌ ಎರಡನೇ ಅಲೆ ನಿಯಂತ್ರಣದ ಬಳಿಕ ಸರ್ಕಾರವು ಕೆಲ ವಿನಾಯತಿ ನೀಡಿದ್ದು, ಜನತೆ ಸಹಜ ಸ್ಥಿತಿಗೆ ಮರಳುವಂತೆ ಮಾಡಿದೆ. ಈ ಮಧ್ಯೆಯೂ ಕೊರೊನಾ ಮೂರನೇ ಅಲೆ ಭೀತಿ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಎರಡು ವರ್ಷಗಳಿಂದ ಹಬ್ಬದ ಸಂಭ್ರಮವನ್ನೇ ಮರೆತಿದ್ದ ಜಿಲ್ಲೆಯ ಜನರು ನಾಗರ ಪಂಚಮಿಯಲ್ಲಿನ ರೊಟ್ಟಿ ಹಬ್ಬವನ್ನು ಜಿಲ್ಲಾದ್ಯಂತ ಸಂಭ್ರಮ, ಸಡಗರದಿಂದಲೇ ಆಚರಣೆ ಮಾಡಿದ್ದು ಕಂಡುಬಂತು. ಹಬ್ಬ ಬರುವ ಮೊದಲೇ ಮನೆ ಮನೆಯಲ್ಲಿನ ಮಹಿಳೆಯರು ಹದಿನೈದು ದಿನ ಮುಂಚಿತವಾಗಿ ಎಳ್ಳು ರೊಟ್ಟಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಅರಿಶಿನ ರೊಟ್ಟಿ ಹೀಗೆ ನಾನಾ ಬಗೆಯ ರೊಟ್ಟಿಗಳನ್ನು ತಟ್ಟಿಟ್ಟುಕೊಂಡಿದ್ದರು.

ರೊಟ್ಟಿ ಹಬ್ಬದ ದಿನದಂದು ಮನೆಯಲ್ಲಿ ಬದನೆಕಾಯಿ, ಹಿರೇಕಾಯಿ, ಸೌತೆಕಾಯಿ ಪಲ್ಲೆ, ಚವಳೆಕಾಯಿ ಪಲ್ಲೆ, ಹೆಸರು, ಮಡಿಕೆ, ಅಲಸಂದಿ ಕಾಳು, ಶೇಂಗಾ, ಗುರೆಳ್ಳು, ಅಗಸೆ ಪುಡಿಯನ್ನು ಸಿದ್ಧಪಡಿಸಿಟ್ಟುಕೊಂಡು ರೊಟ್ಟಿಗೆ ಅದೆಲ್ಲವನ್ನು ಬಡಿಸಿಕೊಂಡು ತಮ್ಮ ಓಣಿಯ, ಸ್ನೇಹ ಬಳಗಕ್ಕೆ, ಗ್ರಾಮದಲ್ಲಿ ಸಂಬಂಧಿಗಳ ಮನೆ ಮನೆಗೆ ತೆರಳಿ ಕೊಟ್ಟು ಅವರ ಮನೆಯ ರೊಟ್ಟಿಗಳನ್ನು ಪಡೆದು ರೊಟ್ಟಿ ಹಬ್ಬವನ್ನು ಆಚರಣೆ ಮಾಡಿದರು.

ನಾಗರ ಪಂಚಮಿಯಲ್ಲಿನ ರೊಟ್ಟಿ ಹಬ್ಬವು ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷತೆ ಪಡೆದಿದೆ. ಒಟ್ಟಿನಲ್ಲಿ ಜಿಲ್ಲಾದ್ಯಂತ ರೊಟ್ಟಿಗಳ ಸಪ್ಪಳವೂ ಜೋರಾಗಿಯೇ ನಡೆಯಿತು. ಮನೆಯ ನಾರಿಯರು ತಮ್ಮ ಸ್ನೇಹ ಬಳಗಕ್ಕೆ, ಸಂಬಂಧಿ ಕರಿಗೆ, ಮನೆ ಪಕ್ಕದಲ್ಲಿನ ಆತ್ಮೀಯರಿಗೆ ರೊಟ್ಟಿಗಳ ವಿನಿಮಯ ಮಾಡಿ ನಾವೆಲ್ಲರೂ ಸಂತೋಷದಿಂದ ಹೀಗೆ ಇರೋಣ. ಸುಖಮಯ ಜೀವನ ನಡೆಸೋಣ. ಎಲ್ಲರೂ ಭಾವೈಕ್ಯತೆಯಿಂದ ಬಾಳ್ಳೋಣ ಎನ್ನುವ ಸಂದೇಶ ಸಾರುವ ಮೂಲಕ ರೊಟ್ಟಿಯ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next