Advertisement

ಭಕ್ತರ ಬಾಯಲ್ಲಿ ನೀರುಣಿಸುವ ರೊಟ್ಟಿ ಜಾತ್ರೆ

11:59 AM Feb 07, 2023 | Team Udayavani |

ಮುಂಡರಗಿ: ತಾಲೂಕಿನ ಡಂಬಳದ ಶ್ರೀ ತೋಂಟದಾರ್ಯ ಮಠದ ಶ್ರೀ ಮದರ್ದನಾರೀಶ್ವರರ ಮಹಿಮೆಯ ದ್ಯೋತಕವಾಗಿಯೇ ಪ್ರತಿವರ್ಷವು ಜಾತ್ರೆಯು ಸಾಂಗವಾಗಿ ನೆರವೇರುತ್ತದೆ. ಶ್ರೀ ಮದರ್ಧನಾರೀಶ್ವರರ 283ನೇ ಜಾತ್ರೆಯಂಗವಾಗಿ ಮಹಾರಥೋತ್ಸವದ ಮರುದಿನ ಫೆ. 7ರಂದು ಲಘು ರಥೋತ್ಸವವಾದ ನಂತರವೇ ನಡೆಯುವ ರೊಟ್ಟಿ ಜಾತ್ರೆಯೇ ವಿಶೇಷವಾಗಿದೆ.

Advertisement

ರೊಟ್ಟಿ ಜಾತ್ರೆ ಪ್ರಾರಂಭ:

ರೊಟ್ಟಿ ಜಾತ್ರೆಗೆ 46 ವರ್ಷಗಳ ಇತಿಹಾಸವಿದೆ. ಲಿಂ| ಶ್ರೀ ಜಗದ್ಗುರು ಡಾ| ತೋಂಟದ ಸಿದ್ಧಲಿಂಗ ಸ್ವಾಮಿಗಳು 1976-1977ರಲ್ಲಿ ಜಾತ್ರೆಯಲ್ಲಿ ರೊಟ್ಟಿ ದಾಸೋಹವನ್ನು ಮಾಡಬೇಕು ಎಂಬ ಸಂಕಲ್ಪ ಕೈಗೊಳ್ಳಲು ಕಾರಣವು ಇತ್ತು. ಭಕ್ತರು ಜಾತ್ರೆಯ ಸಂದರ್ಭದಲ್ಲಿ ಬಿದಿರಿನ ಬುಟ್ಟಿಗಳಲ್ಲಿ ತಂದು ಕೊಡುವ ರೊಟ್ಟಿಯನ್ನು ದಾಸೋಹಕ್ಕೆ ಪ್ರಸಾದವಾಗಿ ಬಳಸುತ್ತಿದ್ದರು. ಅದರ ಜೊತೆಯಲ್ಲೇ ಮಠದಿಂದಲೇ ಜೋಳದ ಹಿಟ್ಟನ್ನು ಭಕ್ತರಿಗೆ ಕೊಟ್ಟು ರೊಟ್ಟಿಯನ್ನು ಮಾಡಿಸಿ, ದಾಸೋಹಕ್ಕೆ ಪ್ರಸಾದವಾಗಿ ನೀಡತೊಡಗಿದರು. ಮೊದಲ ವರ್ಷ ಒಂದು ಚೀಲದ ಬಿಳಿ ಜೋಳದ ರೊಟ್ಟಿಯನ್ನು ಮಾಡಿಸಲಾಗಿತ್ತು. ಜಾತ್ರೆಗೆ ಬಂದ ಭಕ್ತರೆಲ್ಲರೂ ರೊಟ್ಟಿ ವಿವಿಧ ಕಾಯಿಪಲ್ಲೆಗಳಿಂದ ಕೂಡಿದ ಭಜ್ಜಿಯನ್ನು ಸವಿಯುವುದರ ಮೂಲಕ ರೊಟ್ಟಿ ಜಾತ್ರೆಗೆ ನಾಂದಿ ಹಾಡಿದರು.

ವಿಶೇಷ ಕರಿಂಡಿ:

5 ಕ್ವಿಂಟಲ್‌ ಸವತಿಕಾಯಿ, 5 ಕ್ವಿಂಟಲ್‌ ಗಜ್ಜರಿ, ಬೆಲ್ಲ, ಅರಿಸಿನ, ಉಪ್ಪು, ಶೇಂಗಾ ಎಣ್ಣೆಯಿಂದ ಒಗ್ಗರಣೆಯನ್ನು ಹಾಕಿ, ಗಡಿಗೆಯಲ್ಲಿ ಹಾಕಿರುವ ಕರಿಂಡಿಯನ್ನು ರೊಟ್ಟಿಯ ಜೊತೆಯಲ್ಲಿ ಚಪ್ಪರಿಸುವುದೇ ವಿಶೇಷ. ಬಿಳಿ ಜೋಳದ ರೊಟ್ಟಿ, ಭಜ್ಜಿ, ಕರಿಂಡಿಯ ಜೊತೆಯಲ್ಲಿ ಅಕ್ಕಿಯ ಬಾನವನ್ನು ಸವಿಯುವುದರಲ್ಲಿ ವಿಶೇಷತೆಯಿದೆ. 5 ಕ್ವಿಂಟಲ್‌ ಅಕ್ಕಿಯ ಅನ್ನಕ್ಕೆ, 300 ಲೀಟರ್‌ ಮೊಸರು, 80 ಕೆಜಿ ಬಳ್ಳೊಳ್ಳಿ, ಅಗಸಿ ಚಟ್ನಿಯನ್ನು ಕೂಡಿಸಿ ಮಾಡಿದ ಬಾನವು ರೊಟ್ಟಿಯೊಂದಿಗೆ ತಿನ್ನುವದೇ ರುಚಿಕರವಾದ ಸಂಗತಿಯಾಗಿದೆ. ಈ ವಿಶೇಷ ಬಾನವು ಮನುಷ್ಯನಲ್ಲಿ ರೋಗ ನಿರೋಧಕತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಕಳೆದ ಎರಡು ವರ್ಷಗಳಿಂದ ರೊಟ್ಟಿ ಜಾತ್ರೆಯು ಕೋವಿಡ್‌ನ‌ ಲಾಕ್‌ಡೌನಿನ ಕಾರಣದಿಂದ ಮಹಾರಥೋತ್ಸವಕ್ಕೆ ಸೀಮಿತವಾಗಿ ಸರಳವಾಗಿ ಆಚರಿಸಲಾಗಿತ್ತು. ಆದರೇ ಈ ಬಾರಿ ಜಾತ್ರೆಯಲ್ಲಿ ರೊಟ್ಟಿ, ಬಾನ, ಭಜ್ಜಿ, ಕರಿಂಡಿ, ಸಿಹಿಯ ಪ್ರಸಾದವನ್ನು ಭಕ್ತರು ಸವಿದು ಪಾವನವಾಗಲಿದ್ದಾರೆ.

Advertisement

ರೊಟ್ಟಿ ಜೊತೆ ಭಜ್ಜಿ

ಖಡಕ್‌ ಬಿಳಿ ಜೋಳದ ರೊಟ್ಟಿಯ ಜೊತೆಗೆ ವಿವಿಧ ಕಾಯಿಪಲ್ಯೆ, ಪುಂಡಿಪಲ್ಯೆ ಮತ್ತು ತರಹ ತಹರದ ಕಾಳುಗಳನ್ನು ಕೂಡಿಸಿ ಮಾಡಿದ ಪಲ್ಯೆ ಭಜ್ಜಿ ಎನಿಸಿಕೊಳ್ಳುತ್ತದೆ. ಬೆಳಗಾವಿಯಿಂದ
ತರಿಸಿದ ಕಾಯಿಪಲ್ಯೆಗಳಾದ ಮೆಂತೆ, ಪಾಲಕ, ಹುಂಚಿಕ್ಕ, ಪುಂಡಿ ಪಲ್ಯೆ, ನವಲಕೋಸು, ಕ್ಯಾಬೇಜ್‌, ಸವತಿಕಾಯಿ ,ಗಜ್ಜರಿ ಅಲ್ಲದೇ ಕಾಳುಗಳಾದ ಕಡಲೇ , ಹೆಸರುಕಾಳು, ಮಡಕಿಕಾಳು, ಅಲಸಂದಿ, ಹುಳ್ಳಿಕಾಳು, ತೊಗರಿಯನ್ನು ಕೂಡಿಸಿ ಹದವಾಗಿ ಮಾಡಿದ ಪಲ್ಯೆಯಾದ ಭಜ್ಜಿಯನ್ನು ಬಿಳಿಜೋಳದ ರೊಟ್ಟಿಯ ಜೊತೆಯಲ್ಲಿ ಸವಿಯುವುದೇ ಸೊಗಸಾದ ಅನುಭವವಾಗಿದೆ. ಪಲ್ಯೆ ತಯಾರಿಸುವಲ್ಲಿ ಪರಾಂಗತರಾಗಿರುವ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠರು ಹೇಳುತ್ತಾರೆ.

25 ಕ್ವಿಂಟಾಲ್‌ ಜೋಳದ ರೊಟ್ಟಿ

ಭಕ್ತರು ಮತ್ತು ಮಠದಿಂದ ಸಂಗ್ರಹಿಸಲಾದ ಬಿಳಿ ಜೋಳವನ್ನು ಗಿರಣಿಗೆ ಹಾಕಿಸಿ ಹಿಟ್ಟು ಮಾಡಿಸಿ ಡಂಬಳ, ಡೋಣಿ, ಪೇಠಾಲೂರು, ಕದಾಂಪುರ, ಮೇವುಂಡಿಯ ಭಕ್ತರ ಮನೆಗಳಿಗೆ ಜೋಳದ ಹಿಟ್ಟುಕೊಟ್ಟು ರೊಟ್ಟಿಯನ್ನು ತಯಾರಿಸಲಾಗುತ್ತದೆ. ಭಕ್ತರು ಮಠದವರು ಕೊಟ್ಟ ಹಿಟ್ಟಿನ ಜೊತೆಗೆ ತಮ್ಮದು ಪಾಲು ಎಂಬಂತೆ ಮನೆಯಲ್ಲಿರುವ ಹೆಚ್ಚುವರಿ ಹಿಟ್ಟನ್ನು ಸೇರಿಸಿಯೇ ಭಕ್ತರು ರೊಟ್ಟಿ ತಯಾರಿಸಿ (ಹೆಡಿಗೆಗಳು) ಬುಟ್ಟಿಗಳಲ್ಲಿ ರೊಟ್ಟಿಯನ್ನು ತುಂಬಿಕೊಂಡು ಮಠಕ್ಕೆ ತಂದು ಕೊಡುತ್ತಾರೆ. ಅಂದಾಜು 40 ಸಾವಿರ ರೊಟ್ಟಿಗಳು ತಯಾರಿಸಲಾಗಿದೆ.

ಮುಂಡರಗಿ ತಾಲೂಕಿನ ಡಂಬಳದ ತೋಂಟದಾರ್ಯ ಮಠದ ಶ್ರೀ ಮದರ್ಧನಾರೀಶ್ವರರ 283ನೇ ಜಾತ್ರಾ ಮಹೋತ್ಸವ ಅಂಗವಾಗಿ ಮಹಾರಥೋತ್ಸವವು ಸಹಸ್ರಾರು ಭಕ್ತರ ಜಯಘೋಷಗಳ ಮಧ್ಯೆ ಸಾಂಗವಾಗಿ ನೆರವೇರಿತು. ಮಹಾರಥೋತ್ಸವದ ಮುಂದೆ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀಮದರ್ಧನಾರೀಶ್ವರರ ಭಾವಚಿತ್ರ, ವಚನಾಮೃತದ ಕಟ್ಟುಗಳು, ಬಂಗಾರದ ಪಾದುಕೆಗಳು, ಕಳಸ, ರಾಜಗೊಂಡೆಗಳು ಇಟ್ಟುಕೊಂಡು ಸಾಗುತ್ತಾರೆ. ಮಹಾರಥೋತ್ಸವಕ್ಕೆ ಶ್ರೀ ಜಗದ್ಗುರು ಡಾ| ತೋಂಟದ ಸಿದ್ದರಾಮ ಸ್ವಾಮಿಗಳು ಚಾಲನೆ ನೀಡಿದರು. ಜಾತ್ರಾ ಕಮಿಟಿ ಪದಾಧಿಕಾರಿಗಳು, ಗ್ರಾಮದ ಗುರು-ಹಿರಿಯರು, ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ಸಹಸ್ರರಾರು ಭಕ್ತರು ಪಾಲ್ಗೊಂಡಿದ್ದರು

„ಹು.ಬಾ. ವಡ್ಡಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next