ಚಳಿಗಾಲ ಮತ್ತು ಮರಿಮಾಡುವ ಸಂದರ್ಭದಲ್ಲಿ ಈ ಹಕ್ಕಿ ಕಂದು ಬಣ್ಣದಿಂದ ಕೂಡಿರುತ್ತದೆ. Rosy Starling (Sturnus roseus ) M Myna+ ಗಂಡು-ಹೆಣ್ಣು ಒಂದೇ ರೀತಿ ಇರುತ್ತವೆ. ಇನ್ನೊಂದು ವಿಶೇಷ. ಬೇಸಿಗೆ, ವಸಂತಕಾಲದಲ್ಲಿ ಇದು ಅಚ್ಚ ಗುಲಾಬಿ ಬಣ್ಣದ ಗರಿ ಪಡೆಯುತ್ತದೆ. ಹಾರ್ಮೊನ್ ವ್ಯತ್ಯಾಸದಿಂದ ಹೀಗೆಲ್ಲಾ ದೇಹದ ಬಣ್ಣ ಬದಲಾಗುವುದು.
ಕಳೆದವಾರ ಅಸಮಾನ್ಯ ಸಾರಿಕಾ ಹಕ್ಕಿಯ ಬಗ್ಗೆ ತಿಳಿದೆವು. ಈ ಬಾರಿ ಇಂಥದೇ ಕುಟುಂಬಕ್ಕೆ ಸೇರಿದ ಗುಲಾಬಿ ಸಾರಿಕಾದ ಬದುಕನ್ನು ನೋಡೋಣ. ಇದರ ವೈಜ್ಞಾನಿಕ ಹೆಸರು ಸ್ಟರ್ನಿಸ್ ರೋಸಿಯಸ್. ನಸುಕೆಂಪು – ಮೈನಾ ಹಕ್ಕಿಯ ಗತ್ತು, ನಡಿಗೆ ಹಾಗೂ ಹಾರುವ ಲಕ್ಷಣ ಹೋಲುವುದರಿಂದ ಇದನ್ನು ಮೈನಾ ಸಾರಿಕಾ ಎಂದೂ ಕರೆಯುವುದಿದೆ. ಇದು 23 ಸೆಂ.ಮೀ. ದೊಡ್ಡದಿದೆ. ಬೆನ್ನು, ಹೊಟ್ಟೆ, ರೆಕ್ಕೆಯ ಬುಡ, ಎದೆಯ ಮೇಲ್ಭಾಗವು ತಿಳಿ ಗುಲಾಬಿ ಬಣ್ಣದಿಂದ ಕೂಡಿದೆ. ತಲೆ, ಕುತ್ತಿಗೆ , ರೆಕ್ಕೆಯ ಕೆಳಭಾಗ, ಬಾಲದ ಮೇಲ್ಭಾಗದಲ್ಲಿ ಕಪ್ಪು ಬಣ್ಣ ಹೊಳೆಯುತ್ತದೆ. ತಲೆ ಇಲ್ಲವೇ ಕುತ್ತಿಗೆಯವರೆಗೆ ಉದ್ದ ಗರಿಯಂಥ ಜುಟ್ಟು ಇದೆ.
ಉದ್ದವಾದ ಸದೃಢ ಕಾಲು, ಕಾಲಿನಲ್ಲಿ ಮುಂದೆ ಎರಡು, ಹಿಂದೆ ಒಂದು ಬೆರಳಿದೆ. ಬೆರಳಿನ ತುದಿಯಲ್ಲಿ ಚೂಪಾದ ಉಗುರು, ಸಾರಿಕಾ ಹಕ್ಕಿಗಳನ್ನು ಗುರುತಿಸಲು ನೆರವಾಗುತ್ತದೆ. ಇದರ ಕಾಲು ತಿಳಿ ಕಿತ್ತಳೆ, ಚುಂಚು ಗುಲಾಬಿ ಬಣ್ಣದಿಂದಿರುತ್ತದೆ. ಹೆಣ್ಣು ಹಕ್ಕಿ ಮರಿಯಾಗಿದ್ದಾಗ ಕಂದು ಬಣ್ಣದಿಂದ ಕೂಡಿರುತ್ತದೆ. ಬೆಳೆದು ಒಂದು ವರ್ಷ ಆದ ನಂತರ ಮೈ ಕಾಂತಿ ಗುಲಾಬಿ ಬಣ್ಣ , ತಿರುಗುತ್ತದೆ. ಗಂಡು ಹಕ್ಕಿಯ ಕಂದು ಬಣ್ಣ ದಿಂದ ಪೂರ್ಣ ಹಕಿಯ ಲಕ್ಷಣ ಪಡೆಯಲು 2 ವರ್ಷ ಬೇಕಾಗುತ್ತದೆ. ಗಂಡು-ಹೆಣ್ಣು ಎರಡೂ ಪ್ರೌಢಾವಸ್ಥೆ ತಲುಪಿದಾಗ ಪೂರ್ಣ ಹಕ್ಕಿಯ ಬಣ್ಣ ಬರುತ್ತದೆ. ಈ ಹಕ್ಕಿ ಚಳಿಗಾಲದಲ್ಲಿ ಮಸುಕು ವರ್ಣದಿಂದ ಕೂಡಿರುತ್ತದೆ. ಬೇಸಿಗೆ ಅಂದರೆ, ವಸಂತಕಾಲದಲ್ಲಿ ಇದರ ಪೂರ್ಣ ಲಕ್ಷಣ ಗೋಚರಿಸುವುದು. ಶಾಲಾ ಬಯಲು ಪ್ರದೇಶ, ಕೃಷಿ ಭೂಮಿ- ಅದರಲ್ಲೂ ಜೋಳ, ರಾಗಿ, ನವಣೆಯಂತಹ ಧಾನ್ಯ ಬೆಳೆವ ಪ್ರದೇಶದಲ್ಲಿ -ದೊಡ್ಡ ಗುಂಪಿನಲ್ಲಿ ಕಾಣಸಿಗುತ್ತದೆ. ಇದೊಂದು ವಲಸೆ ಹಕ್ಕಿ. ತಲೆಯ ಮೇಲಿರುವ ಕಪ್ಪು ಜುಟ್ಟು ಕುತ್ತಿಗೆಯವರೆಗೆ ಚಾಚಿಕೊಂಡಿರುತ್ತದೆ.
ಚಳಿಗಾಲ ಮತ್ತು ಮರಿಮಾಡುವ ಸಂದರ್ಭದಲ್ಲಿ ಈ ಹಕ್ಕಿ ಕಂದು ಬಣ್ಣದಿಂದ ಕೂಡಿರುತ್ತದೆ. ಗಂಡು-ಹೆಣ್ಣು ಒಂದೇ ರೀತಿ ಇರುತ್ತವೆ. ಇನ್ನೊಂದು ವಿಶೇಷ. ಬೇಸಿಗೆ, ವಸಂತಕಾಲದಲ್ಲಿ ಇದು ಅಚ್ಚ ಗುಲಾಬಿ ಬಣ್ಣದ ಗರಿ ಪಡೆಯುತ್ತದೆ. ಹಾರ್ಮೊನ್ ವ್ಯತ್ಯಾಸದಿಂದ ಹೀಗೆಲ್ಲಾ ದೇಹದ ಬಣ್ಣ ಬದಲಾಗುವುದು. ಆದರೆ ಈ ವ್ಯತ್ಯಾಸಕ್ಕೆ ಕಾರಣ ತಿಳಿದಿಲ್ಲ. ಜುಲೈ ಮತ್ತು ಆಗಸ್ಟ್ ಸಮಯದಲ್ಲಿ ಗುಂಪು, ಗುಂಪಾಗಿ ಭಾರತಕ್ಕೆ ವಲಸೆ ಬರುತ್ತದೆ.
ಏಪ್ರಿಲ್‌ನಲ್ಲಿ ಮತ್ತೆ ತನ್ನ ಇರುನೆಲೆಗೆ ವಾಪಸ್ಸಾಗುತ್ತದೆ. ಅಲ್ಲಿ ಮೊಟ್ಟೆ ಇಟ್ಟು ಮರಿಮಾಡಿ ಪುನಃ ಮುಂದಿನ ವರ್ಷ ವಲಸೆ ಬರುವುದು ರೂಢಿ. ಒಂದು ಗುಂಪಿನಲ್ಲಿ 500 ರಿಂದ 1000 ಹಕ್ಕಿಗಳು ಇರುತ್ತವೆ. ನವಣೆ, ಜೋಳ, ರಾಗಿ, ಸಜ್ಜೆ ಹೊಲಗಳಿಗೆ ಗುಂಪಾಗಿ ಲಗ್ಗೆ ಇಡುತ್ತದೆ. ಈ ಸಮಯದಲ್ಲಿ ರೈತರ ಕೆಂಗಣ್ಣಿಗೆ ಗುರಿಯಾದರೂ, ಈ ಹೊಲಗಳಿಗೆ ಮಾರಕವಾದ ಚಿಟ್ಟೆ, ಅವುಗಳ ಮೊಟ್ಟೆ ಮರಿಗಳನ್ನು ಅಗಾಧ ಸಂಖ್ಯೆಯಲ್ಲಿ ತಿಂದು, ದಾನ್ಯ ರಕ್ಷಿಸಿ- ಉಪಕಾರ ಮಾಡುವುದರಿಂದ ಬೆಳೆಯ ಸ್ವಲ್ಪ ಭಾಗ ತಿಂದರೂ ರೈತರು ಸಹಿಸಿಕೊಳ್ಳುತ್ತಾರೆ. ಇದಲ್ಲದೇ ಈ ಹಕ್ಕಿಗಳು ಪರಾಗಸ್ಪರ್ಶದಲ್ಲಿ ಬಹುಮುಖ್ಯ ಪಾತ್ರ ವಹಿಸುವುದರಿಂದ ರೈತರಿಗೆ ಈ ಹಕ್ಕಿಯ ಮೇಲೆ ಪ್ರೀತಿ ಜಾಸ್ತಿ.
ದವಸಧಾನ್ಯ, ಪೈರುಗಳಿರುವ ಹೊಲದ ಆಸು ಪಾಸು, ಆಲ, ಗೋಣಿ, ಬಸಿರು, ಮರಗಳಲ್ಲಿ ಹೂ ಬಿಟ್ಟಾಗ ಅದರ ಮಕರಂದ ಮತ್ತು ಹೂವಿನ ಎಳೆ ದಳಗಳನ್ನು , ಅವುಗಳಿಗೆ ಬರುವ ಅನೇಕ ಚಿಕ್ಕ ಕೀಟಗಳನ್ನು ಸಹ ತಿನ್ನುತ್ತವೆ. ಹಾಗಾಗಿ, ಈ ಮರಗಳಲ್ಲಿ ಮೊಗ್ಗು ಮತ್ತು ಹೂ ಅರಳಿರುವಾಗ, ಭಿನ್ನವಾದ ದನಿ ಮಾಡುತ್ತಾ, ಪರಸ್ಪರ ಸಂಭಾಷಿಸುತ್ತಾ ಗುಂಪಾಗಿರುವುದನ್ನು ಕಾಣಬಹುದು.
ಈ ಹಕ್ಕಿಗಳು ಸಾಮೂಹಿಕವಾಗಿ ಬದುಕುತ್ತವೆ. ಹಾರುವುದು, ಆಹಾರ ಸೇವನೆ, ಉಳಿಯುವುದು ಎಲ್ಲವೂ ಒಟ್ಟೊಟ್ಟಿಗೆ. ವೈರಿಗಳಿಗೆ ಎಚ್ಚರಿಕೆ ನೀಡಲು ಭಿನ್ನ ರೀತಿಯಲ್ಲಿ ಹಾರುವ ಮೂಲಕ ಆತಂಕ ಸೃಷ್ಟಿಸುತ್ತದೆ. ಈ ಕಾರಣದಿಂದ ಕಡು ವೈರಿಗಳಾದ ಶೈಕ, ಗಿಡುಗದಂಥ ಹಕ್ಕಿಗಳು ಕೂಡ ಹೆದರಿ ದೂರ ಸರಿಯುತ್ತವೆ. ನಮ್ಮಲ್ಲಿ ಈ ಹಕ್ಕಿಯನ್ನು ಪಾಂಡವಾಳಿ ಎನ್ನುತ್ತಾರೆ. ಬಾಬರನ ಪುಸ್ತಕದಲ್ಲಿ ಈ ಹಕ್ಕಿಯ ಉಲ್ಲೇಖ ಮತ್ತು ಚಿತ್ರವಿದೆ. ಇದರಿಂದ ಈ ಹಕ್ಕಿಯ ಪ್ರಾಚೀನತೆಯ ಅರಿವಾಗುತ್ತದೆ.
ಪಿ.ವಿ.ಭಟ್ ಮೂರೂರು