Advertisement

ಕಾಂಗ್ರೆಸ್‌ ತೊರೆದ ರೋಷನ್‌ಬೇಗ್‌ ತೆರೆಮರೆಗೆ

11:35 PM Dec 10, 2019 | Team Udayavani |

ಬೆಂಗಳೂರು: ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಮಾಜಿ ಸಚಿವ ರೋಷನ್‌ ಬೇಗ್‌ ವಿಫ‌ಲರಾಗಿದ್ದು, ಈಗ ಬಿಜೆಪಿ ತಮಗೆ ಭವಿಷ್ಯ ಕಲ್ಪಿಸುತ್ತಾ ಎನ್ನುವ ಆತಂಕದಲ್ಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ವಿರುದ್ಧ ಬಹಿರಂಗವಾಗಿ ಆರೋಪ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್‌ ನಾಯಕರ ಕೆಂಗಣ್ಣಿಗೆ ಗುರಿಯಾಗಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದರು.

Advertisement

ಬಳಿಕ, ಬಿಜೆಪಿ ನಾಯಕರು ಬಯಸದಿದ್ದರೂ ಅತೃಪ್ತ ಶಾಸಕ ರೊಂದಿಗೆ ಏಕಾಏಕಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಎಲ್ಲರ ಅಚ್ಚರಿಗೆ ಕಾರಣರಾಗಿದ್ದರು. ಅದೇ ಕಾರಣಕ್ಕೆ ಅನರ್ಹ ಶಾಸಕರ ಪಟ್ಟಿಗೆ ಸೇರಿ ಉಳಿದ ಬಂಡಾಯ ಶಾಸಕರೊಂದಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಪಡೆದು ಕೊಂಡರು. ಆದರೂ, ಐಎಂಎ ವಂಚನೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವುದನ್ನೇ ಮುಂದಿಟ್ಟು ಬಿಜೆಪಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದೇ ದೂರ ಇಟ್ಟಿತ್ತು. ಇದು ರೋಷನ್‌ ಬೇಗ್‌ರ ಮೊದಲ ಆಘಾತಕ್ಕೆ ಕಾರಣವಾಗಿತ್ತು.

ಈ ಬೆಳವಣಿಗೆ ನಡುವೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಲೋಚಿಸಿದರೂ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಲಹೆ ಮೇರೆಗೆ ಬಿಜೆಪಿ ಅಭ್ಯರ್ಥಿಗೆ ಬಹಿರಂಗ ಬೆಂಬಲ ನೀಡಿದ್ದರು. ಶಿವಾಜಿನಗರದ ಬಿಜೆಪಿ ಅಭ್ಯರ್ಥಿ ಶರವಣ ಅವರನ್ನು ಗೆಲ್ಲಿಸಿಕೊಂಡು ಬಂದರೆ, ವಿಧಾನ ಪರಿಷತ್‌ ಸದಸ್ಯರನ್ನಾಗಿಸಿ ಬಿಎಸ್‌ವೈ ಮಂತ್ರಿ ಮಾಡುತ್ತಾರೆ ಎಂಬ ಭರವಸೆ ನೀಡಿದ್ದರು ಎಂದು ಹೇಳಲಾಗಿತ್ತು. ಆದರೆ, ಶಿವಾಜಿನಗರ ಕ್ಷೇತ್ರದ ಮತದಾರರು ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ರನ್ನು ಗೆಲ್ಲಿಸುವ ಮೂಲಕ ಮುಸ್ಲಿಂ ಸಮುದಾಯ ಕ್ಷೇತ್ರದಲ್ಲಿ ಮತ್ತೋರ್ವ ನಾಯಕನನ್ನು ಕಂಡುಕೊಂಡಿದ್ದಾರೆ. ಈ ಗೆಲುವು ರೋಷನ್‌ ಬೇಗ್‌ ಅವರ ರಾಜಕೀಯ ಜೀವನಕ್ಕೆ ಮುಳುವಾಗುವಂತೆ ಮಾಡಿದೆ.

ಸ್ಪಂದನೆ ಅನುಮಾನ: ಕ್ಷೇತ್ರದಲ್ಲಿ ಬಿಜೆಪಿ ಸೋಲಿನಿಂದ ನಾಯಕರೂ ರೋಷನ್‌ ಬೇಗ್‌ ಅವರ ಬೇಡಿಕೆಗೆ ಸ್ಪಂದಿಸುವುದು ಅನುಮಾನ. ಅಲ್ಲದೇ ಮುಂದಿನ ದಿನಗಳಲ್ಲಿ ಅವರ ಪುತ್ರ ರುಮಾನ್‌ ಬೇಗ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕ್ಷೇತ್ರದ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಆದರೆ, ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿಯ ಮುಸ್ಲಿಂ ಅಭ್ಯರ್ಥಿಯನ್ನು ಜನರು ಬೆಂಬಲಿಸುತ್ತಾರಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಪಕ್ಷದ ನಾಯಕರ ವಿರುದ್ಧ ರೋಷನ್‌ಬೇಗ್‌ ಆಕ್ರೋಶದಲ್ಲಿ ಆಡಿದ ಮಾತಿನಿಂದ ತೆಗೆದುಕೊಂಡ ನಿರ್ಧಾರ ಅವರ ರಾಜಕೀಯ ಜೀವನವನ್ನೇ ಅಂತ್ಯಗೊಳಿಸುವ ಹಂತಕ್ಕೆ ತಂದು ನಿಲ್ಲಿಸಿದೆ ಎಂಬ ಮಾತುಗಳು ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿವೆ.

ಕೈ ನಲ್ಲಿ ಬದಲಾವಣೆ ನಿರೀಕ್ಷೆ: ಬಿಜೆಪಿಯಿಂದ ಸೂಕ್ತ ಸ್ಪಂದನೆ ದೊರೆಯದೆ ಹೋದರೆ, ಮತ್ತೆ ರೋಷನ್‌ ಬೇಗ್‌ ಕಾಂಗ್ರೆಸ್‌ ಕಡೆಗೆ ಮುಖ ಮಾಡುವ ಸಾಧ್ಯತೆ ಇದೆ ಎಂಬ ಮಾತೂ ಕೇಳಿ ಬರುತ್ತಿವೆ. ಮೂಲ ಕಾಂಗ್ರೆಸ್‌ ನಾಯಕರಿಗೆ ಜವಾಬ್ದಾರಿ ದೊರೆತರೆ, ಮತ್ತೆ ಕಾಂಗ್ರೆಸ್‌ ಕಡೆಗೆ ಮುಖ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next