Advertisement
ಗುಲಾಬಿ ಕೃಷಿಯಲ್ಲಿ ಇವರದು ಪಳಗಿದ ಕೈಗಳು. ಗಿಡಗಳ ಗುಣಲಕ್ಷಣದ ಆಧಾರದಲ್ಲಿಯೇ ಗಿಡಗಳಿಗೆ ಎಷ್ಟು ಗೊಬ್ಬರ ಹಾಕಬೇಕು? ಯಾವ ಔಷಧ ಸಿಂಪಡಿಸಬೇಕು ಎನ್ನುವುದನ್ನು ಅಳೆದುಬಿಡುತ್ತಾರೆ. ಇಪ್ಪತ್ತು ವರ್ಷಗಳ ಹಿಂದೆ ಇವರು ಗುಲಾಬಿ ಗಿಡಗಳನ್ನು ನಾಟಿ ಮಾಡಿದಾಗ ಸುತ್ತಮುತ್ತಲಿನವರು ಅಚ್ಚರಿ ತುಂಬಿದ ಕಣ್ಣುಗಳಲ್ಲಿ ಗಮನಿಸುತ್ತಿದ್ದರು.
Related Articles
Advertisement
ಗಿಡ ನಾಟಿ ಮಾಡಿದ ಒಂದುವರೆ ತಿಂಗಳಿನಿಂದ ಹೂವಿನ ಇಳುವರಿ ಆರಂಭವಾಗಿದೆ. ಮೂರು ತಿಂಗಳವರೆಗೆ ಮೊಳೆತ ಮೊಗ್ಗುಗಳನ್ನು ಚಿವುಟು ಹಾಕಿದ್ದಾರೆ. ಗಿಡಗಳ ಗಾತ್ರ ವೃದ್ಧಿಯಾಗಲು ಭವಿಷ್ಯದಲ್ಲಿ ಉತ್ತಮ ಹೂವಿನ ಇಳುವರಿ ಪಡೆಯಲು ಮೊಗ್ಗು ಚಿವುಟುವುದರಿಂದ ಸಾಧ್ಯವಾಗುತ್ತದೆ ಎನ್ನುವುದು ಇವರ ಅನುಭವದ ನುಡಿ. ಮೂರು ತಿಂಗಳ ನಂತರದಿಂದ ಹೂ ಕೊಯ್ಲು ಮಾಡಲು ಆರಂಭಿಸಿದ್ದಾರೆ. ಆರು ತಿಂಗಳವರೆಗೆ ಸಿಗುತ್ತಿರುವ ಹೂವಿನ ಪ್ರಮಾಣ ಕಡಿಮೆ ಇತ್ತು. ಒಂದು ಗಿಡದಿಂದ ತಿಂಗಳಿಗೆ 6-8 ಹೂ ದೊರೆಯುತ್ತಿದ್ದವು. ನಂತರದಲ್ಲಿ ಇಳುವರಿಯಲ್ಲಿ ಏರಿಕೆ ಕಂಡು ಬಂತು. ಚಳಿಗಾಲದಲ್ಲಿ ಹೂವಿನ ಇಳುವರಿ ಕಡಿಮೆ ಇರುತ್ತದೆ. ಈ ಅವಧಿಯಲ್ಲಿ ಬೂದು ರೋಗ ಬಾಧಿಸುವ ಸಾಧ್ಯತೆ ಜಾಸ್ತಿ.
ಔಷಧ ಸಿಂಪರಣೆ ಮಾಡಿ ನಿಯಂತ್ರಿಸಿಕೊಳ್ಳಬೇಕು. ಆಗಸ್ಟ್, ಸೆಪ್ಟೆಂಬರ್ ತಿಂಗಳ ವೇಳೆಗೆ ಹೂವಿನ ಇಳುವರಿಯಲ್ಲಿ ಏರಿಕೆ ಕಂಡು ಬರುತ್ತದೆ. ಹೂ ಆಕಾರ ಹಾಗೂ ಹೊಳಪಿನಲ್ಲಿಯೂ ಆಕರ್ಷಣೀಯವಾಗಿರುತ್ತದೆ. ಹೂವಿನ ಮಾರಾಟಕ್ಕೆ ಕಸರತ್ತು ಮಾಡುವ ಅಗತ್ಯರುವುದಿಲ್ಲ.
ಬಿಸಿಲಿನ ಪ್ರಖರತೆ ಇರದ ಹಾಗೂ ಅತಿ ಹೆಚ್ಚು ತಂಪಿನ ವಾತಾವರಣ ಇರದ ದಿನಗಳನ್ನು ನೋಡಿಕೊಂಡು ಗಿಡಗಳನ್ನು ಬುಡದಿಂದ ಎರಡುವರೆ ಅಡಿ ಎತ್ತರದಲ್ಲಿ ಕತ್ತರಿಸುತ್ತಾರೆ. ಕತ್ತರಿಸಿದ ಭಾಗಕ್ಕೆ ಸೆಗಣಿ, ಕೆಂಪುಮಣ್ಣು, ಬಾಸ್ಟಿನ್ ಪುಡಿಯ ಹದವಾದ ಮಿಶ್ರಣದ ಪೇಸ್ಟ್‌ಅನ್ನು ಲೇಪಿಸುತ್ತಾರೆ. ಈ ಕ್ರಮ ಅನುಸರಿಸುವುದರಿಂದ ಕತ್ತರಿಸಿದ ಗಿಡಗಳ ಭಾಗ ಕೊಳೆಯುವುದಿಲ್ಲ. ಹುಳ ಹುಪ್ಪಡಿಗಳು, ಕ್ರಿಮಿಗಳು ಗಿಡವನ್ನು ಮೇಯುತ್ತಾ ಒಳಗೆ ಹೋಗುವ ಪ್ರಮಾಣ ಕಡಿಮೆಯಾಗುತ್ತದೆ. ಅಲ್ಲದೇ ಇದರಿಂದಾಗಿ ತೇವಾಂಶ ಸಮಪ್ರಮಾಣದಲ್ಲಿ ದೊರೆತು ಉತ್ತಮ ಚಿಗುರು ಜಾಸ್ತಿ ಬರಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಮಹದೇವಪ್ಪ. ಗಿಡ ಕತ್ತರಿಸಿದ ಒಂದೂವರೆ ತಿಂಗಳಿನಿಂದ ಹೂವಿನ ಇಳುವರಿ ಆರಂಭವಾಗುತ್ತದೆ. ಹೊಸ ಚಿಗುರಿನಿಂದ ಮೊದಲ ತಿಂಗಳ ಅವಧಿಯಲ್ಲಿ ಪ್ರತಿ ಗಿಡದಿಂದ 5-6 ಹೂವು ಸಿಗುತ್ತದೆ. ಮೂರು ತಿಂಗಳ ನಂತರ 8-10 ಹೂವಿಗೆ ಏರಿಕೆಯಾಗುತ್ತದೆ. ಮೂರು ತಿಂಗಳ ನಂತರದಲ್ಲಿ ಒಂದು ಗಿಡದಿಂದ 10-15 ಹೂವುಗಳು ಸಿಗುವುದೂ ಇದೆ ಎನ್ನುತ್ತಾರೆ.
ಪ್ರತಿ ದಿನ ಬೆಳಗಿನ ಜಾವ ಹೂ ಕೊಯ್ಲಿನ ತರಾತುರಿ ಆರಂಭ. ದಿನವೊಂದಕ್ಕೆ 2,000-2,500 ಹೂ ಕೊಯ್ಲಿಗೆ ಸಿಗುತ್ತದೆ. ಕತ್ತರಿಸುವಲ್ಲಿ ಜಾಣತನ ಅನುಸರಿಸುತ್ತಾರೆ. ಹೂರುವ ಭಾಗದಿಂದ ಒಂದು ಅಡಿ ಕೆಳ ಭಾಗದಲ್ಲಿ ಕತ್ತರಿಸುತ್ತಾರೆ. ಹತ್ತು ಹೂವುಗಳನ್ನು ಒಂದೆಡೆ ಸೇರಿಸಿ ಗುಚ್ಚ ತಯಾರಿಸಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಧಾರವಾಡ ಮಾರುಕಟ್ಟೆಗೆ ತಾವೇ ಹೋಗಿ ಹೂವುಗಳನ್ನು ಕೊಟ್ಟು ಬರುತ್ತಾರೆ. ಪ್ರತಿ ಹೂವಿಗೆ ಐವತ್ತು ಪೈಸೆ ದರ ಸಿಗುತ್ತಿದೆ. ತಿಂಗಳಿಗೆ 75,000-80,000 ಹೂವು ವಿಲೇವಾರಿ ಮಾಡುತ್ತಿದ್ದು ನಲವತ್ತು ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಔಷಧ, ಗೊಬ್ಬರ, ಕೂಲಿ ಖರ್ಚು ಸೇರಿ ಮಾಸಿಕ 20,000 ವೆಚ್ಚವಾಗುತ್ತಿದೆ.
ಇವರ ಮೂರು ಎಕರೆ ಗುಲಾಬಿ ತೋಟದಲ್ಲಿ ಎರಡು ರೀತಿಯ ಮಣ್ಣು ಕಂಡು ಬರುತ್ತದೆ. ಎರಡು ಎಕರೆ ಕಪ್ಪು ಮಣ್ಣಿನ ಭೂಮಿ. ಒಂದೆಕರೆ ಕೆಂಪು ಮಿಶ್ರಿತ ಮಣ್ಣು. ಎರೆ ಮಣ್ಣಿನಲ್ಲಿ ಬೆಳೆದ ಗಿಡಗಳು ಹುಲುಸಾಗಿವೆ. ಎತ್ತರೆತ್ತರ ಬೆಳೆದಿದೆ. ಕೆಂಪು ಮಣ್ಣಿನ ಭೂಮಿಯ ಗಿಡಗಳಿಗೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ದಪ್ಪ ಕಾಂಡಗಳು, ಕಸುವು ಹೊಂದಿರುವ ಚಿಗುರು, ಎರಡು ಪಟ್ಟು ಹೆಚ್ಚಿನ ಇಳುವರಿ ಕಂಡುಬರುತ್ತಿದೆ. ಎರೆ ಮಣ್ಣಿನ ಗಿಡಗಳಿಗೆ ಗೊಬ್ಬರ ಹಾಕುವ, ಔಷಧ ಸಿಂಪಡಿಸುವ ಪ್ರಮಾಣವೂ ಕಡಿಮೆ ಎನ್ನುವುದು ಇವರ ಮಾತು.
ಬಯಲು ನಾಡಿನ ಬಯಲಿನಲ್ಲಿರುವ ಹೂವಿನ ತೋಟದಲ್ಲಿ ಇವರು ಮಲೆನಾಡಿನ ವಾತಾವರಣ ಸೃಷ್ಟಿಸಿದ್ದಾರೆ. ಬದುವಿನಲ್ಲಿ ಅಲ್ಲಲ್ಲಿ ತೆಂಗಿನ ಮರಗಳಿವೆ. ಸಾಗವಾನಿ ಮರಗಳು ಶಿಸ್ತು ಬದ್ದವಾಗಿ ಎದ್ದು ನಿಂತಿದೆ. 1992 ರಲ್ಲಿ ಅರಣ್ಯ ಇಲಾಖೆಯಿಂದ ಸಾಗವಾನಿ ಗಿಡಗಳನ್ನು ತಂದು ನಾಟಿ ಮಾಡಿದ್ದರು. ಎರಡು ದಿಕ್ಕಿನಿಂದಲೂ ಇಪ್ಪತ್ತೆ„ದು ಅಡಿ ಅಂತರದಲ್ಲಿ ಬೆಳೆದು ನಿಂತ ತೇಗದ ಮರಗಳು ತಂಪನೆಯ ವಾತಾವರಣ ಸೃಷ್ಟಿಸಿವೆ. ಬಿರು ಬಿಸಿಲಿನಲ್ಲಿಯೂ ಬಿಸಿಲಿನ ನೇರ ಹೊಡೆತ ಹೂವಿನ ಗಿಡಗಳಿಗಾಗದಂತೆ ತಡೆಯುತ್ತಿದೆ. ನೆರಳು ಗುಲಾಬಿ ಇಳುವರಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನೇನೂ ಬೀರಿಲ್ಲ ಎನ್ನುವ ಅಭಿಪ್ರಾಯ ಇವರದು. ಸಾಕಷ್ಟು ಜಮೀನು ಹೊಂದಿದ್ದರೂ ದಿನ ನಿತ್ಯ ಕಾಸು ಎಣಿಸಬಲ್ಲ ಮೂಲವಾದ ಹೂವಿನ ಕೃಷಿ ಪದ್ಧತಿ ಅನುಸರಿಸುತ್ತಿರುವ ಇವರ ಕೃಷಿ ಮಾದರಿ ಇತರರಿಗೆ ಮಾದರಿಯಾಗಿದೆ.
– ಕೋಡಕಣಿ ಜೈವಂತ ಪಟಗಾರ