ನವಿರಾದ ಪ್ರೀತಿ, ಹೊಟ್ಟೆ ತಣಿಸುವ ನಗು, ಮನಸೆಳೆಯುವ ಕಥೆ ಯೊಂದಿಗೆ ತುಳುವರ ಮನಗೆದ್ದ ರೂಪೇಶ್ ಶೆಟ್ಟಿ, ಈಗ ತುಳುನಾಡಿನ ಹಳ್ಳಿಗೆ ಹೆಜ್ಜೆ ಇಟ್ಟಿದ್ದಾರೆ. ಅಲ್ಲಿಯ ಕಥೆಯನ್ನೇ ಬಗಲಲ್ಲಿಟ್ಟು ಹೊಸ ಸಿನೆಮಾ ಮಾಡಲು ಹೊರಟಿದ್ದಾರೆ. ಈ ಪ್ರಯತ್ನಕ್ಕೆ ಕೋಸ್ಟಲ್‌ವುಡ್‌ನಲ್ಲಿ “ಜೈ’ಕಾರವೇ ಕೇಳಿಬಂದಿದೆ.
ವಿಶೇಷವೆಂದರೆ, ಹೊಸ ಹೊಸ ಕಥೆಯನ್ನು ಪ್ರೇಕ್ಷಕರಿಗೆ ನೀಡಿದ ರೂಪೇಶ್ ಶೆಟ್ಟಿ ಈ ಬಾರಿ ಚುನಾವಣೆ, ಪ್ರತಿಭಟನೆ ಎಂಬಿತ್ಯಾದಿ ವಿಷಯಗಳೊಂದಿಗೆ ತೆರೆ ಮೇಲೆ ಬರಲಿದ್ದಾರೆ. 5 ವರ್ಷದ ಹಿಂದೆ ಬಂದ “ಗಿರಿಗಿಟ್’, ಅನಂತರದ “ಗಮ್ಜಾಲ್’, “ಸರ್ಕಸ್’ ಮಾಡಿ ಸಕ್ಸಸ್ ಆದ ರೂಪೇಶ್ ಶೆಟ್ಟಿ ಈ ಬಾರಿ “ಜೈ’ ಎನ್ನಲು ಅಣಿಯಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಭಾಗದಲ್ಲಿ ಬರೋಬ್ಬರಿ 40 ದಿನ ಸಿನೆಮಾ ಶೂಟಿಂಗ್ ನಡೆಯಲಿದೆ. ಈ ಹಿಂದಿನ ಸಿನೆಮಾ ದಲ್ಲಿ ತೊಡಗಿಸಿಕೊಂಡ ಟೀಮ್ ಬಹುತೇಕ ಇದರಲ್ಲಿಯೂ ಇರಲಿದೆ.
ಮೊನ್ನೆ ತಾನೆ ಟೈಟಲ್ ರಿಲೀಸ್ ಆದ “ಜೈ’ ಸಿನೆಮಾ ಅಕ್ಟೋಬರ್‌ನಿಂದ ಶೂಟಿಂಗ್ ಆರಂಭಿಸಲಿದೆ. ಸಿನೆಮಾ ನಿರ್ಮಾಣದ ಎಲ್ಲ ಪ್ರಕ್ರಿಯೆ ಮುಗಿಸಿ ಫೆಬ್ರವರಿ-ಮಾರ್ಚ್ ವೇಳೆಗೆ ತೆರೆ ಕಾಣುವ ಸಾಧ್ಯತೆ ಇದೆ. ಇಲ್ಲಿಯವರೆಗೆ ಕಥೆಯ ಹೊರಗೆ ಕಾಮಿಡಿ ಬೆಸೆದ ರೂಪೇಶ್ ಈ ಬಾರಿ ಕಥೆಯ ಒಳಗೆ ಕಾಮಿಡಿ ಬೆರೆಸಿ ಹೊಸ ಗೆಟಪ್‌ನಲ್ಲಿ ತುಳು ಸಿನೆಮಾ
ಮಾಡುವ ಚಿಂತನೆ ನಡೆಸಿದ್ದಾರೆ. ಆರ್‌ಎಸ್ ಸಿನೆಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ “ಜೈ’ ತಯಾರಾಗು ತ್ತಿದೆ. ಪ್ರಸನ್ನ ಶೆಟ್ಟಿ ಬೈಲೂರು ಕತೆ-ಸಂಭಾಷಣೆ ರಚಿಸಿದ್ದಾರೆ. ಕೆಮರಾ ವಿನುತ್ ಕೆ., ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ, ಸಂಕಲನ ರಾಹುಲ್ ವಸಿಷ್ಠ, ನೃತ್ಯ ನವೀನ್ ಶೆಟ್ಟಿ ಆರ್ಯನ್ಸ್, ನಿರ್ಮಾಪಕರು ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ, ಸಹ ನಿರ್ಮಾ ಪಕರು ದೀಕ್ಷಿತ್ ಆಳ್ವ, ಎಕ್ಸಿಕ್ಯೂಟಿವ್ ಪ್ರೊಡ್ನೂಸರ್ ನವೀನ್ ಶೆಟ್ಟಿ.
“ಜೈ-ಒಯಿಕ್ಲಾ ಸೈ’ ಸಿನೆಮಾದಲ್ಲಿ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಸಹಿತ ಹಲವು ಕಲಾವಿದರಿದ್ದಾರೆ.
ಬಿಗ್‌ಬಾಸ್ ರೂಪೇಶ್ ಶೆಟ್ಟಿ ಈಗಾಗಲೇ ಕೋಸ್ಟಲ್‌ನಲ್ಲಿ ಮಿಂಚಿ, ಸ್ಯಾಂಡಲ್‌ವುಡ್ ದಾಟಿ ತಮಿಳಿನಲ್ಲಿ ಕಾಣಿಸಿಕೊಂಡಿದ್ದಾರೆ. “ಸನ್ನಿಧಾನಂ ಪೋಸ್ಟ್ ಆಫೀಸ್’ ಎಂಬ ಸಿನೆಮಾದಲ್ಲಿ ರೂಪೇಶ್ ಬಣ್ಣಹಚ್ಚಿದ್ದು ಕೆಲವೇ ದಿನಗಳಲ್ಲಿ ಅದು ರಿಲೀಸ್ ಆಗಲಿದೆ. ಇನ್ನು, ಕನ್ನಡದಲ್ಲಿ “ಅಧಿಪತ್ರ’ ಎಂಬ ಸಿನೆಮಾದಲ್ಲಿರುವ ರೂಪೇಶ್, ಮುಂದೆ ಬರುವ “ಕಾದಲ್’ ಕನ್ನಡ ಸಿನೆಮಾದಲ್ಲಿಯೂ ಇದ್ದಾರೆ.
– ದಿನೇಶ್ ಇರಾ