ಮೈಸೂರು: ಮೈಸೂರಿನ ಚಾಮುಂಡಿಬೆಟ್ಟಕ್ಕೆ ರೋಪ್ ವೇ ನಿರ್ಮಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಚಾಮರಾಜನಗರ ಲೋಕಸಭಾ ಸದಸ್ಯ ವಿ.ಶ್ರೀನಿವಾಸಪ್ರಸಾದ್ ಬಲವಾಗಿ ವಿರೋಧಿಸಿದ್ದಾರೆ. ರೋಪ್ ವೇ ನಿರ್ಮಿಸುವ ಪ್ರಸ್ತಾವನೆ ಬಗ್ಗೆ ಮರು ಪರಿಶೀಲಿಸಬೇಕು ಹಾಗೂ ಸಕಾರಾತ್ಮಕ ನಿರ್ಣಯ ಕೈಗೊಳ್ಳ ಬೇಕೆಂದು ಸಿಎಂ ಬೊಮ್ಮಾಯಿರನ್ನು ಆಗ್ರಹಿಸಿದ್ದಾರೆ.
ವಿತ್ತ ಖಾತೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022-23ನೇ ಸಾಲಿನ ಬಜೆಟ್‌ನಲ್ಲಿ ಚಾಮುಂಡಿಬೆಟ್ಟಕ್ಕೆ ರೋಪ್ ವೇ ನಿರ್ಮಿಸುವುದನ್ನು ಪ್ರಸ್ತಾಪಿಸಿದ್ದಾರೆ. ಮೈಸೂರಿನ ಜನತೆ, ಪರಿಸರವಾದಿಗಳು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಚಾಮುಂಡಿಬೆಟ್ಟಕ್ಕೆ ರೋಪ್ ವೇ ಅಗತ್ಯವಿಲ್ಲ. ಇದರಿಂದ ಪರಿಸರಕ್ಕೆ ಧಕ್ಕೆಯಾಗಲಿದೆ ಎಂದು ಶ್ರೀನಿವಾಸಪ್ರಸಾದ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಈ ಹಿಂದೆ ತಾವು ಕಂದಾಯ ಖಾತೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ 2015ರಲ್ಲಿ ಕೆಲವು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಇದಕ್ಕಾಗಿ ಚಾಮುಂಡಿಬೆಟ್ಟದ ಮೇಲೆ ದೇವಿಕೆರೆ ಪ್ರದೇಶದಲ್ಲಿ 8.04 ಎಕರೆ ಜಮೀನು ನಿಗದಿಪಡಿಸಿ ಅಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಯಿತು. ಈ ಹಂತದಲ್ಲಿ ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತವಾಗಿ ಸಾರ್ವಜನಿಕರು ಆತಂಕಕ್ಕೆ ಒಳಗಾದರು. ಆಗ ತಾವು ಅರಣ್ಯ ಹಾಗೂ ಪರಿಸರ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯವರು ತಮ್ಮ ಅನುಮತಿ ಪಡೆದಿದ್ದಾರೆಯೇ ಎಂದು ಪ್ರಶ್ನಿಸಿದಾಗ ಅಧಿಕಾರಿಗಳು ತಬ್ಬಿಬ್ಟಾದರು. ತಮಗೆ ಈ ವಿಷಯವೇ ಗೊತ್ತಿಲ್ಲವೆಂದರು. ಭೂ ಕುಸಿತದ ಹಾನಿಯನ್ನು ಕಣ್ಣಾರೆ ಕಂಡ ತಾವು ಆ ಕೆಲಸವನ್ನು ಅಲ್ಲಿಗೆ ಸ್ಥಗಿತಗೊಳಿಸುವಂತೆ ಆದೇಶಿಸಿದೆ ಎಂದು ಶ್ರೀನಿವಾಸಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿ : ವಿಶ್ವಕಪ್ ಸೆಮಿ ಸ್ಥಾನ ಕಸಿದ ‘ನೋ ಬಾಲ್’; ಮಿಥಾಲಿ ಪಡೆಯ ವಿಶ್ವಕಪ್ ಅಭಿಯಾನ ಅಂತ್ಯ!
ಚಾಮುಂಡಿಬೆಟ್ಟಕ್ಕೆ ಕುಡಿವ ನೀರು, ಶೌಚಾಲಯ, ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ, ಪೂಜಾ ಸಾಮಗ್ರಿಗಳ ಮಾರಾಟ ವ್ಯವಸ್ಥೆಯಂತಹ ಈಗಿರುವ ಮೂಲ ಸೌಕರ್ಯಗಳು ಸಾಕಾಗುತ್ತದೆ. ಇನ್ನೂ ಅಗತ್ಯ ಕಂಡು ಬಂದರೆ ಇದನ್ನು ಪರಿಸರ ಸ್ನೇಹಿ ವಿಧಾನದಲ್ಲಿ ಒದಗಿಸುವುದು ಅವಶ್ಯವಿದೆಯೇ ಹೊರತು ಪರಿಸರಕ್ಕೆ ಮಾರಕವಾಗುವ ರೋಪ್ ವೇ ಅಂತಹ ನಿರ್ಮಾಣದ ಮಾರ್ಗ ಅಭಿವೃದ್ಧಿಯೂ ಅಲ್ಲ, ಅಗತ್ಯವೂ ಇಲ್ಲ ಎಂದು ಹೇಳಿದ್ದಾರೆ.
ಪ್ರಕೃತಿದತ್ತವಾದ ಕೊಡುಗೆ
ಚಾಮುಂಡಿಬೆಟ್ಟ ಮೈಸೂರಿಗೆ ಪ್ರಕೃತಿದತ್ತವಾದ ಕೊಡುಗೆ. ಬೆಟ್ಟದ ತುದಿ ತಲುಪಲು ಸುಸಜ್ಜಿತವಾದ ಮೆಟ್ಟಿಲುಗಳ ಮಾರ್ಗವಿದೆ. ಬಸ್ ಹಾಗೂ ಇತರ ವಾಹನಗಳಿಗಾಗಿ ಮತ್ತೂಂದು ಮಾರ್ಗವಿದೆ. ರೋಪ್ ವೇ ಅನಗತ್ಯ. ಇದಕ್ಕಿಂತಲೂ ಮುಖ್ಯವಾಗಿ ರೋಪ್ ವೇಗೆ ಕಾಮಗಾರಿ ಕೈಗೊಳ್ಳುವುದರಿಂದ ಭೂಮಿ ಸಡಿಲಗೊಂಡು ಬೆಟ್ಟದ ಪರಿಸರಕ್ಕೆ ಅಪಾರವಾದ ಹಾನಿ ಸಂಭವಿಸುವ ನಿರೀಕ್ಷೆ ಇದೆ. ಇದರ ಮುನ್ಸೂಚನೆಯನ್ನು ಗಮನಿಸಿಯೂ ರೋಪ್ ವೇ ನಿರ್ಮಿಸುವ ನಿರ್ಧಾರ ಕೈಗೊಳ್ಳುವುದು ಸೂಕ್ತವಲ್ಲ. ಚಾಮುಂಡಿಬೆಟ್ಟದ ಪರಿಸರದಲ್ಲಿ ಇನ್ನು ಯಾವುದೇ ಹೊಸ ಕಟ್ಟಡವನ್ನು ಕಟ್ಟುವುದು ಬೆಟ್ಟದ ಪರಿಸರ ಸುರಕ್ಷತೆಯ ದೃಷ್ಟಿಯಿಂದ ಕ್ಷೇಮವಲ್ಲ ಎಂದರು.