ಹುಣಸೂರು: ರಾಜ್ಯದ ಮೂರು ಕಡೆಗಳಲ್ಲಿ ನೂತನ ತತ್ರಜ್ಞಾನ ಬಳಸಿಕೊಂಡು ಒಟ್ಟು 50 ಕಿ. ಮೀನಷ್ಟು ರೋಪ್ ಬ್ಯಾರಿಯರ್ ನಿರ್ಮಿಸಲುದ್ದೇಶಿಸಲಾಗಿದೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದರು.
ನಾಗರಹೊಳೆ ಉದ್ಯಾನ ಸೇರಿದಂತೆ ಬಂಡೀಪುರ, ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ನಿಯಂತ್ರಿಸುವ ಸಲುವಾಗಿ ಅರಣ್ಯದಂಚಿನಲ್ಲಿ ನೂತನ ತಂತ್ರಜ್ಞಾನದ 50 ಕಿ.ಮೀ. ರೋಪ್ ವೇ ನಿರ್ಮಿಸಲಾಗುತ್ತಿದೆ. ನಾಗರಹೊಳೆ ಉದ್ಯಾನದ ವೀರನಹೊಸಳ್ಳಿ ವನ್ಯಜೀವಿ ವಲಯದಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಲಾಗುತ್ತಿರುವ ರೋಪ್ ಬ್ಯಾರಿಯರ್ ಕಾಮಗಾರಿ ಪರಿಶೀಲಿಸಿದರು.
ಪ್ರತಿ ಕಿ.ಮೀಗೆ 60 ಲಕ್ಷ: ನಂತರ ಮಾಹಿತಿ ನೀಡಿದ ಅವರು, ನಾಗರಹೊಳೆ ಉದ್ಯಾನದಲ್ಲಿ 4.5 ಕಿ. ಮೀ. ನಿರ್ಮಿಸಲಾಗುತ್ತಿದೆ. ಪ್ರತಿ ಕಿ.ಮೀ.ಗೆ 60 ಲಕ್ಷ ರೂ. ವೆಚ್ಚವಾಗುತ್ತಿದೆ. ಈ ಹಿಂದೆ ರೈಲ್ವೆ ಹಳಿ ತಡೆಗೋಡೆಯನ್ನು 1.5 ಕೋಟಿ ರೂ. ವೆಚ್ಚದಡಿ ನಿರ್ಮಿಸಲಾಗುತ್ತಿತ್ತು. ಇದೀಗ ರೈಲ್ವೆ ಹಳಿ ಸಿಗುತ್ತಿಲ್ಲಾ, ವೆಚ್ಚವು ಸಹ ದುಬಾರಿಯಾಗಿದ್ದರಿಂದ, ಹೊಸ ಮಾದರಿಯ ರೋಪ್ ಬ್ಯಾರಿಯರ್ ನಿರ್ಮಿಸಲಾಗುತ್ತಿದೆ ಎಂದರು.
100 ಕೋಟಿ ಬಿಡುಗಡೆ: ರಾಜ್ಯದಲ್ಲಿ ಅರಣ್ಯದಂಚಿನಲ್ಲಿ ಒಟ್ಟು 600 ಕಿ.ಮೀ. ತಡೆ ಗೋಡೆ ನಿರ್ಮಿಸ ಬೇಕಿದ್ದು, ಈಗಾಗಲೇ 200 ಕಿ.ಮೀ.ನಷ್ಟು ರೈಲ್ವೆ ಹಳಿ ತಡೆ ಗೋಡೆ ನಿರ್ಮಿಸಲಾಗಿದೆ. ಇದೀಗ ಕಡಿಮೆ ವೆಚ್ಚದ ರೋಪ್ ಬ್ಯಾರಿಯರ್ ಯಶಸ್ವಿಯಾದಲ್ಲಿ ಮುಂದೆ ಎಲ್ಲೆಡೆ ಇದೇ ಮಾದರಿಯ ತಡೆಗೋಡೆ ನಿರ್ಮಿಸಲು ಕ್ರಮವಹಿಸಲಾಗು ವುದೆಂದರು. ಈ ಬಾರಿ ಅರಣ್ಯ ಇಲಾಖೆಗೆ 100 ಕೋಟಿ ವಿಶೇಷ ಅನುದಾನ ಬಿಡುಗಡೆಯಾಗಿದೆ ಎಂದರು.
ರಾತ್ರಿ ವೇಳೆ ಕಾಡಾನೆ ಹಾವಳಿ ತಡೆಯಲು ಸಿಬ್ಬಂದಿ ಕೊರತೆ ಇದೆ ವಿಶೇಷ ಕಾವಲುಗಾರರನ್ನು ನೇಮಿಸಿದಲ್ಲಿ ಅನುಕೂಲವಾಗಲಿದೆ ಎಂಬ ಪ್ರಶ್ನೆಗೆ ಈಗಾಗಲೇ ಸಾಕಷ್ಟು ಸಿಬ್ಬಂದಿ ಇದ್ದಾರೆಂದು ಡಿಸಿಎಫ್ ಮಹೇಶ್‌ಕುಮಾರ್ ಸಮರ್ಥಿಸಿಕೊಂಡರು. ಇಲಾಖೆಗೆ ಪ್ರತಿವರ್ಷ ಶೇ.20ರಷ್ಟು ಸಿಬ್ಬಂದಿ ನೇಮಕಕ್ಕೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ ಎಂದರು.
ಭೀಮ ಆನೆಯಿಂದ ಪರಿಶೀಲನೆ: ವೀರನಹೊಸಹಳ್ಳಿ ವಲಯದಲ್ಲಿ ನಿರ್ಮಿಸುತ್ತಿರುವ ರೋಪ್ ಬ್ಯಾರಿಯರ್ ಬೇಲಿಯನ್ನು ದಾಟಿ ಆನೆಗಳು ಹೊರದಾಟಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ಸಮರ್ಥಿಸಿಕೊಂಡಾಗ ಸ್ಥಳದಲ್ಲಿದ್ದ ಸಾಕಾನೆ ಭೀಮನ ಮೂಲಕ ರೋಪ್ ಬ್ಯಾರಿಯರ್‌ಗೆ ಅಳವಡಿಸಿದ್ದ ಸಿಮೆಂಟ್ ಕಂಬವನ್ನು ನೂಕಿಸಿ ಹಾಗೂ ತಂತಿಯನ್ನು ಕಾಲಿನಿಂದ ತುಳಿಸಿ ಪರಿಶೀಲಿಸಿದಾಗ ಕಂಬ ಕೊಂಚ ಅಲುಗಾಡಿದ್ದನ್ನು ಪರಿಶೀಲಿಸಿ ತಾಂತ್ರಿಕತೆ ಬಳಸಿ ಮತ್ತಷ್ಟು ಬಿಗಿಗೊಳಿಸಲು ಸಚಿವರು ಹಾಗೂ ಶಾಸಕರು ಎಂಜಿನಿಯರ್‌ಗೆ ಸಲಹೆ ನೀಡಿದರು. ಎಪಿಸಿಸಿಎಫ್ ಜಗತ್‌ರಾಮ್, ಕೊಡಗು ಸಿಎಫ್ ಡಿಎನ್‌ಡಿ ಮೂರ್ತಿ, ಡಿಸಿಎಫ್ ಗಳಾದ ಮಹೇಶ್‌ಕುಮಾರ್, ಸೀಮಾ, ಎಸಿಎಫ್ ಸತೀಶ್ ಇತರರು ಇದ್ದರು.