Advertisement

ತಾಳ್ಮೆಯಲ್ಲೇ ರೂಪುಗೊಂಡ ರೂಪಿಕಾ

10:59 AM Jun 05, 2018 | |

ಸಾಮಾನ್ಯವಾಗಿ ನಾಯಕಿಯರು ಚಿತ್ರರಂಗದಲ್ಲಿ ಬೆರಳೆಣಿಕೆ ವರ್ಷಗಳಿಗೆ ಮಾತ್ರ ಸೀಮಿತ ಎಂಬ ಮಾತಿದೆ. ಆದರೆ, ಕನ್ನಡದಲ್ಲಿ ಮಾತ್ರ ಆ ಮಾತಿಗೆ ಅಪವಾದ ಎಂಬಂತೆ ಒಂದಷ್ಟು ನಟಿಮಣಿಗಳು ದಶಕ ಪೂರೈಸಿ, ಇಂದಿಗೂ ನಾಯಕಿ ಸ್ಥಾನ ಉಳಿಸಿಕೊಂಡು ಮುನ್ನುಗ್ಗುತ್ತಲೇ ಇದ್ದಾರೆ. ಆ ಸಾಲಿಗೆ ರೂಪಿಕಾ ಕೂಡ ಒಬ್ಬರು. ಈ ಹತ್ತು ವರ್ಷದಲ್ಲಿ ರೂಪಿಕಾ ನಟಿಸಿದ್ದು ಹನ್ನೆರೆಡು ಚಿತ್ರಗಳಲ್ಲಿ.

Advertisement

ಹತ್ತು ವರ್ಷಗಳ ಸಿನಿಪಯಣ ಸುಲಭದ್ದಲ್ಲ. ಇಲ್ಲಿ ಸೋಲು, ಗೆಲುವು, ಏಳು-ಬೀಳು ಎಲ್ಲವೂ ಇದೆ. ಇವೆಲ್ಲವನ್ನೂ ನೋಡಿರುವ ರೂಪಿಕಾಗೆ, ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಗುರುತಿಸಿಕೊಂಡಿದ್ದೇ ಹೆಮ್ಮೆಯ ವಿಷಯ. ” ಈ ಹತ್ತು ವರ್ಷಗಳ ಜರ್ನಿಯನ್ನೊಮ್ಮೆ ನೆನಪಿಸಿಕೊಂಡರೆ ಹಾಗೊಂದು ಖುಷಿ ಮತ್ತು ಶಾಕೇ ಆಗುತ್ತೆ’ ಎನ್ನುತ್ತಾರೆ ರೂಪಿಕಾ. 9 ನೇ ತರಗತಿಯಲ್ಲಿರುವಾಗಲೇ ರೂಪಿಕಾ ಕ್ಲಾಸಿಕಲ್‌ ಡ್ಯಾನ್ಸರ್‌ ಆಗಿದ್ದವರು.

ಒಂದು ಮಕ್ಕಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೂಪಿಕಾ, ನಿರ್ದೇಶಕ ಎಸ್‌.ನಾರಾಯಣ್‌ ಕಣ್ಣಿಗೆ ಬಿದ್ದು, ಚಿತ್ರರಂಗಕ್ಕೆ ಎಂಟ್ರಿಯಾದವರು. ಆಗಷ್ಟೇ ಸಿನಿಮಾ ಆಸಕ್ತಿ ಇಟ್ಟುಕೊಂಡಿದ್ದ ರೂಪಿಕಾಗೆ, ನಾರಾಯಣ್‌ ಮನೆಯಿಂದ ಕರೆ ಬಂದಿದ್ದೇ ತಡ, ಅಣ್ಣನ ಜೊತೆಗೆ ಒಂದು ಬಯೋಡಟಾ ಇಟ್ಟುಕೊಂಡು ಓಡಿ ಹೋಗುತ್ತಾರೆ. ಅಲ್ಲೊಂದು ಸರ್‌ಪ್ರೈಸ್‌ ಇರುತ್ತೆ ಅಂತಾನೂ ಅಂದುಕೊಳ್ಳದ ರೂಪಿಕಾಗೆ, “ಚೆಲುವಿನ ಚಿಲಿಪಿಲಿ’ ಚಿತ್ರಕ್ಕೆ ನಾಯಕಿ ಆಗುವ ಅವಕಾಶ ಕಲ್ಪಿಸಿಕೊಡುತ್ತಾರೆ ನಾರಾಯಣ್‌.

ಸಿಕ್ಕ ಮೊದಲ ಅವಕಾಶವನ್ನು ಕಣ್ಣಿಗೆ ಒತ್ತಿಕೊಂಡ ರೂಪಿಕಾ, ಇಲ್ಲಿಯವರೆಗೆ ನಟನೆ ಮಾಡಿಕೊಂಡು ಬಂದಿದ್ದಾರೆ. ಹಾಗಾದರೆ ಈ ಒಂದು ದಶಕದ ಜರ್ನಿ ಹೇಗಿತ್ತು? ಇದ್ಕೆ ಉತ್ತರಿಸುವ ರೂಪಿಕಾ, “ಇಲ್ಲಿ ಗೆಲುವಿಗಿಂತ ಸೋಲು ಕಂಡಿದ್ದೇ ಹೆಚ್ಚು. ಹಾಗಂತ, ಎಂದೂ ಬೇಸರವಾಗಲಿಲ್ಲ. ನನಗೆ ಈ ಇಂಡಸ್ಟ್ರಿ ಈ ಹತ್ತು ವರ್ಷದಲ್ಲಿ ಕಲಿಸಿದ ಪಾಠ ಅಂದರೆ ಅದು ತಾಳ್ಮೆ. ಇಂದು ತಾಳ್ಮೆ ಕಲಿತದ್ದಕ್ಕೇ ನಾನು ಇವತ್ತಿಗೂ ನಾಯಕಿಯಾಗಿಯೇ ಉಳಿದಿದ್ದೇನೆ.

ಮೊದಲ ಚಿತ್ರದ ನಂತರ “ಕಾಲ್ಗೆಜ್ಜೆ’ ಚಿತ್ರ ಮಾಡಿದೆ. ಆ ಸಿನಿಮಾ ನನಗೆ ಹಲವು ಪ್ರಶಸ್ತಿಗಳನ್ನು ತಂದುಕೊಟ್ಟಿತು. ಪ್ರಶಸ್ತಿಗಿಂತ ಹೆಚ್ಚಾಗಿ, ಜನರು ತೋರಿದ ಪ್ರೀತಿ ಹೆಚ್ಚಾಯ್ತು. ಸಾಮಾನ್ಯ ಹುಡುಗಿಯೊಬ್ಬಳು, ಮನೆಯಲ್ಲಿ ಯಾರೂ ಸಿನಿಮಾ ಹಿನ್ನೆಲೆ ಇರದ ಹುಡುಗಿಯೊಬ್ಬಳಿಗೆ ಇಂಥದ್ದೊಂದು ಅವಕಾಶ ಸಿಗುತ್ತೆ ಅಂತ ಊಹಿಸಿರಲಿಲ್ಲ. ಈ ಚಿತ್ರರಂಗ ನನಗೆ ಇಲ್ಲಿಯವರೆಗೆ ಹೆಸರು ತಂದುಕೊಟ್ಟಿದೆ.

Advertisement

ಎಲ್ಲರ ಪ್ರೀತಿ ಗಳಿಸುವಂತೆ ಮಾಡಿದೆ. ಇದಕ್ಕಿಂತ ಬೇರೇನೂ ಬೇಕಿಲ್ಲ’ ಎನ್ನುತ್ತಾರೆ ರೂಪಿಕಾ. ಹತ್ತು ವರ್ಷಗಳಲ್ಲಿ ಹನ್ನೆರೆಡು ಚಿತ್ರಗಳನ್ನು ಪೂರೈಸಿರುವ ರೂಪಿಕಾ, ಸದ್ಯಕ್ಕೆ “ರುದ್ರಾಕ್ಷಿಪುರ’, “ಥರ್ಡ್‌ ಕ್ಲಾಸ್‌’ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೇನು ಈ ಚಿತ್ರಗಳು ಬಿಡುಗಡೆಗೂ ಸಜ್ಜಾಗಿವೆ. ಹೆಸರಿಡದ ಇನ್ನೂ ಎರಡು ಚಿತ್ರಗಳು ಚಿತ್ರೀಕರಣದಲ್ಲಿವೆ. ಈ ಮಧ್ಯೆ ತಮಿಳು ಭಾಷೆಯ ಚಿತ್ರದಲ್ಲೂ ನಟಿಸುತ್ತಿದ್ದಾರೆ.

ಈಗಾಗಲೇ ಚರಣ್‌ರಾಜ್‌ ನಿರ್ದೇಶನದ ತೆಲುಗು ಚಿತ್ರದಲ್ಲೂ ನಟಿಸಿದ್ದಾರೆ. ಎಲ್ಲಾ ಸರಿ, ರೂಪಿಕಾಗೆ ಸಾಲು ಸಾಲು ಸೋಲು ಅನುಭವಿಸಿದಾಗ, ಇಂಡಸ್ಟ್ರಿ ಸಹವಾಸ ಸಾಕೆನಿಸಿದ್ದು ಹೌದಾ? ಒಂದು ಹಂತದಲ್ಲಿ ಅವರು ಸೋಲು ಕಂಡಾಗ ಸಾಕಷ್ಟು ಬೇಸರ ಮಾಡಿಕೊಂಡಿದ್ದು ನಿಜವಂತೆ. ಆದರೆ, ಧೈರ್ಯದಿಂದ ಮುನ್ನುಗ್ಗಿದ್ದರಿಂದಲೇ ಇಂದು ನಾಯಕಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎನ್ನುವ ರೂಪಿಕಾ,

“ಗೆಜ್ಜೆ’ ಎಂಬ ಡ್ಯಾನ್ಸ್‌ ಸ್ಟುಡಿಯೋ ಹುಟ್ಟುಹಾಕಿ ಕ್ಲಾಸ್‌ ನಡೆಸುತ್ತಿದ್ದು, ನಾಲ್ಕು ಜನರಿಗೆ ಉಪಯೋಗ ಆಗಬೇಕೆಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಾರೆ. ಇದರ ಮಧ್ಯೆ ರೂಪಿಕಾಗೆ ಒಂದು ಕನಸಿದೆ. ಅದು, ಪಕ್ಕಾ ಕ್ಲಾಸಿಕಲ್‌ ಡ್ಯಾನ್ಸರ್‌ ಆಗಿ ಸಿನಿಮಾದಲ್ಲಿ ನಟಿಸಬೇಕೆಂಬುದು. ಅಂಥದ್ದೊಂದು ಪಾತ್ರ ಎದುರುನೋಡುತ್ತಿದ್ದಾರಂತೆ ರೂಪಿಕಾ.

Advertisement

Udayavani is now on Telegram. Click here to join our channel and stay updated with the latest news.

Next