ಬೈಕಂಪಾಡಿ: ಇಂಧನ ಬೆಲೆ ಹೆಚ್ಚುತ್ತಿದ್ದಂತೆಯೇ ವಿದ್ಯುತ್ ದರ ಏರುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯುತ್ ಉಳಿತಾಯದ ಜತೆಗೆ ಖರ್ಚು ಕಡಿಮೆ ಮಾಡಿ ಆದಾಯ ಹೆಚ್ಚುವ ಸಲುವಾಗಿ ಎಪಿಎಂಸಿ 100 ಕಿ.ವ್ಯಾ. ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲು ಯೋಜನೆ ರೂಪಿಸಿದೆ.
ಬೈಕಂಪಾಡಿ ಎಪಿಎಂಸಿ ಪ್ರಾಂಗಣದಲ್ಲಿರುವ ವಾಣಿಜ್ಯ ಕಟ್ಟಡದ ಮೇಲೆ ಸೋಲಾರ್ ಅಳವಡಿಕೆಗೆ ಸಿದ್ಧತೆ ಮಾಡಲಾಗಿದ್ದು, ಟ್ರಾನ್ಸ್ ಫಾರ್ಮರ್ ಅಳವಡಿಸಲು ಟೆಂಡರ್ ಕರೆಯಲಾಗಿದೆ. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ 60 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಅಳವಡಿಕೆಯಾಗುತ್ತಿದ್ದು, ಎಸ್‌ಬಿ ರಿನಿವೇಬಲ್ ಎನರ್ಜಿ ಒಟ್ಟಿಗೆ ಒಡಂಬಡಿಕೆ ಮಾಡಿದೆ. ಎಪಿಎಂಸಿ ಶೂನ್ಯ ಬಂಡವಾಳದಲ್ಲಿ ವಿದ್ಯುತ್ ಪಡೆಯಲಿದೆ. 20 ಲಕ್ಷ ರೂ. ಟ್ರಾನ್ಸ್‌ಫಾರ್ಮರ್‌ಗೆ ವೆಚ್ಚವಾಗಲಿದೆ.
ವರ್ಷಕ್ಕೆ 20 ಲಕ್ಷ ರೂ. ಉಳಿತಾಯ
ಕೇಂದ್ರ ಸರಕಾರದಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಆದಾಯದಲ್ಲಿ ಕೋಟ್ಯಂತರ ರೂ. ಇಳಿಕೆಯಾಗಿದ್ದು, ಎಪಿಎಂಸಿ ನಡೆಸುವುದೇ ಕಷ್ಟವಾಗಿದೆ. ಇದರ ನಡುವೆ ಸೋಲಾರ್ ವಿದ್ಯುತ್ ಯೋಜನೆಯಿಂದ ಕನಿಷ್ಠ ವರ್ಷಕ್ಕೆ 20 ಲಕ್ಷ ರೂ.ಉಳಿಸಿ ತನ್ನ ಕೊಡುಗೆ ನೀಡಲು ಮುಂದಾಗಿದೆ. ಸೋಲಾರ್‌ನಿಂದ ಎಪಿಎಂಸಿಯು ತನ್ನ ಕಚೇರಿ, ಬೀದಿ ದೀಪ ಮತ್ತಿತರ ವ್ಯವಸ್ಥೆಗೆ ಬಳಸಿ ಉಳಿದ ವಿದ್ಯುತ್ ಅನ್ನು ಮೆಸ್ಕಾಂಗೆ ಮಾರಾಟ ಮಾಡಲಿದೆ.
ಮಾರಾಟ ದಲ್ಲಿಯೂ ಶೇ. 50ರಷ್ಟು ಆದಾಯ ಪಡೆಯಲಿದೆ. ಎಪಿಎಂಸಿಯಲ್ಲಿ ಆದಾಯ ಕುಸಿತದ ನಡುವೆ ಬೇರೆ ಬೇರೆ ಮೂಲಗಳಿಂದ ಆದಾಯ ಗಳಿಸಲು ಯೋಚಿಸಿದಾಗ ಸೋಲಾರ್ ಯೋಜನೆ ಮನಸ್ಸಿಗೆ ಬಂತು. ಕೇಂದ್ರ ಸರಕಾರವು ರಾಷ್ಟ್ರೀಯ ಯೋಜನೆಯ ಅನ್ವಯ ಸೋಲಾರ್ ವಿದ್ಯುತ್ ವ್ಯವಸ್ಥೆಗೆ ಆದ್ಯತೆ ನೀಡಿ ಪ್ರೋತ್ಸಾಹಿ ಸುತ್ತಿದ್ದು, ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಮಾತನಾಡಿ, ಈ ಯೋಜನೆ ಜಾರಿ ಮಾಡಿದ್ದೇನೆ ಎನ್ನುತ್ತಾರೆ ಎಪಿಎಂಸಿಯ ನಿ.ಪೂ. ಅಧ್ಯಕ್ಷ ಕೃಷ್ಣರಾಜ ಹೆಗ್ಡೆ.
ಇಂಧನ ಉಳಿತಾಯಕ್ಕೆ ಆದ್ಯತೆ ಸರಕಾರಿ ವ್ಯವಸ್ಥೆಗಳಲ್ಲಿ ಮಾದರಿಯಾಗಿ ವಿದ್ಯುತ್, ಇಂಧನ ಉಳಿತಾಯಕ್ಕೆ ಆದ್ಯತೆ ನೀಡಿದಾಗ ಇತರರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ. ಹೆಚ್ಚುತ್ತಿರುವ ತಾಪಮಾನದ ನಿಯಂತ್ರಣಕ್ಕೆ ಸಾಂಪ್ರದಾಯಿಕವಲ್ಲದ ಮೂಲಗಳಿಗೆ ಹೆಚ್ಚಿನ ಆದ್ಯತೆ ನೀಡುವತ್ತ ಕೇಂದ್ರ ಸರಕಾರ ಗಮನ ಹರಿಸುತ್ತಿದೆ. ಎಪಿಎಂಸಿಯಲ್ಲಿ ಸೋಲಾರ್ ಅಳವಡಿಕೆ ಉತ್ತಮ ಹೆಜ್ಜೆ.
– ಡಾ| ಭರತ್ ಶೆಟ್ಟಿ ವೈ, ಶಾಸಕರು, ಮಂಗಳೂರು ಉತ್ತರ