Advertisement

ಪ್ರವಾಹ ಸಂತ್ರಸ್ತರ ಮರೆತ ಜಿಲ್ಲಾಡಳಿತ

03:31 PM Feb 28, 2020 | Naveen |

ರೋಣ: 2019ರ ಆಗಸ್ಟ್‌ ತಿಂಗಳಲ್ಲಿ ಧಾರವಾಡ, ಗದಗ, ಭಾಗಲಕೋಟೆ, ಬೆಳಗಾವಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಗೆ ಮಲಪ್ರಭಾ ದಂಡೆಯ ಮೇಲಿರುವ ಗ್ರಾಮಗಳು ಅಕ್ಷರಶಃ ನಲುಗಿ ಹೋಗಿದ್ದವು. ಆದರೆ ಅವುಗಳಿಗೆ ಸ್ಪಂದಿಸಬೇಕಾದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಮಾತ್ರ ಸಂಬಂಧವಿಲ್ಲದಂತೆ ಇರುವುದು ವಿಪರ್ಯಾಸವೇ ಸರಿ.

Advertisement

ಹೌದು ಮಲಪ್ರಭಾ ನದಿ ಹಾಗೂ ಬೆಣ್ಣಿ ಹಳ್ಳದ ಪ್ರವಾಹಕ್ಕೆ ತಾಲೂಕಿನ ಗಾಡಗೋಳಿ, ಹೊಳೆಮಣ್ಣೂರ, ಹೊಳೆಆಲೂರು, ಹೊಳೆಹಡಗಲಿ, ಬಸರಕೋಡ, ಅಮರಗೋಳ, ಬಿ.ಎಸ್‌. ಬೇಲೆರಿ, ಮೆಣಸಗಿ, ಗುಳಗಂದಿ, ಮಾಳವಾಡ, ಯಾ.ಸ.ಹಡಗಲಿ, ಕರುಮುಡಿ ಸೇರಿದಂತೆ ಅನೇಕ ಗ್ರಾಮಗಳು ಸಂಪೂರ್ಣವಾಗಿ ಜಲಾವೃತವಾಗಿದ್ದರಿಂದ ಮನೆ, ಗುಡಿಸಲುಗಳು ಬಿದ್ದು ಹೋಗಿವೆ. ಆದರೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಇಲ್ಲಿಯವರೆಗೆ ಮೂಲ ಸೌಕರ್ಯಗಳು ದೊರೆಯದಿರುವುದರಿಂದ ನೆರೆಹಾವಳಿ ಕಾಮಗಾರಿಗಳು ಎಷ್ಟೊಂದು ತೀವ್ರತೆಯಿಂದ ನಡೆದಿವೆ ಎಂಬುದು ತಿಳಿಯುತ್ತದೆ.

ತಾತ್ಕಾಲಿಕ ಶೆಡ್‌ ನಿಮಾರ್ಣವಾಗಿಲ್ಲ: ಸಂಪೂರ್ಣವಾಗಿ ಪ್ರವಾಹದಲ್ಲಿ ಮನೆಗಳು ಕೊಚ್ಚಿ ಹೋದ ಸಂತ್ರಸ್ತರಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಮನೆಗಳನ್ನು ನಿಮಾರ್ಣ ಮಾಡುವವರೆಗೆ ತಾತ್ಕಾಲಿಕವಾಗಿ ಶೆಡ್‌ ನಿಮಾರ್ಣ ಮಾಡಿಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಇಲ್ಲಿಯವರೆಗೆ ಅಂತಹ ಫಲಾನುಭವಿಗಳಿಗೆ ಯಾವುದೇ ತರಹದ ಶೆಡ್‌ ನಿಮಾರ್ಣ ಮಾಡಿಕೊಟ್ಟಿಲ್ಲ. ಇದರಿಂದ ಮನೆಗಳನ್ನು ಕಳೆದುಕೊಂಡಿರುವ ನಿರಾಶ್ರಿತರಾಗಿರುವ ಸಂತ್ರಸ್ತರು ಆಗೋ ಈಗ ಬೀಳುವ ಮನೆಯಲ್ಲಿಯೇ ವಾಸವಾಗಿದ್ದಾರೆ.

ಕುಡಿಯಲು ನೀರಿಲ್ಲ: 2007-08 ರಲ್ಲಿ ಮೊದಲ ಬಾರಿಗೆ ಸಂಭವಿಸಿದ ಪ್ರವಾಹಕ್ಕೆ ಮುಳಗಿ ಮನೆ ಕಳೆದುಕೊಂಡವರಿಗೆ ನವಗ್ರಾಮ ಎಂಬ ಯೋಜನೆಯಡಿಯಲ್ಲಿ ಆಸರೆ ಮನೆ ಕಟ್ಟಿಕೊಟ್ಟಿದೆ. ಆದರೆ ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ,
3-4 ಕಿಮೀ ದೂರವಿರುವ ಹಳೆ ಗ್ರಾಮಕ್ಕೆ ಹೋಗಿ ನೀರು ತರುವು ದುಸ್ಥಿತಿ ಈ ನವಗ್ರಾಮದ ಜನರಿಗೆ ಬಂದಿದೆ. ಸ್ಥಳೀಯ ಆಡಳಿತ ನಡೆಸುವ ಗ್ರಾಪಂ ಅಧಿಕಾರಿಗಳು ಎಂಟು ದಿನಗಳಿಗೊಮ್ಮೆ ನೀರನ್ನು ಪೂರೈಕೆ ಮಾಡುವುದರಿಂದ ಅದರ ಮಧ್ಯೆ ನೀರಿನ ತೊಂದರೆಯಾದರೆ ಹಳೆ ಊರೇ ಗತಿ ಎಂದು ಅಲ್ಲಿಂದ ನೀರು ತರುವಂತಾಗಿದೆ ಇಲ್ಲಿನ ಜನರ ಸ್ಥಿತಿ.

ಸರ್ವೇ ಮಾಡಿದರೂ ಪ್ರಯೋಜವಿಲ್ಲ: ಈಗಾಗಲೇ ಸರ್ಕಾರ ಕಳೆದ ಬಾರಿ ಸಂಭವಿಸಿದ್ದ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಮನೆಗಳನ್ನು ನಿಮಾರ್ಣ ಮಾಡಿಕೊಟ್ಟಿದೆ. ಆದರೆ ಆ ಮನೆಗಳು ಗುಣಮಟ್ಟದಿಂದ ಕೂಡಿರದೆ, ನಿಮಾರ್ಣ ಮಾಡಿದ ಒಂದು ವರ್ಷದಲ್ಲಿಯೇ ಅವುಗಳ ಕಿಟಕಿ, ಬಾಗಿಲು ಮುರಿದು ಹೋಗಿವೆ. ಅಲ್ಲದೆ ಅಲ್ಲಿ ಜಾಲಿಕಂಟಿಗಳು ಬೆಳೆದು ಹೆಮ್ಮರವಾಗಿ ನಿಂತಿವೆ. ಇದರಿಂದ ಆಗಸ್ಟ್‌ ತಿಂಗಳಲ್ಲಿ ನವಗ್ರಾಮದಲ್ಲಿ ಇರುವ ಮನೆಗಳ ಮುರಿದಿರುವ ಕಿಟಕಿ, ಬಾಗಿಲುಗಳ ಕುರಿತು ಸರ್ವೇ ಮಾಡಿ ಐದಾರು ತಿಂಗಳು ಕಳೆದಿವೆ. ಆದರೆ ಇಲ್ಲಿಯವರೆಗೆ ಒಂದು ಕಿಟಕಿ, ಬಾಗಿಲನ್ನು ರಿಪೇರಿ ಮಾಡಿಲ್ಲ.

Advertisement

ಇದರಿಂದ ಮನೆಗಳಿಗೆ ಬೀಗ ಹಾಕದ ಪರಿಸ್ಥಿತಿ ಇಲ್ಲಿನ ಸಂತ್ರಸ್ತರಿಗೆ ಬಂದಿದೆ. ಮನೆಗಳನ್ನು ನಿಮಾರ್ಣ ಮಾಡುವರೆಗೆ ಪ್ರತಿ ತಿಂಗಳ ಐದು ಸಾವಿರ ಹಣವನ್ನು ಬಾಡಿಗೆ ಮನೆಯಲ್ಲಿ ಇರಲು ನೀಡುತ್ತೇವೆ ಎಂದು ಹೇಳಿದ ಸರ್ಕಾರ ಇಂದು ಅದರ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ. ಇದರಿಂದ ದಿಕ್ಕು ತಿಳಿಯದ ಸಂತ್ರಸ್ತರು ಬಿದ್ದಿರುವ ಮನೆಯಲ್ಲಿ ವಾಸವಾಗಿದ್ದಾರೆ.

ಅಗಸ್ಟ್‌ ತಿಂಗಳಲ್ಲಿ ರಾತ್ರೋ ರಾತ್ರೀ ಊರಿಗೆ ನೀರು ನುಗ್ಗಿದ್ದರಿಂದ ಕೂಡಲೇ ಇಲ್ಲಿಗೆ ಬಂದೇವಿ. ಆದರೆ ನಮಗೆ ಇಲ್ಲಿ ಯಾವ ಸೌಲಭ್ಯಗಳು ಇಲ್ಲಾರಿ. ಮನೆಯ ಕಿಟಕಿ,ಬಾಗಿಲುಗಳು ಒಂದು ಸುದ್ದ ಇಲ್ಲರ್ರೀ. ಇದರಿಂದ ದುಡಿಯೋದು ಬಿಟ್ಟು ಒಬ್ಬರೂ ದಿನಾ ಮನೆ ಕಾಯುವಂತಾಗಿದೆ. ಊರಿಗೆ ನೀರು ಹೊಕ್ಕಾಗ ರಾಜಕಾರಣಿಗಳು, ಅಧಿಕಾರಿಗಳು ಎಲ್ಲ ಸೌಲಭ್ಯ ಒದಗಿಸುತ್ತೇವೆ ಎಂದು ಭರವಸೆ ನೀಡಿದ್ದರೂ ಅಂದು ಹೇಳಿ ಹೋದವರು ಮರಳಿ ಬಂದಿಲ್ಲ.
ಶಂಕ್ರಪ್ಪ ಹಡಪದ,
ದಾವಲಸಾಬ ನದಾಫ್‌, ಅಮರಗೋಳ ಸಂತ್ರಸ್ತರು

ಸರ್ವೇ ಕಾರ್ಯ ಮುಗಿಸಿ ಅಂದಾಜು ಪಟ್ಟಿಯನ್ನು ಜಿಲ್ಲಾ ಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರದಿಂದ ಅನುಮೋದನೆಯಾಗಿ ಬಂದ ನಂತರ ನವಗ್ರಾಮಗಳಲ್ಲಿ ಇರುವ ಆಸರೆ ಮನೆಗಳ ಕಿಟಕಿ, ಬಾಗಿಲುಗಳ ದುರಸ್ತಿ ಸೇರಿದಂತೆ ಮೂಲ ಸೌಲಭ್ಯ ಒದಗಿಸಲಾಗುತ್ತದೆ.
ಜೆ.ಬಿ.ಜಕ್ಕನಗೌಡ್ರ,
ತಹಶೀಲ್ದಾರ್‌

ಯಚ್ಚರಗೌಡ ಗೋವಿಂದಗೌಡ್ರ

Advertisement

Udayavani is now on Telegram. Click here to join our channel and stay updated with the latest news.

Next