Advertisement

ಬಾದಾಮಿ ತೇರೆಳೆಯಲು ಒಯ್ಯುತ್ತಾರೆ ಮಾಡಲಗೇರಿಯ ಹಗ್ಗ

10:41 AM Jan 20, 2019 | |

ರೋಣ: ಬಾದಾಮಿ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಜ. 21ರಂದು ನಡೆಯಲಿರುವ ರಥೋತ್ಸವಕ್ಕೆ ಮಾಡಲಗೇರಿ ಗ್ರಾಮದಿಂದ ಹಗ್ಗ ಹೊತ್ತ ಹಳಿಬಂಡಿ ಬನದ ಹುಣ್ಣಿಮೆಯ ಬೆಳಗ್ಗೆ 8ಕ್ಕೆ ಗ್ರಾಮದಿಂದ ಹೊರಡುವುದು ಸಂಪ್ರದಾಯ. ಸಾವಿರಾರು ಭಕ್ತರ ಮೆರವಣಿಗೆ ಮೂಲಕ ನೈನಾಪುರ, ಢಾಣಕಶೀರೂರ, ಚೊಳಚಗುಡ್ಡ ಗ್ರಾಮಗಳ ಮುಖಾಂತರ ದಾರಿ ಮಧ್ಯದಲ್ಲಿ ಮಲಪ್ರಭಾ ನದಿ ದಾಟಿ ಮಧ್ಯಾಹ್ನ 3ಕ್ಕೆ ಬನಶಂಕರಿ ತಲುಪುತ್ತದೆ.

Advertisement

ಈ ಹಗ್ಗದ ಹಳಿಬಂಡಿಯ ಮುಖಂಡರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ಆಶೀರ್ವಾದ ಪಡೆದು ತೇರು ಎಳೆಯಲು ಹಗ್ಗ ಅರ್ಪಿಸುತ್ತಾರೆ. ನಂತರ ಸಂಜೆ 6ಕ್ಕೆ ರಥೋತ್ಸವ ನಡೆಯುತ್ತದೆ. ಬನಶಂಕರಿ ದೇವಿಯ ತವರು ಮನೆಯವರಾದ ಗದಗ ಜಿಲ್ಲೆ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಸಮಸ್ತ ಜನತೆ ತಾವೆ ಪುಂಡಿನ ನಾರಿನಿಂದ ತಯಾರಿಸಿದ ಹಗ್ಗವನ್ನು ಹಿಗ್ಗಿನಿಂದ ಹದಿನಾರು ಎತ್ತಿನ ಎರಡು ಹಳಿಬಂಡಿಯಲ್ಲಿ ಕೊಂಡೊಯ್ಯುವ ಪ್ರತಿತಿ ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ. ಜಾತ್ರೆಗೆ ಸೇರುವ ಲಕ್ಷಾಂತರ ಜನರ ಮಧ್ಯೆ ಈ ಗ್ರಾಮದ ಜನರೇ ಕೇಂದ್ರ ಬಿಂದುವಾಗಿರುತ್ತಾರೆ.

ಬದಾಮಿ ಬನಶಂಕರಿ ದೇವಿ ಜಾತ್ರೆಗೂ ಮಾಡಲಗೇರಿ ಗ್ರಾಮಕ್ಕೆ ಪಾರಂಪರಿಕ ಅವಿನಾಭಾವ ಸಂಬಂಧವೆ ಹಗ್ಗವನ್ನು ಹೊತ್ತೂಯ್ಯುವುದಾಗಿದೆ. ಮಾಡಲಗೇರಿಯ ಗೌಡರ ಮನೆತನಗಳಾದ ಹಿರೇಸಕ್ಕರಗೌಡ್ರ, ಅಮಾತ್ಯಗೌಡ್ರ, ತಿಪ್ಪನಗೌಡ್ರ, ರಾಯನಗೌಡ್ರ, ಭೀಮನಗೌಡ, ಗೋವಿಂದಗೌಡ್ರ, ಬಾಳನಗೌಡ್ರ, ಬಾಲನಗೌಡ್ರ, ಹಿರೇಕೆಂಚನಗೌಡ್ರ, ಸಣ್ಣಸಕ್ಕರಗೌಡ್ರ ಸೇರಿದಂತೆ ಭಕ್ತಿಯಿಂದ ಇತರರು ಸರದಿಯ ಮೇಲೆ ಹಗ್ಗವನ್ನು ಒಯ್ಯುವ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ.

ಈ ಗೌಡರ ಮನೆತನಗಳಲ್ಲಿ ಎರಡು ಭಾಗಗಳಾಗಿ ಒಂದು ಭಾಗದವರು ಒಂದು ಬಂಡಿ, ಇನ್ನೊಂದು ಭಾಗದವರು ಒಂದು ಹಳಿಬಂಡಿಯಂತೆ ಒಟ್ಟು ಎರಡು ಹಳಿಬಂಡಿಯಲ್ಲಿ ತೇರಿನ ಹಗ್ಗವನ್ನು ತೆಗೆದುಕೊಂಡು ಹೋಗುತ್ತಾರೆ. ಒಂದೊಂದು ಹಳಿಬಂಡಿಗೆ 16 ಎತ್ತುಗಳನ್ನು ಹೂಡುತ್ತಾರೆ. ಈ ಹಳಿಬಂಡಿ ಆರಂಭದಲ್ಲಿ ಹೂಡುವ ಎತ್ತುಗಳು ಕಿಲಾರಿ ತಳಿಯ ಹೋರಿಗಳನ್ನು ಕುತನಿ ಜೂಲ, ತೋಗಲಿನ ಬಾಸಿಂಗ, ಹಣೀ ಕಟ್ಟು, ಗೊಂಡೆ, ಕಂಬನಸು, ಸೇವಂತಿಗಿ ಹೂ ಮೊದಲಾದ ವಸ್ತುಗಳಿಂದ ಶೃಗರಿಸಲಾಗುತ್ತದೆ.

ಊರಿಗೆ ಊರೆ ಜಮಾ: ಈ ಗ್ರಾಮದ ಅತೀ ಮುಖ್ಯವಾದ ಹಬ್ಬ ಇದು. ಈ ಗ್ರಾಮದಿಂದ ಬೇರೆ ಸ್ಥಳಗಳಲ್ಲಿ ಕೆಲಸಕ್ಕಾಗಿ ಗುಳೆ ಹೋದ ಜನರು, ಸರ್ಕಾರಿ ಸೇವೆಗೆ ಹೋದವರು, ಈ ಗ್ರಾಮದ ಮದುವೆಯಾಗಿ ಬೇರೆ ಬೇರೆ ಗ್ರಾಮಗಳಿಗೆ ಹೋಗಿರುವ ಹೆಣ್ಣು ಮಕ್ಕಳು ಜಾತ್ರೆ ಪೂರ್ವದಲ್ಲಿಯೇ ಹಾಜರಾಗುವ ಮುಖಾಂತರ ಎಲ್ಲರಿಗೂ ಹೊಸ ಬಟ್ಟೆ ಸೇರಿದಂತೆ ವಿವಿಧ ವಜ್ರ ವೈಡೂರ್ಯವನ್ನು ಧರಿಸುವ ಮುಖಾಂತರ ವಿಜೃಭಂಣೆಯಿಂದ ಆಚರಿಸುತ್ತಾರೆ.

Advertisement

ಬನಶಂಕರಿ ತೇರಿನ ಹಗ್ಗವನ್ನು ಪುಂಡಿನ ನಾರಿನಿಂದಲೇ ತಯಾರಿಸುತ್ತಾರೆ. ಹಗ್ಗಗಳು ಹರಿಮುರಿಯಾದಾಗ ಗ್ರಾಮಸ್ಥರು ಸಾವಿರಾರು ರೂ.ಗಳ ಖರ್ಚು ಮಾಡಿ ರಿಪೇರಿ ಮಾಡಿಸುವರು. ಇದಕ್ಕೂ ಮೊದಲು ರೇಷ್ಮೆ ಸೀರೆಗಳಿಗೆ ಪ್ರಸಿದ್ಧವಾದ ಗುಳೇದಗುಡ್ಡದ ಗ್ರಾಮಸ್ಥರು ತಾಯಿ ರಥಕ್ಕೆ ರೇಷ್ಮೆ ಹಗ್ಗುವನ್ನು ತರುತ್ತೇವೆ ಎಂದರು ತಾಯಿ ಒಪ್ಪದೆ ತನ್ನ ತವರಿನವರು ತರುವ ಪುಂಡಿ ನಾರಿನ ಹಗ್ಗವೆ ಬೇಕು ಎಂದು ಹೇಳಿದ ಕುರುಹುಗಳ ನಡೆದಿವೆ. ಅದರಂತೆ ಈ ವರ್ಷವೂ ಹಗ್ಗ ಹರಿಮುರಿಯಾಗಿದ್ದು, ಊರಿನ ಹಿರಿಯ ಜೀವಿಗಳು ವಾರಕ್ಕೂ ಹೆಚ್ಚು ಸಮಯ ರಿಪೇರಿ ಕೆಲಸ ಮಾಡಿದ್ದಾರೆ.

ಭಯಂಕರ ಭಾರ ಹೊತ್ತು ಹಳಿಬಂಡಿಗಳನ್ನು ಉಸುಕು ತುಂಬಿದ ಮತ್ತು ಹರಿಯುವ ನದಿಯಲ್ಲಿ ಹೋರಿಗಳ ನಿಲ್ಲದೆ ಎಳೆಯಬೇಕು. ಅದಕ್ಕೆಂದೇ ಎರಡು ತಿಂಗಳ ಮುಂಚೆಯೇ ಹೋರಿಗಳನ್ನು ಖರೀದಿಸಿ ಅವುಗಳನ್ನು ತಯಾರುಗೊಳಿಸುತ್ತಾರೆ. ಆರು ಕುಟುಂಬಗಳಲ್ಲಿ ಒಂದು ಬಂಡಿಗೆ ಮೂರು ಕುಟುಂಬಗಳು ಆ ಕುಟುಂಬಗಳಲ್ಲೇ ಪ್ರತಿ ವರ್ಷ ಒಂದು ಮನೆತನಕ್ಕೆ ಹೋರಿ ಖರೀದಿಸುವ ಜವಾಬ್ದಾರಿ ತಗೆದುಕೊಳ್ಳುತ್ತಾರೆ.

ಮಾಡಲಗೇರಿ ಗ್ರಾಮದ ಸಮಸ್ತ ಜನರಿಂದ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ವಿಶಿಷ್ಟ ಹಬ್ಬ ಇದಾಗಿದೆ. ಹೀಗೆ ಮುಂದಿನ ಪೀಳಿಗೆಗೆ ಇದು ಮುಂದುವರಿಯಲಿ.
•ಮಹಾಗುಂಡಪ್ಪ ಕೆಂಗಾರ, ಭಕ್ತ

Advertisement

Udayavani is now on Telegram. Click here to join our channel and stay updated with the latest news.

Next