Advertisement
ಈ ನಾಣ್ಣುಡಿ ಇಂಗ್ಲಿಷ್‌ನಲ್ಲಿ ಬಹಳ ಜನಪ್ರಿಯ. ಇದರ ಅರ್ಥ ವಿಸ್ತಾರವೂ ಬಹಳ ದೊಡ್ಡದು. ಒಂದೊಂದು ಕೋನದಲ್ಲಿ ಒಂದೊಂದು ವಿಧವಾಗಿ ವ್ಯಾಖ್ಯಾನಿಸಬಹುದು. ಆದರೆ ಬಹಳ ಮುಖ್ಯವಾಗಿ ಈ ನಾಣ್ಣುಡಿಯನ್ನು ಬಳಸುವುದು ಒಳ್ಳೆಯದರ ಕುರಿತಾಗಿ. ಯಾವುದೇ ಒಳ್ಳೆಯದು ಒಂದು ದಿನದಲ್ಲಿ ಸೃಷ್ಟಿಯಾಗುವುದಿಲ್ಲ, ನಿತ್ಯವೂ ಪ್ರಯತ್ನ ಮುಂದುವರಿದಿರಲೇಬೇಕು. ಇದನ್ನು ನಮ್ಮ ಹವ್ಯಾಸದ ನೆಲೆಯಲ್ಲೂ ಅನ್ವಯಿಸಿಕೊಳ್ಳಬಹುದೆನ್ನಿ. ಒಂದು ಒಳ್ಳೆಯ ಗುಣ ನಮ್ಮೊಳಗೆ ಒಡಮೂಡಿ ಬೆಳೆಯಬೇಕಾದರೆ ಒಂದು ದಿನದಲ್ಲಿ ಆಗುವ ಕೆಲಸವೇ? ಖಂಡಿತಾ ಅಲ್ಲ. ಅದಕ್ಕೆ ಹಲವು ದಿನಗಳು ಬೇಕು. ಇಂಥದ್ದೇ ಒಂದು ಅರ್ಥವನ್ನು ಹೋಲುವ ಚೀನಿಗಾದೆಯೂ ಒಂದಿದೆ. ಪ್ರತಿ ಬೃಹತ್ ಪಯಣವೂ ಶುರುವಾಗುವುದೂ ಮೊದಲ ಒಂದು ಹೆಜ್ಜೆ ಯಿಂದಲೇ ಎಂಬುದು. ಇದೂ ಸಹ ಬಹುತೇಕ ಇಂಥದ್ದೇ ಒಂದು ಒಳ್ಳೆಯ ಧನಾತ್ಮಕ (ಪಾಸಿಟಿವ್) ಸಾಧ್ಯತೆಯನ್ನು ಹೇಳುತ್ತದೆ. ಈ ಎರಡೂ ನಾಣ್ಣುಡಿಗಳನ್ನು ಸರಿಯಾಗಿ ನಾವು- ನಗರವನ್ನು ಸದಾ ಪ್ರೀತಿಸುವ, ಅಲ್ಲೇ ಉಳಿಯಲು ಬಯಸುವ ನಾಗರಿಕರು- ಪಾಲಿಸಿದರೆ ನಮ್ಮ ನಗರಗಳನ್ನು ಸ್ವರ್ಗವಾಗಿಸ ಬಹುದು. ಇದು ನಿಜಕ್ಕೂ ದೊಡ್ಡ ಸಂಗತಿಯೇನಲ್ಲ.
ಈಗ ಬಹುತೇಕ ನಗರಗಳ ಸ್ಥಳೀಯ ಆಡಳಿತ ತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿಗಾಗಿ ಗಮನ ನೀಡುತ್ತಿವೆ. ಕೆಲವೆಡೆ ತ್ಯಾಜ್ಯ ಸಂಗ್ರಹ ಜಾರಿಯಲ್ಲಿದೆ. ಆದರೆ ಸಮರ್ಪಕ ವಿಲೇವಾರಿಗೆ ಇನ್ನೂ ವ್ಯವಸ್ಥಿತ ವಿಧಾನ ಜಾರಿಗೆ ಬಂದಿಲ್ಲ. ಬಹುತೇಕ ಕಡೆ ದೂರದ ಮತ್ತೂಂದು ಊರಿನಲ್ಲಿ ರಾಶಿ ಹಾಕಲಾಗುತ್ತಿದೆ. ಕೆಲವೇ ನಗರಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ರೂಪಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿಯ ಯಶಸ್ಸು ಇರುವುದು ಎರಡು ಭಾಗದಲ್ಲಿ. ಆ ಪೈಕಿ ಮೊದಲನೆಯ ಭಾಗ ನಮ್ಮಲ್ಲೇ. ಎರಡನೇ ಭಾಗ ಆಡಳಿತದಲ್ಲಿ.
Related Articles
Advertisement
ನಗರವನ್ನು ಪ್ರೀತಿಸುವ ನಾವು ಕಸದ ವಿಂಗಡಣೆಯ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ಮಾಡಬಹುದಾದ ಉಪಕಾರ ಬಹಳ ದೊಡ್ಡದಿದೆ. ಇದನ್ನು ನಾವು ಉಪಕಾರ ಎಂಬ ಭಾವದಿಂದ ಮಾಡಬೇಕಿಲ್ಲ, ಕರ್ತವ್ಯ ಎನ್ನುವ ಭಾವದಿಂದಲೇ ಮಾಡಬೇಕು. ಏಕೆಂದರೆ, ಉಪಕಾರ ಎನ್ನುವ ಕೋನದಿಂದ ನೋಡುತ್ತಿರು ವುದರಿಂದಲೇ ಶೇ. 100ರಷ್ಟು ಕಸ ವಿಂಗಡಣೆ ಸಾಧ್ಯವಾಗುತ್ತಿಲ್ಲ. ಒಂದು ಅಂದಾಜಿನ ಲೆಕ್ಕ ಹೇಳುತ್ತೇನೆ. ಸ್ವತ್ಛ ಭಾರತ ಅಭಿಯಾನದ ಲೆಕ್ಕ ಪ್ರಕಾರವೇ ಒಂದು ಲಕ್ಷ ಜನಸಂಖ್ಯೆ ಇರುವಲ್ಲಿ ದಿನಕ್ಕೆ ಸುಮಾರು 18 ಸಾವಿರ ಕೆಜಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದರಲ್ಲಿ ಶೇ. 55-60 ರಷ್ಟು ಕಸ ಇರುವುದು ಹಸಿ ಕಸ.
ಶೇ. 15 ರಿಂದ 20 ರಷ್ಟು ಪುನರ್ ಬಳಕೆ ಮಾಡಬಹುದಾದ ಕಸ. ಉಳಿದ ಶೇ. 20 ರಿಂದ 25 ರಷ್ಟು ಅಪಾಯಕಾರಿ ತ್ಯಾಜ್ಯ. ಎಲ್ಲವೂ ಒಟ್ಟಿಗೇ ಹಾಕಿ ಬಿಟ್ಟರೆ ಅದರ ನಿರ್ವಹಣೆಯೇ ದೊಡ್ಡ ತಲೆ ಬಿಸಿಯಾಗುತ್ತದೆ. ಅಷ್ಟೇ ಅಲ್ಲ. ನಿರ್ವಹಣೆಯೇ ಕಷ್ಟ. ಇದಕ್ಕಾಗಿ ಕೊಂಚ ಮುತುವರ್ಜಿ ವಹಿಸೋಣ. ನಮ್ಮಲ್ಲೇ ಇರುವ ತ್ಯಾಜ್ಯವನ್ನು ವಿಂಗಡಿಸಿ ಕೊಡೋಣ. ಇದಕ್ಕೆ ಹೆಚ್ಚೇನೂ ಸಮಯ ತಗಲುವುದಿಲ್ಲ; ನಮ್ಮೊಳಗೆ ಇರುವ ಚಿಪ್‌ನಲ್ಲಿ ಒಂದು ಕಮ್ಯಾಂಡ್ ಸೇರಿಸಿಕೊಂಡು ಅಪ್ ಟುಡೇಟ್ ಮಾಡಿಕೊಳ್ಳಬೇಕಷ್ಟೇ. ಈ ಹಿಂದೆ ಈ ಚಿಪ್ ರೂಪಿಸಿದಾಗ ಈ ಕಮ್ಯಾಂಡ್‌ನ ಅಗತ್ಯವಿರಲಿಲ್ಲ. ಆದರೀಗ ತೀರಾ ತುರ್ತಾಗಿ ಆಗಬೇಕಿದೆ. ಅಷ್ಟಾದರೆ ನಮ್ಮ ನಗರದ ಭವಿಷ್ಯ ಹೆಚ್ಚೆಂದರೆ ನೂರು ವರ್ಷ ಹೆಚ್ಚಿಸಿದಂತೆ. ನಗರದ ಆರೋಗ್ಯವನ್ನು ಕಾಪಾಡುವುದೆಂದರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಂಡಂತೆಯೇ.
ನಡೆದು ಹೋಗೋಣ, ಬಸ್ಸನ್ನು ಹತ್ತೋಣಇದೂ ಅಷ್ಟೇ. ನಮ್ಮ ನಗರವನ್ನು ಉಳಿಸಿಕೊಳ್ಳಲು ಮಾಡ ಬಹುದಾದ ಮತ್ತೂಂದು ಪ್ರಯತ್ನ. ನಗರದ ಸಮಸ್ಯೆಗಳೇನೆಂದು ಪಟ್ಟಿ ಮಾಡಿ ನೋಡಿ. ಅದರಲ್ಲಿ ಮೊದಲನೆ ಸಾಲಿನಲ್ಲಿ ನಿಲ್ಲುವುದೆಂದರೆ ವಾಹನ ದಟ್ಟಣೆ. ಯಾವಾಗಲೂ ತಲೆನೋವು ತರುವ ಟ್ರಾಫಿಕ್ ಜಾಮ್. ಈ ಸಮಸ್ಯೆಯ ಮೂಲ ಎಲ್ಲಿದೆ ಎಂದು ಹುಡುಕಿಕೊಂಡರೆ ಮತ್ತೆ ಶೋಧದ ಮುಳ್ಳು ಬಂದು ನಿಲ್ಲುವುದು ನಮ್ಮ ಮನೆ ಎದುರೇ. ಕಾರಣ ಎಲ್ಲರಿಗೂ ತಿಳಿದೇ ಇದೆ. ನಮ್ಮ ಮನೆಯಲ್ಲಿರುವವರ ಲೆಕ್ಕದಲ್ಲಿ ವಾಹನಗಳನ್ನು ತುಂಬಿಕೊಂಡಿದ್ದೇವೆ. ನಾಲ್ಕು ವಯಸ್ಕ ಅಥವಾ ಉದ್ಯೋಗಕ್ಕೆ ಹೋಗುವ ಜನರು ಒಂದು ಮನೆಯಲ್ಲಿದ್ದರೆ, ನಾಲ್ಕು ವಾಹನಗಳು ನಲಿ ಯುತ್ತಿರುತ್ತವೆ. ಇದರ ಅಗತ್ಯ ಎಷ್ಟು ಹಾಗೂ ಯಾವ ಪ್ರಮಾಣದ್ದು ಎಂಬುದನ್ನು ಒಂದು ಕ್ಷಣವೂ ನಾವು ಲೆಕ್ಕಕ್ಕೆ ಹಾಕುವುದಿಲ್ಲ. ಇದಕ್ಕೂ ಅಂಕಿ ಅಂಶ ಹೇಳುವುದಾದರೆ, 2013-14 ರಿಂದ 2017-18 ರಷ್ಟರಲ್ಲಿ ಅಂದರೆ ಐದು ವರ್ಷಗಳಲ್ಲಿ ಸುಮಾರು 15 ಲಕ್ಷ ವಾಹನಗಳು ಬೆಂಗಳೂರು ರಸ್ತೆಗೆ ಇಳಿದಿವೆ. ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 50.1 ಲಕ್ಷ ದ್ವಿಚಕ್ರ ವಾಹನಗಳು ಹಾಗೂ 13 ಲಕ್ಷ ಕಾರುಗಳು ರಸ್ತೆಯನ್ನು ಅಲಂಕರಿಸಿದ್ದವು. ಇವೆಲ್ಲವೂ ಹೊರಸೂಸುತ್ತಿರುವ ಹೊಗೆ, ಸೃಷ್ಟಿಸುತ್ತಿರುವ ಮಾಲಿನ್ಯವೂ ದೊಡ್ಡ ಪ್ರಮಾಣದ್ದೇ. ಅದರೊಂದಿಗೆ ಟ್ರಾಫಿಕ್ ಜಾಮ್, ಕಳೆದು ಹೋಗುತ್ತಿರುವ ಸಮಯವೂ ಅಮೂಲ್ಯವಾದುದೇ. ಏನು ಮಾಡಬಹುದು?
ಈ ಸಮಸ್ಯೆಯಿಂದ ಮುಕ್ತಿ ಹೊಂದುವುದು ಹೇಗೆಂದರೆ ನಾವು ನಡೆದು ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದೂ ಸಹ ನಮ್ಮ ಪ್ರೀತಿಯ ನಗರಗಳ ಉದ್ಧಾರಕ್ಕಾಗಿಯೇ. ಸ್ವಲ್ಪ ಹತ್ತಿರದ ಪ್ರದೇಶಗಳನ್ನು ನಾವು ನಡೆದೇ ಹೋಗಬಹುದಲ್ಲಾ. ಅದರಿಂದ ವಾಹನಕ್ಕೆ ಹೂಡುವ ಬಂಡವಾಳ, ಅದರ ಹೊಟ್ಟೆಗೆ ತುಂಬಿಸುವ ಪೆಟ್ರೋಲ್ ವೆಚ್ಚ, ಅದರಿಂದ ಉಪಕಾರವೆಂಬಂತೆ ಪರಿಸರಕ್ಕೆ ಬಿಡುವ ಹೊಗೆ-ಮಾಲಿನ್ಯ ಎಲ್ಲವನ್ನೂ ತಪ್ಪಿಸಬಹುದಲ್ಲ. ಇದೂ ಸಹ ನಮ್ಮ ನಗರವನ್ನು ಉಳಿಸುವುದಕ್ಕಾಗಿ ನಾವು ಮಾಡ ಬಹುದಾದ ಚಿಕ್ಕ ಉಪಕಾರ. ಉಳಿದಂತೆ ಸ್ವಲ್ಪ ದೂರಕ್ಕೆ ಬಸ್ಸುಗಳನ್ನು ಅವಲಂಬಿಸಬಹುದು. ಸಾಮೂಹಿಕ ಸಾರಿಗೆ ವ್ಯವಸ್ಥೆಯನ್ನು ಅಪ್ಪಿಕೊಂಡರೆ ಸಿಗುವ ಸುಖವೇ ಬೇರೆ. 20 ವರ್ಷಗಳ ಹಿಂದೆ ಹೋಲಿಸಿದರೆ ಈಗ ಬೆಂಗಳೂರಿನಲ್ಲಿ ಸಾಮೂಹಿಕ ಸಾರಿಗೆಯ ಸ್ಥಿತಿ ಸ್ವಲ್ಪ ಪರವಾಗಿಲ್ಲ. ಮೆಟ್ರೊ ಬಂದಿದೆ, ಒಂದಿಷ್ಟು ಬಸ್ಸುಗಳು ಹೆಚ್ಚಾಗಿವೆ. ಇವೆಲ್ಲವನ್ನೂ ನಾವು ದುಡಿಸಿಕೊಂಡರೆ ಸಾಕು. ಎಲ್ಲವೂ ಸರಿ, ರಸ್ತೆಯಲ್ಲಿ ನಡೆದು ಹೋಗಲು ಸುರಕ್ಷತೆ ಇದೆಯೇ? ಫುಟ್ ಪಾತ್‌ಗಳೆಲ್ಲಾ ಮಾಯವಾಗಿದೆಯಲ್ಲಾ? ಎಂಬ ಪ್ರಶ್ನೆ ನಮ್ಮೊಳಗೆ ಹುಟ್ಟಿಕೊಳ್ಳುತ್ತದೆ. ಅದನ್ನು ಚರ್ಚಿಸುವ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವ ಪರಿಯೇ ಭಿನ್ನವಾದುದು. ಇಂಥ ಹತ್ತಾರು ಪ್ರಯತ್ನಗಳನ್ನು ಮುಕ್ತ ಮನಸ್ಸಿನಿಂದ ಮಾಡಿದರೆ ನಿಜಕ್ಕೂ ನಮ್ಮ ನಗರಗಳನ್ನು ಉಳಿಸಿಕೊಳ್ಳಬಹುದು. ಇದಕ್ಕೆ ಬೆಟ್ಟ ಹತ್ತುವುದೂ ಬೇಕಿಲ್ಲ, ಗುಡ್ಡ ಕಡಿಯುವುದೂ ಬೇಕಿಲ್ಲ. ನಿಜ, ರೋಮ್ ನಗರವನ್ನು ಒಂದು ದಿನದಲ್ಲಿ ಕಟ್ಟಲಾಗಲಿಲ್ಲ!