Advertisement
ಆಗ ಅವರು ತಮ್ಮ ಮನಸ್ಸನ್ನು ಭಗವಂತನ ಧ್ಯಾನದಿಂದ ಪವಿತ್ರವಾಗಿಸಿಕೊಂಡು ಸನಕ, ಸನಂದನ, ಸನಾತನ, ಸನಾತ್ಕುಮಾರರೆಂಬ ನಾಲ್ಕು ಮಂದಿ ಧರ್ಮಪಾರಾಯಣರಾದ ಮುನಿ ಶ್ರೇಷ್ಠರನ್ನು ಸೃಷ್ಟಿಸಿದರು. ನಂತರ ಬ್ರಹ್ಮದೇವರು ತನ್ನ ಮಾನಸ ಪುತ್ರರಿಗೆ ” ಪುತ್ರರೇ ನೀವು ಸೃಷ್ಟಿಯಲ್ಲಿ ತೊಡಗಿರೆಂದು ಹೇಳಿದರು”. ಆದರೆ ಹುಟ್ಟಿನಿಂದಲೇ ಮೋಕ್ಷಧರ್ಮವುಳ್ಳ ವಾಸುದೇವ ಪಾರಾಯಣರಾದ ಸನಕಾದಿಗಳು ಪ್ರವೃತ್ತಿಧರ್ಮ ರೂಪವಾದ ಸೃಷ್ಟಿಯನ್ನು ಮಾಡಲು ಇಚ್ಚಿಸಲಿಲ್ಲ, ತನ್ನ ಪುತ್ರರು ತನ್ನ ಅಪ್ಪಣೆಯನ್ನು ತಿರಸ್ಕರಿಸಿದ್ದರಿಂದ ಬ್ರಹ್ಮದೇವರಿಗೆ ಬಹಳ ಕ್ರೋಧವುಂಟಾಯಿತು.
Related Articles
Advertisement
ಅನಂತರ ಭಗವಂತನ ಶಕ್ತಿಯಿಂದ ಕೂಡಿದ ಬ್ರಹ್ಮದೇವರು ಸೃಷ್ಟಿಯನ್ನು ಮಾಡಲು ಸಂಕಲ್ಪಿಸಿ ತನ್ನ ತೊಡೆಯಿಂದ ನಾರದನನ್ನೂ, ಅಂಗುಷ್ಠದಿಂದ ದಕ್ಷನನ್ನೂ, ಪ್ರಾಣದಿಂದ ವಸಿಷ್ಠನನ್ನೂ, ತ್ವಚೆಯಿಂದ ಭೃಗುವನ್ನೂ , ಕೈಯಿಂದ ಕ್ರತುವನ್ನೂ , ನಾಭಿಯಿಂದ ಪುಲಹನನ್ನೂ, ಕಿವಿಯಿಂದ ಪುಲಸ್ತ್ಯರನ್ನೂ , ಬಾಯಿಯಿಂದ ಅಂಗೀರಸನನ್ನೂ , ನೇತ್ರಗಳಿಂದ ಅತ್ರಿಯನ್ನೂ, ಮನದಿಂದ ಮರೀಚಿಯನ್ನೂ ಸೃಷ್ಟಿಸಿದರು.
ನಂತರ ಬ್ರಹ್ಮದೇವರ ಬಲಗಡೆಯ ಸ್ತನದಿಂದ ಧರ್ಮದ ಉತ್ಪನ್ನವಾಯಿತು ಅದರಿಂದ ಸ್ವಯಂ ನಾರಾಯಣನು ಅವತರಿಸಿದನು. ಬ್ರಹ್ಮದೇವರ ಬೆನ್ನಿನಿಂದ ಅಧರ್ಮದ ಜನ್ಮವಾಯಿತು. ಅದರಿಂದ ಜಗತ್ತಿಗೆ ಭಯವನ್ನುಂಟುಮಾಡುವ ಮೃತ್ಯುವು ಜನಿಸಿದನು. ಹೀಗೆಯೇ ಹೃದಯದಿಂದ ಕಾಮವೂ, ಹುಬ್ಬುಗಳಿಂದ ಕ್ರೋಧವೂ, ಕೆಳಗಿನ ತುಟಿಯಿಂದ ಲೋಭವೂ, ಬಾಯಿಯಿಂದ ಸರಸ್ವತಿಯೂ, ಲಿಂಗದಿಂದ ಸಮುದ್ರವೂ, ಗುದದಿಂದ ನಿಋ್ರುತಿಯೂ ,ನೆರಳಿನಿಂದ ಕರ್ದಮರೂ ಜನಿಸಿದರು. ಹೀಗೆ ಇಡೀ ಜಗತ್ತು ಸೃಷ್ಟಿಕರ್ತರಾದ ಬ್ರಹಮ್ಮದೇವರ ಶರೀರ ಹಾಗೂ ಮನಸ್ಸುಗಳಿಂದ ಉಂಟಾಗಿದೆ.
ನಂತರ ಬ್ರಹ್ಮದೇವರು ತಮ್ಮ ಪೂರ್ವ ದಿಕ್ಕಿನ ಮುಖದಿಂದ ಋಗ್ವೇದವನ್ನೂ, ದಕ್ಷಿಣದಿಂದ ಯಜರುವೇದ, ಪಶ್ಚಿಮದಿಂದ ಸಾಮವೇದ, ಉತ್ತರದಿಂದ ಅಥರ್ವವೇದಗಳನ್ನು ಹೀಗೆ ನಾಲ್ಕು ವೇದಗಳನ್ನೂ ಪ್ರಕಟಪಡಿಸಿದರು. ಇದೆ ಕ್ರಮದಲ್ಲೇ ನಾಲ್ಕು ಮಂದಿ ಋತ್ವಿಕ್ಕುಗಳಾದ ಹೋತೃವಿನ ಕರ್ಮವಾದ ಶಸ್ತ್ರವನೂ, ಅದ್ವರ್ಯುವಿನ ಕರ್ಮವಾದ ಇಜ್ಯೆಯನ್ನೂ ,ಉದ್ಗತೃವಿನ ಕರ್ಮವಾದ ಸ್ತುತಿ ಸ್ತೋಮವನ್ನು ಮತ್ತು ಬ್ರಹ್ಮನ ಕರ್ಮವಾದ ಪ್ರಯಶ್ಚಿತ್ತವನ್ನೂ ಹೊರಹೊಮ್ಮಿಸಿದರು.
ಹೀಗೆಯೆ ಆಯುರ್ವೇದ, ಧನುರ್ವೇದ, ಗಾಂಧರ್ವವೇದ ಮತ್ತು ಸ್ಥಾಪತ್ಯವೇದ ಈ ನಾಲ್ಕು ಉಪವೇದಗಳನ್ನು ಕ್ರಮವಾಗಿ ಪೂರ್ವದಿ ದಿಕ್ಕುಗಳ ಮುಖಗಳಿಂದಲೇ ನಿರ್ಮಾಣಮಾಡಿದರು. ಮತ್ತೆ ಸರ್ವಜ್ಞರಾದ ಆ ಬ್ರಹ್ಮದೇವರು ಇತಿಹಾಸ ಪುರಾಣರೂಪವಾದ ಐದನೆಯ ವೇದವನ್ನು ನಿರ್ಮಿಸಿದರು. ವಿದ್ಯೆ, ದಾನ, ತಪಸ್ಸು , ಸತ್ಯ ಎಂಬ ಧರ್ಮದ ನಾಲ್ಕು ಪಾದಗಳನ್ನೂ ಹಾಗೂ ನಾಲ್ಕು ಆಶ್ರಮಗಳು ಹಾಗೂ ಅವುಗಳ ವೃತ್ತಿಗಳು, ಎಲ್ಲವೂ ಬ್ರಹ್ಮ ದೇವರ ಮುಖಗಳಿಂದ ಉದ್ಭವಿಸಿದವು. ಹೀಗೆ ಬ್ರಹ್ಮದೇವರು ತಮ್ಮ ಶರೀರ ಮತ್ತು ಮನಸಿನಿಂದ ಈ ಜಗತ್ತನ್ನು ಸೃಷ್ಟಿಸಿದರು.