Advertisement

ರೋಹಿತ್‌-ರಾಹುಲ್‌ ಬೆಂಕಿ-ಬಿರುಗಾಳಿ

09:25 AM Dec 23, 2017 | |

ಇಂದೋರ್‌: ಮೊನ್ನೆಯಷ್ಟೇ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ರೋಹಿತ್‌ ಶರ್ಮ ದ್ವಿಶತಕ ಬಾರಿಸಿದ್ದು ಕ್ರಿಕೆಟ್‌ ಪ್ರೇಮಿಗಳ ಮನೋಪಟಲದಲ್ಲಿ ಮರೆಯದ ನೆನಪಾಗಿ ದಾಖಲಾಗಿದೆ. ಒಂದು ದ್ವಿಶತಕ ಹೊಡೆಯುವುದೇ ದೊಡ್ಡ ವಿಷಯವಾಗಿರುವಾಗ ರೋಹಿತ್‌ ತಾವೊಬ್ಬರೇ 3 ದ್ವಿಶತಕ ಹೊಡೆದು ವಿಶ್ವವಿಕ್ರಮಿಯಾದರು. ಈ ಸವಿ ನೆನಪಿನ ಗುಂಗಿನಲ್ಲಿದ್ದಾಗಲೇ ರೋಹಿತ್‌ ಮತ್ತೂಂದು ಜಂಟಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಶ್ರೀಲಂಕಾ ವಿರುದ್ಧ  ಇಂದೋರ್‌ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ 35 ಎಸೆತಕ್ಕೆ ಶತಕ ಬಾರಿಸಿದ್ದಾರೆ. ಇದು ಟಿ20 ಅಂತಾರಾಷ್ಟ್ರೀಯ
ಕ್ರಿಕೆಟ್‌ನ ಜಂಟಿ ವೇಗದ ಶತಕ.

Advertisement

ರೋಹಿತ್‌ ಅವರ ಅಬ್ಬರದಲ್ಲಿ ಮತ್ತೂಬ್ಬ ಆರಂಭಿಕ ಕೆ.ಎಲ್‌.ರಾಹುಲ್‌ ಅವರ ಆಸ್ಫೋಟಕ 89 ರನ್‌ ಮರೆಗೆ ಸರಿಯಿತು. ಈ ಸರಣಿಯಲ್ಲಿ ಸತತ 2ನೇ ಅರ್ಧಶತಕ ಬಾರಿಸಿದ ರಾಹುಲ್‌ ಬಹುಕಾಲದ ಟಿ20 ರನ್‌ ಬರವನ್ನು ನೀಗಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ತಂಡದಲ್ಲಿ ತಮ್ಮ ಸ್ಥಾನವನ್ನು ಪ್ರಶ್ನಾತೀತವಾಗಿಸಿಕೊಂಡಿದ್ದಾರೆ. ವಿಶ್ರಾಂತಿ ಮುಗಿಸಿ ಮರಳಿ ತಂಡಕ್ಕೆ ಬರುವ ಶಿಖರ್‌ ಧವನ್‌ ಪರಿಸ್ಥಿತಿಯೇನು ಎನ್ನುವುದು ಸದ್ಯದ ದೊಡ್ಡ ಗೊಂದಲ!
ಟಿ20ಯಲ್ಲಿ ಟಿ20 ವೇಗಕ್ಕೆ ತಕ್ಕಂತೇ ರೋಹಿತ್‌ ಆಡಿದರು. ಅವರ ಅಬ್ಬರಕ್ಕೆ ಸಾಟಿಯೇ ಇರಲಿಲ್ಲ. ಸಾಮಾನ್ಯವಾಗಿ ರೋಹಿತ್‌ ಆರಂಭದಲ್ಲಿ ನಿಧಾನವಾಗಿ ನಂತರ ಬಿರುಗಾಳಿಯಾಗುತ್ತಾರೆ. ಆದರಿಲ್ಲ ದಿಢೀರ್‌ ಬಡಿಯುವ ಸಿಡಿಲಿ
ನಂತೆ ಲಂಕಾ ಬೌಲರ್‌ಗಳ ಮೇಲೆರಗಿದರು. ಒಟ್ಟು 43 ಎಸೆತ ಎದುರಿಸಿದ ರೋಹಿತ್‌ 12 ಬೌಂಡರಿ, 10 ಸಿಕ್ಸರ್‌ ನೆರವಿಂದ 118 ರನ್‌ ಒಗ್ಗೂಡಿಸಿದರು. ಇವರೊಂದಿಗೆ ತಮ್ಮ ಪಾಡಿಗೆ ತಾವು ಸಿಡಿಯುತ್ತಲೇ ಹೋದ ರಾಹುಲ್‌ 49 ಎಸೆತದಲ್ಲಿ 5 ಬೌಂಡರಿ, 8 ಸಿಕ್ಸರ್‌ಗಳಿಂದ 89 ರನ್‌ ಬಾರಿಸಿದರು. 

ಭಾರತಕ್ಕೆ 88 ರನ್‌ ಜಯ: ಭಾರತ ನೀಡಿದ 261 ರನ್‌ ಗುರಿ ಬೆನ್ನತ್ತಿದ ಶ್ರೀಲಂಕಾ 17.2 ಓವರ್‌ಗಳಲ್ಲಿ ಅಷ್ಟೂ ವಿಕೆಟ್‌ ಕಳೆದುಕೊಂಡು 172 ರನ್‌ ಗಳಿಸಿತು. 88 ರನ್‌ಗಳಿಂದ ಗೆದ್ದ ಭಾರತ ಇನ್ನೂ ಒಂದು ಪಂದ್ಯ ಬಾಕಿಯಿರುವಂತೆಯೇ ಸರಣಿಯನ್ನು 2-0ಯಿಂದ ಜಯಿಸಿತು. ಈ ಗೆಲುವಿನಲ್ಲಿ ಮುಖ್ಯಪಾತ್ರ ವಹಿಸಿದ್ದು ಸ್ಪಿನ್ನರ್‌ ಕುಲದೀಪ್‌ ಯಾದವ್‌ ಅವರು 15ನೇ ಓವರ್‌ ನಲ್ಲಿ 3 ವಿಕೆಟ್‌ ಉರುಳಿಸಿದರು. ಆ ಓವರ್‌ನ ಮೊದಲೆರಡು ಎಸೆತದಲ್ಲಿ ವಿಕೆಟ್‌ ಕಿತ್ತರೂ, 3ನೇ ಎಸೆತದಲ್ಲಿ ವಿಕೆಟ್‌ ತಪ್ಪಿತು. ಹ್ಯಾಟ್ರಿಕ್‌ ಕೂಡ ತಪ್ಪಿತು. ಆದರೂ ಅದೇ ಓವರ್‌ ನಲ್ಲಿ ಇನ್ನೊಂದು ವಿಕೆಟ್‌ ಉರುಳಿಸಿದರು.

ಅಂ.ರಾ. ಟಿ20ಯಲ್ಲಿ ರೋಹಿತ್‌ ಜಂಟಿ ವಿಶ್ವ ದಾಖಲೆ  ಶ್ರೀಲಂಕಾ ವಿರುದ್ಧ 35 ಎಸೆತಕ್ಕೆ 101 ರನ್‌ ಗಳಿಸಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಜಂಟಿ ವಿಶ್ವದಾಖಲೆ ಸ್ಥಾಪಿಸಿದರು. 2017ರಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಡೇವಿಡ್‌ ಮಿಲ್ಲರ್‌ ಕೂಡ 35
ಎಸೆತಕ್ಕೆ ಶತಕ ಬಾರಿಸಿ ಟಿ20ಯಲ್ಲಿ ವೇಗದ ಶತಕ ದಾಖಲಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ದಾಖಲೆ ಮಾಡಿದ್ದರು. 

3 ರನ್‌ನಿಂದ ವಿಶ್ವದಾಖಲೆತಪ್ಪಿಸಿಕೊಂಡ ಭಾರತ ಭಾರತ 5 ವಿಕೆಟ್‌ಗೆ 260 ರನ್‌ ಬಾರಿಸಿ ಸಮೀಪದಲ್ಲಿ ವಿಶ್ವದಾಖಲೆ ತಪ್ಪಿಸಿಕೊಂಡಿತು. ಆದರೆ ಟಿ20 ಪಂದ್ಯವೊಂದರಲ್ಲಿ ಗರಿಷ್ಠ ರನ್‌ ಬಾರಿಸಿದ ಪಟ್ಟಿಯಲ್ಲಿ ಜಂಟಿ 2ನೇ ಸ್ಥಾನ ಪಡೆಯಿತು. 2007ರಲ್ಲಿ ಶ್ರೀಲಂಕಾ ತಂಡ ಕೀನ್ಯಾ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ 260 ರನ್‌ ಗಳಿಸಿತ್ತು. 2016ರಲ್ಲಿ ಇದೇ ಲಂಕಾದ ವಿರುದ್ಧ ಪಲ್ಲೆಕೆಲೆಯಲ್ಲಿ ನಡೆದ ಪಂದ್ಯದಲ್ಲಿ 263 ರನ್‌ ಗಳಿಸಿದ್ದ ಆಸ್ಟ್ರೇಲಿಯಾದ್ದು ಒಟ್ಟಾರೆ ಟಿ20 ಇನಿಂಗ್ಸ್‌ವೊಂದರ ಗರಿಷ್ಠ ರನ್‌ ವಿಶ್ವದಾಖಲೆ.

Advertisement

ಒಟ್ಟಾರೆ ಟಿ20ಯಲ್ಲಿ 3ನೇ ವೇಗದ ಶತಕ ರೋಹಿತ್‌ ಶರ್ಮ ಶತಕ ಟಿ20ಯಲ್ಲಿ ಒಟ್ಟಾರೆ 3ನೇ ಶತಕ ಬಾರಿಸಿದ್ದಾರೆ. ಗೇಲ್‌ ಪುಣೆ ವಿರುದ್ಧ ಐಪಿಎಲ್‌ನಲ್ಲಿ ಆರ್‌ಸಿಬಿ ಪರ 2013ರಲ್ಲಿ 30 ಎಸೆತಕ್ಕೆ ಶತಕ ಸಿಡಿಸಿದ್ದರು. 34 ಎಸೆತದಲ್ಲಿ ಶತಕ ಸಿಡಿಸಿದ ಸೈಮಂಡ್ಸ್‌ 2ನೇ ಸ್ಥಾನ. ನಮೀಬಿಯಾದ ವಾನ್‌ಡೆರ್‌ ಜತೆಗೆ 3ನೇ ಸ್ಥಾನವನ್ನು ರೋಹಿತ್‌ ಹಂಚಿಕೊಂಡಿದ್ದಾರೆ. 

165 ರನ್‌: ವಿಶ್ವದ 3ನೇ ಗರಿಷ್ಠ ಜತೆಯಾಟ  ರೋಹಿತ್‌ ಶರ್ಮ-ಕೆ.ಎಲ್‌.ರಾಹುಲ್‌ ಮೊದಲ ವಿಕೆಟ್‌ 165 ರನ್‌ ಒಗ್ಗೂಡಿಸಿ ಭಾರತದ ಪರ ಗರಿಷ್ಠ ಜತೆಯಾಟದ ಸಾಧನೆ ಮಾಡಿದರು. ಈ ಹಿಂದೆ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ರೋಹಿತ್‌-ಧವನ್‌ ಜೋಡಿ 158 ರನ್‌ ಗಳಿಸಿದ್ದು ಹಿಂದಿನ
ದಾಖಲೆಯಾಗಿತ್ತು. ವಿಶ್ವಮಟ್ಟದಲ್ಲಿ ನೋಡುವುದಾದರೆ ರೋಹಿತ್‌-ರಾಹುಲ್‌ ಮೊದಲ ವಿಕೆಟ್‌ಗೆ ಮಾಡಿದ ಜತೆಯಾಟ 3ನೇ ಸ್ಥಾನದಲ್ಲಿದೆ. 2016ರಲ್ಲಿ ನ್ಯೂಜಿಲೆಂಡ್‌ನ‌ ಆರಂಭಿಕ ಜೋಡಿ ಮಾರ್ಟಿನ್‌ ಗಪ್ಟಿಲ್‌-ಕೇನ್‌ ವಿಲಿಯಮ್ಸನ್‌ ಪಾಕಿಸ್ತಾನ ವಿರುದ್ಧ ಅಜೇಯ 173 ರನ್‌ ಜತೆಯಾಟ ಮಾಡಿದ್ದರು. 

10 ಸಿಕ್ಸರ್‌
ಟಿ20 ಅಂತಾರಾಷ್ಟ್ರೀಯ ಇನಿಂಗ್ಸ್‌ವೊಂದರಲ್ಲಿ ರೋಹಿತ್‌ ಬಾರಿಸಿದ ಸಿಕ್ಸರ್‌ ಗಳ ಸಂಖ್ಯೆ. ಇದು ಭಾರತೀಯ ದಾಖಲೆ. 

64  ಸಿಕ್ಸರ್‌
ಎಲ್ಲಾ ಮಾದರಿ ಕ್ರಿಕೆಟ್‌ ಸೇರಿ ರೋಹಿತ್‌ ಈ ವರ್ಷರೋಹಿತ್‌ ಬಾರಿಸಿದ ಸಿಕ್ಸರ್‌ಗಳ  ಸಂಖ್ಯೆ. ಇದು ವಿಶ್ವದಲ್ಲೇ ಈ ವರ್ಷ ಅತ್ಯಧಿಕ ಸಾಧನೆ. 

118 ರನ್‌
ಇಂದೋರ್‌ನಲ್ಲಿ ರೋಹಿತ್‌ ಬಾರಿಸಿದ 118 ರನ್‌ ಭಾರತದ ಪರ ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ವೈಯಕ್ತಿಕ ಮೊತ್ತ. 110 ರನ್‌ ಬಾರಿಸಿದ್ದ ರಾಹುಲ್‌ ದಾಖಲೆ ಪತನ

2  ಶತಕ
ಇದುವರೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 5 ಆಟಗಾರರು 2 ಶತಕ ಬಾರಿಸಿದ್ದಾರೆ.

2017ರಲ್ಲಿ 16ರ ಪೈಕಿ 14 ಸರಣಿ ಗೆದ್ದ ಭಾರತ
2017ರಲ್ಲಿ ಮೂರೂ ಮಾದರಿ ಸೇರಿ ಭಾರತ ಒಟ್ಟು 16 ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳನ್ನಾಡಿದೆ. ಇದರಲ್ಲಿ 14 ಸರಣಿ ಗೆದ್ದು ಅದ್ಭುತ ಸಾಧನೆ ಮಾಡಿದೆ. ಇನ್ನೂ ಮಹತ್ವದ ಸಂಗತಿಯೆಂದರೆ ಈ ವರ್ಷ ಭಾರತ ಸತತ 5ನೇ ಟಿ20 ಸರಣಿ ಗೆದ್ದಿದೆ. ಏಕದಿನ, ಟೆಸ್ಟ್‌ಗಳಲ್ಲೂ ಸತತ ಜಯದ ಓಟ ನಡೆಸಿದೆ.

ಸ್ಕೋರ್‌ ಪಟ್ಟಿ
ಭಾರತ:

ರೋಹಿತ್‌ ಶರ್ಮ    ಸಿ ಧನಂಜಯ ಬಿ ಚಮೀರ    118
ಕೆಎಲ್‌ ರಾಹುಲ್‌    ಸಿ ಡಿಕ್ವೆಲ್ಲ ಬಿ ಪ್ರದೀಪ್‌    89
ಎಂಎಸ್‌ ಧೋನಿ    ಬಿ ಪೆರೆರ    28
ಹಾರ್ದಿಕ್‌ ಪಾಂಡ್ಯ    ಸಿ ಸಮರವಿಕ್ರಮ ಬಿ ಪ್ರದೀಪ್‌    10
ಶ್ರೇಯಸ್‌ ಅಯ್ಯರ್‌    ಎಲ್‌ಬಿಡಬ್ಲ್ಯು ಪೆರೆರ    0
ಮನೀಷ್‌ ಪಾಂಡೆ    ಔಟಾಗದೆ    1
ದಿನೇಶ್‌ ಕಾರ್ತಿಕ್‌    ಔಟಾಗದೆ    5
ಇತರ:        9

ಒಟ್ಟು  (20 ಓವರ್‌ಗಳಲ್ಲಿ 5 ವಿಕೆಟಿಗೆ)    260
ವಿಕೆಟ್‌ ಪತನ: 1-165, 2-243, 3-253, 4-254, 5-255

ಬೌಲಿಂಗ್‌:
ಏಂಜೆಲೊ ಮ್ಯಾಥ್ಯೂಸ್‌        2.2-0-10-0
ದುಷ್ಮಂತ ಚಮೀರ        4-0-45-1
ನುವನ್‌ ಪ್ರದೀಪ್‌        4-0-61-2
ಅಖೀಲ ಧನಂಜಯ        3.4-0-49-0
ತಿಸರ ಪೆರೆರ        4-0-49-2
ಚತುರಂಗ ಡಿಸಿಲ್ವ        1-0-16-0
ಅಸೇಲ ಗುಣರತ್ನೆ        1-0-21-0

ಶ್ರೀಲಂಕಾ
ನಿರೋಷನ್‌ ಡಿಕ್ವೆಲ್ಲ    ಸಿ ಪಾಂಡ್ಯ ಬಿ ಉನಾದ್ಕತ್‌    25
ಉಪುಲ್‌ ತರಂಗ    ಸಿ ಮತ್ತು ಬಿ ಚಾಹಲ್‌    47
ಕುಸಲ್‌ ಪೆರೆರ    ಸಿ ಪಾಂಡೆ ಬಿ ಕುಲದೀಪ್‌    77
ತಿಸರ ಪೆರೆರ    ಸಿ ಪಾಂಡ್ಯ ಬಿ ಕುಲದೀಪ್‌    0
ಅಸೇಲ ಗುಣರತ್ನೆ    ಸ್ಟಂಪ್ಡ್ ಧೋನಿ ಬಿ ಕುಲದೀಪ್‌    0
ಸಮರವಿಕ್ರಮ    ಸ್ಟಂಪ್ಡ್ ಧೋನಿ ಬಿ ಚಾಹಲ್‌    5
ಚತುರಂಗ ಡಿಸಿಲ್ವ    ಬಿ ಚಾಹಲ್‌    1
ಅಖೀಲ ಧನಂಜಯ    ಸಿ ಪಾಂಡೆ ಬಿ ಚಾಹಲ್‌    5
ದುಷ್ಮಂತ ಚಮೀರ    ಬಿ ಪಾಂಡ್ಯ    3
ನುವನ್‌ ಪ್ರದೀಪ್‌    ಔಟಾಗದೆ    0
ಏಂಜೆಲೊ ಮ್ಯಾಥ್ಯೂಸ್‌    ಗಾಯಳಾಗಿ ಗೈರು    –
ಇತರ        9

ಒಟ್ಟು (17.2 ಓವರ್‌ಗಳಲ್ಲಿ ಆಲೌಟ್‌)    172
ವಿಕೆಟ್‌ ಪತನ: 1-36, 2-145, 3-155, 4-156, 5-161, 6-162, 7-164, 8-170, 9-172

ಬೌಲಿಂಗ್‌:
ಜಯದೇವ್‌ ಉನಾದ್ಕತ್‌        3-0-22-1
ಜಸ್‌ಪ್ರೀತ್‌ ಬುಮ್ರಾ        3-0-21-0
ಕುಲದೀಪ್‌ ಯಾದವ್‌        4-0-52-3
ಹಾರ್ದಿಕ್‌ ಪಾಂಡ್ಯ        3.2-0-23-1
ಯಜುವೇಂದ್ರ ಚಾಹಲ್‌        4-0-52-4

ಪಂದ್ಯಶ್ರೇಷ್ಠ: ರೋಹಿತ್‌ ಶರ್ಮ

Advertisement

Udayavani is now on Telegram. Click here to join our channel and stay updated with the latest news.

Next