ಗುವಾಹಟಿ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವನ್ನು ಭಾರತ ತಂಡವು ಗೆದ್ದುಕೊಂಡಿದೆ. ರನ್ ರಾಶಿ ಕಲೆ ಹಾಕಿದ ಭಾರತ ತಂಡವು ಲಂಕಾವನ್ನು ನಿಯಂತ್ರಿಸಿ ಉತ್ತಮ ಗೆಲುವು ಸಂಪಾದಿಸಿದೆ. ಈ ನಡುವೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ತನ್ನ ನಡೆಯಿಂದ ಗಮನ ಸೆಳೆದಿದ್ದಾರೆ.
ಶ್ರೀಲಂಕಾ ಇನ್ನಿಂಗ್ಸ್ ನ ಅಂತಿಮ ಓವರ್ ನಲ್ಲಿ ಶಮಿ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ 98 ರನ್ ಗಳಿಸಿದ್ದ ಲಂಕಾ ನಾಯಕ ದಾಸುನ್ ಶನಕ ನಾನ್ ಸ್ಟ್ರೈಕ್ ನಲ್ಲಿದ್ದರು. ಬಾಲ್ ಹಾಕಲು ಓಡಿಬಂದ ಶಮಿ ಅವರು, ಶನಕ ಅವರನ್ನು ಮಂಕಡ್ ರೀತಿ ಔಟ್ ಮಾಡಿದರು. ಅಂಪೈರ್ ಕೂಡಾ ಥರ್ಡ್ ಅಂಪೈರ್ ಗೆ ಮನವಿ ಮಾಡಿದರು.
ಇದನ್ನೂ ಓದಿ:ಪಿಲ್ಲರ್ ದುರಂತ: ಮಾರ್ಗದಲ್ಲಿವೆ 100ಕ್ಕೂ ಹೆಚ್ಚು ಉದ್ದದ ಕಂಬಗಳು!
ಆದರೆ ಕೂಡಲೇ ಶಮಿ ಬಳಿಗೆ ಬಂದ ನಾಯಕ ರೋಹಿತ್, ಈ ರೀತಿ ಔಟ್ ಮಾಡುವುದು ಬೇಡ ಎಂದು ಮನವರಿಕೆ ಮಾಡಿದರು. ಅಂಪೈರ್ ಗೂ ವಿಚಾರ ತಿಳಿಸಿ ಔಟ್ ಬೇಡ ಎಂದು ತಿಳಿಸಿದರು. ಬಳಿಕ ಶನಕ ಬೌಂಡರಿ ಬಾರಿಸಿ ತನ್ನ ಶತಕ ಪೂರೈಸಿದರು.
ಪಂದ್ಯದ ಬಳಿಕ ಮಾತನಾಡಿದ ರೋಹಿತ್, “ಶಮಿ ಆ ರೀತಿ ಮಾಡಿದ್ದು ನನಗೆ ಗೊತ್ತೇ ಇರಲಿಲ್ಲ. ಶನಕ 98ರಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ನಮಗೆ ಅವರನ್ನು ಈ ರೀತಿ ಔಟ್ ಮಾಡಲು ಇಷ್ಟವಿರಲಿಲ್ಲ. ಶನಕ ಉತ್ತಮವಾಗಿ ಆಡಿದರು” ಎಂದರು.