ಅಬುಧಾಬಿ: ಇಂಗ್ಲೆಂಡ್ ಮತ್ತು ಭಾರತ ತಂಡಗಳ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯ ರದ್ದಾದ ಕಾರಣದಿಂದ ಭಾರತೀಯ ಆಟಗಾರರು ಐಪಿಎಲ್ ನತ್ತ ಮುಖ ಮಾಡಿದ್ದಾರೆ. ಇಂಗ್ಲೆಂಡ್ ನಿಂದಲೇ ದುಬೈ ಗೆ ಪ್ರಯಾಣ ಬೆಳೆಸುತ್ತಿದ್ದಾರೆ.
ಟೆಸ್ಟ್ ಸರಣಿಯಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ, ಆಟಗಾರರಾದ ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯ ಕುಮಾರ್ ಯಾದವ್ ಅವರು ಇಂದು ಅಬುಧಾಬಿಗೆ ತೆರಳಿದ್ದಾರೆ. ಇಂಗ್ಲೆಂಡ್ ನಿಂದ ಖಾಸಗಿ ಚಾರ್ಟರ್ ವಿಮಾನದಲ್ಲಿ ಈ ಮೂವರು ಅಬುಧಾಬಿಗೆ ತೆರಳಿದ್ದಾರೆ.
“ಮೂವರು ತಮ್ಮ ಕುಟುಂಬಗಳೊಂದಿಗೆ ಇಂದು ಬೆಳಿಗ್ಗೆ ಅಬುಧಾಬಿಗೆ ಆಗಮಿಸಿದರು, ಐಪಿಎಲ್ ಮಾರ್ಗಸೂಚಿಯಂತೆ ಇಂದಿನಿಂದ 6 ದಿನಗಳ ಕಾಲ ಕಠಿಣ ಕ್ವಾರಂಟೈನ್ ನಲ್ಲಿರಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ. ಅದಲ್ಲದೇ ಎಲ್ಲರ ಕೋವಿಡ್ ವರದಿ ನೆಗೆಟಿವ್ ಬಂದಿದೆ ಎಂದು ಫ್ರಾಂಚೈಸಿ ತಿಳಿಸಿದೆ.
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ತಂಡದಲ್ಲಿ ಆಡಿದ್ದ ಡೇವಿಡ್ ವೀಸ್ ಈ ಬಾರಿ ನಮೀಬಿಯಾ ತಂಡದ ಪರ ಕಣಕ್ಕೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬೌಲರ್ ಮೊಹಮ್ಮದ್ ಸಿರಾಜ್ ಅವರು ಇಂದು ಸಂಜೆ ಮ್ಯಾಂಚೆಸ್ಟರ್ ನಿಂದ ದುಬೈಗೆ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಕೋವಿಡ್ ಕಾರಣದಿಂದ ಐಪಿಎಲ್ ಕೂಟ ಅರ್ಧದಲ್ಲೇ ಸ್ಥಗಿತವಾಗಿ ಮುಂದೂಡಿಕೆಯಾಗಿತ್ತು. ಸೆ.19ರಿಂದ ಇದು ಪುನರಾರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಲಿದೆ.