ಲಕ್ನೋ: ಇಲ್ಲಿನ ಎಕಾನಾ ಸ್ಟೇಡಿಯಂನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಭಾರತ ತಂಡವು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಸದ್ಯ ಕೊನೆಯ ಸ್ಥಾನದಲ್ಲಿದೆ.
ಈ ಪಂದ್ಯವು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಮಹತ್ವದ ಪಂದ್ಯವಾಗಿರಲಿದೆ. ರೋಹಿತ್ ಇಂದು ಭಾರತದ ನಾಯಕನಾಗಿ ನೂರನೇ ಪಂದ್ಯವಾಡುತ್ತಿದ್ದಾರೆ.
ಟೀಂ ಇಂಡಿಯಾವನ್ನು ನೂರು ಪಂದ್ಯಗಳಲ್ಲಿ ಮುನ್ನಡೆಸಿದ ಏಳನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಎಂಎಸ್ ಧೋನಿ (332), ಮೊಹಮ್ಮದ್ ಅಜರುದ್ದೀನ್ (221), ವಿರಾಟ್ ಕೊಹ್ಲಿ (213), ಸೌರವ್ ಗಂಗೂಲಿ (196), ಕಪಿಲ್ ದೇವ್ (108) ಮತ್ತು ರಾಹುಲ್ ದ್ರಾವಿಡ್ (104) ಈ ಸಾಧನೆ ಮಾಡಿದ ಆರು ಭಾರತೀಯರು.
ರೋಹಿತ್ ಅವರು 2017 ರಲ್ಲಿ ಮೊದಲ ಬಾರಿಗೆ ನಾಯಕನ ಟೋಪಿ ಧರಿಸಿದ ನಂತರ ಒಂಬತ್ತು ಟೆಸ್ಟ್, 39 ಏಕದಿನಗಳು ಮತ್ತು 51 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಒಟ್ಟಾರೆಯಾಗಿ, ಪುರುಷರ ಕ್ರಿಕೆಟ್ ನಲ್ಲಿ 49 ಕ್ರಿಕೆಟಿಗರು ತಮ್ಮ ರಾಷ್ಟ್ರೀಯ ತಂಡಗಳನ್ನು 100 ಅಥವಾ ಅದಕ್ಕಿಂತ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.