Advertisement

ಕೊಹ್ಲಿ ನಾಯಕತ್ವಕ್ಕೆ ರೋಹಿತ್‌ ಶರ್ಮ ಸ್ಪರ್ಧಿ

08:54 AM Nov 14, 2018 | |

ಭಾರತ ಕ್ರಿಕೆಟ್‌ನಲ್ಲಿ ಮಹಾತಾರೆಯಾಗಿ ಮಿಂಚಿದ ಎಂ.ಎಸ್‌.ಧೋನಿ ನಿಧಾನಕ್ಕೆ ತೆರೆಯಿಂದ ಮರೆಗೆ ಸರಿಯುತ್ತಿದ್ದಾರೆ. 2014ರಲ್ಲಿ ಟೆಸ್ಟ್‌, 2017ರಲ್ಲಿ ಧೋನಿ ಸೀಮಿತ ಓವರ್‌ಗಳ ನಾಯಕತ್ವ ಬಿಟ್ಟ ನಂತರ ಕೊಹ್ಲಿ ಪೂರ್ಣ ಪ್ರಮಾಣದ ನಾಯಕರಾಗಿದ್ದಾರೆ. ಭಾರತ ಕ್ರಿಕೆಟ್‌ ಮಾತ್ರ ಏಕೆ ವಿಶ್ವ ಕ್ರಿಕೆಟ್‌ನಲ್ಲೇ ಪ್ರಶ್ನಾತೀತ ಬ್ಯಾಟಿಂಗ್‌ ಪ್ರತಿಭೆಯಾಗಿರುವ ವಿರಾಟ್‌ ಕೊಹ್ಲಿಗೆ ಇದುವರೆಗೆ ಸವಾಲುಗಳೇ ಇರಲಿಲ್ಲ. ಇದೀಗ ಅವರ ನಾಯಕತ್ವಕ್ಕೆ ತಣ್ಣಗೆ ಸವಾಲು ಶುರುವಾಗಿದೆ. ಅವರನ್ನು ಯಾಕೆ ಟಿ20 ನಾಯಕತ್ವದಿಂದ ಮುಕ್ತಗೊಳಿಸಬಾರದು ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಇದಕ್ಕೆಲ್ಲ ಕಾರಣವಾಗಿರುವುದು ರೋಹಿತ್‌ ಶರ್ಮ. ಭಾರತ ಕ್ರಿಕೆಟ್‌ನಲ್ಲಿ ಎರಡು ಸ್ಪಷ್ಟ ಶಕ್ತಿಕೇಂದ್ರಗಳು ನಿರ್ಮಾಣವಾಗಿವೆ. ಕೊಹ್ಲಿಗೆ ಹೋಲಿಸಿದರೆ ಬ್ಯಾಟಿಂಗ್‌ ದಾಖಲೆ, ಅಸಾಮಾನ್ಯ ಇನಿಂಗ್ಸ್‌ಗಳು ಈ ಎಲ್ಲದರಲ್ಲೂ ರೋಹಿತ್‌ 2ನೇ ಸ್ಥಾನದಲ್ಲೇ ನಿಲ್ಲುತ್ತಾರೆ.

Advertisement

ಕೊಹ್ಲಿಯಷ್ಟು ನಿರಂತರವಾಗಿ ಬ್ಯಾಟಿಂಗ್‌ ಸ್ಥಿರತೆಯನ್ನು ರೋಹಿತ್‌ ತೋರಿಲ್ಲ. ಅಷ್ಟು ಮಾತ್ರವಲ್ಲ ಇದುವರೆಗೂ ರೋಹಿತ್‌ ಟೆಸ್ಟ್‌ ತಂಡದಲ್ಲಿ ಖಾಯಂ ಸ್ಥಾನ ಗಳಿಸಿಲ್ಲ. ಬರೀ ಏಕದಿನ ಮತ್ತು ಟಿ20ಗೆ ಮಾತ್ರ ಸೀಮಿತರಾಗಿದ್ದಾರೆ. ಆದರೂ ರೋಹಿತ್‌ ಸೀಮಿತ ಓವರ್‌ಗಳ ವಿಸ್ಮಯವೆನ್ನದೇ ವಿಧಿಯಿಲ್ಲ. ಏಕದಿನದಲ್ಲಿ 3 ದ್ವಿಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್‌ ಅವರು, ಟಿ20ಯಲ್ಲಿ 4 ಶತಕ ಗಳಿಸಿದ  ವಿಶ್ವದಾಖಲೆವೀರ. ಬ್ಯಾಟಿಂಗ್‌ ಲೆಕ್ಕಾಚಾರದಲ್ಲಿ ನೋಡಿದರೆ ಈ ಇಬ್ಬರ ನಡುವೆ ಪೈಪೋಟಿಯೇನಿಲ್ಲ. ಯಾರು  ಆಡಿದರೂ ತಂಡಕ್ಕೆ ಲಾಭವಿರುವುದರಿಂದ ಅದು ಧನಾತ್ಮಕವಾಗಿಯೇ ಸ್ವೀಕೃತವಾಗಿದೆ. ಸಮಸ್ಯೆ ಶುರುವಾಗಿರುವುದು ಕೊಹ್ಲಿ
ಗೈರಿನಲ್ಲಿ ರೋಹಿತ್‌ ನಾಯಕತ್ವ ವಹಿಸಿಕೊಂಡ ನಂತರ. 2017ರಿಂದ ಇದುವರೆಗೆ 3 ಟಿ20 ಸರಣಿ, 2 ಏಕದಿನ ಸರಣಿಗೆ ನಾಯಕತ್ವ  ಹಿಸಿರುವ ರೋಹಿತ್‌ ಅಷ್ಟರಲ್ಲೂ ಜಯಗಳಿಸಿದ್ದಾರೆ. ಈ ಅಷ್ಟೂ ಸಂದರ್ಭದಲ್ಲೂ ರೋಹಿತ್‌ ಬಳಿ ಪೂರ್ಣಪ್ರಮಾಣದ ಸಶಕ್ತ ತಂಡವಿರಲಿಲ್ಲ ಎನ್ನುವುದನ್ನು ಗಮನಿಸಬೇಕು. ಎದುರಾಳಿ ತಂಡಗಳೂ ಹೇಳಿಕೊಳ್ಳುವಷ್ಟು ಶಕ್ತರಾಗಿಲ್ಲದಿದ್ದರೂ ರೋಹಿತ್‌ ನಾಯಕನಾಗಿ ಪರಿಸ್ಥಿತಿ ನಿಭಾಯಿಸಿದ್ದು ಎಲ್ಲರ ಮೆಚ್ಚುಗೆ ಗಳಿಸಿದೆ. 6 ಐಪಿಎಲ್‌ನಲ್ಲಿ ಮುಂಬೈಗೆ ನಾಯಕನಾಗಿ 3ರಲ್ಲಿ ತಂಡವನ್ನು ಗೆಲ್ಲಿಸಿದ ಹೆಗ್ಗಳಿಕೆಯೂ ಇದೆ. ಶಾಂತ ವ್ಯಕ್ತಿತ್ವ ಅವರ ಹೆಚ್ಚುಗಾರಿಕೆ.  ಮತ್ತೂಂದು ಕಡೆ ಕೊಹ್ಲಿ 2014ರಿಂದ ಭಾರತ ಟೆಸ್ಟ್‌ ತಂಡಕ್ಕೆ ನಾಯಕರಾಗಿದ್ದಾರೆ. 2017ರಿಂದ ಮೂರೂ ಮಾದರಿಗೆ ನಾಯಕರಾಗಿದ್ದಾರೆ.

ಭಾರತದ ಪರ 40 ಟೆಸ್ಟ್‌ಗೆ ನಾಯಕರಾಗಿರುವ ಕೊಹ್ಲಿ 22 ಗೆದ್ದು, 9 ಡ್ರಾ, 9 ಸೋಲನುಭವಿಸಿದ್ದಾರೆ. ಧೋನಿ ನಂತರ ಟೆಸ್ಟ್‌ನಲ್ಲಿ ಯಶಸ್ವಿ ಸಾಧನೆಯಿದು. ಇವರ ನಾಯಕತ್ವದಡಿಯಲ್ಲಿ ಭಾರತ ಟೆಸ್ಟ್‌ನಲ್ಲಿ ವಿಶ್ವ ನಂ.1 ತಂಡವಾಗಿಯೇ ಉಳಿದುಕೊಂಡಿದೆ. ಏಕದಿನ ಮತ್ತು ಟಿ20 ಭಾರತ ವಿಶ್ವ ನಂ.2 ಸ್ಥಾನದಲ್ಲಿದೆ. ದ.ಆಫ್ರಿಕಾ ತಂಡವನ್ನು ಅವರ ನೆಲದಲ್ಲೇ ಏಕದಿನದಲ್ಲಿ 5-1ರಿಂದ, ಟಿ20ಯಲ್ಲಿ 2-1ರಿಂದ ಸೋಲಿಸಿದ್ದು ಕೊಹ್ಲಿ ಅದ್ಭುತ ಸಾಧನೆ. ಇಂಗ್ಲೆಂಡ್‌ ನಲ್ಲಿ ಟಿ20 ಸರಣಿ ಜಯಿಸಿದ್ದು, 2017ರ ಏಕದಿನ ಚಾಂಪಿಯನ್ಸ್‌ ಟ್ರೋಫಿ ಭಾರತ ಫೈನಲ್‌ಗೇರಿದ್ದು ಎಲ್ಲವೂ ಮಹತ್ವ ಪಡೆದುಕೊಂಡಿವೆ. ಆದರೆ ಕೊಹ್ಲಿ ಐಪಿಎಲ್‌ ನಲ್ಲಿ 6 ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಚುಕ್ಕಾಣಿ ಹಿಡಿದರೂ ಒಮ್ಮೆಯೂ ಕಿರೀಟ ಗೆಲ್ಲಿಸಲು ಸಾಧ್ಯವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕೊಹ್ಲಿಗೆ ಆವೇಶ ಜಾಸ್ತಿ.

ಎಂತಹ ಸ್ಥಿತಿಯಲ್ಲೂ ತಣ್ಣಗಿದ್ದುಕೊಂಡು ಪರಿಸ್ಥಿತಿ ನಿಭಾಯಿಸುವ, ಇರುವ ಆಟಗಾರರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ತನಗೆ ಬೇಕಾದ ಫ‌ಲಿತಾಂಶ ಪಡೆಯುವ ರೋಹಿತ್‌ಗೆ ಶಹಬ್ಟಾಷ್‌ ಎನ್ನುವವರ ಸಂಖ್ಯೆ ಸದ್ಯ ಜಾಸ್ತಿಯಾಗುತ್ತಿದೆ. ಇನ್ನೊಂದು ಕಡೆ ವಿದೇಶಿ ನೆಲದಲ್ಲಿ ಭಾರತ ಟೆಸ್ಟ್‌ನಲ್ಲಿ ಹೀನಾಯವಾಗಿ ಸೋಲುತ್ತಿರುವ ಕೊಹ್ಲಿಗೆ ತೊಡಕಾಗಿದೆ. ಒಂದಷ್ಟು ಮಂದಿ ಟಿ20ಯಲ್ಲಿ ರೋಹಿತ್‌ಗೆ
ನಾಯಕತ್ವ ನೀಡಿ ಎನ್ನಲು ಶುರು ಮಾಡಿದ್ದಾರೆ. ಈಗ ಕೊಹ್ಲಿ ಭಾರತದ ಪ್ರಶ್ನಾತೀತ ನಾಯಕನಲ್ಲ. ಅವರು ಗಟ್ಟಿಯಾಗಿ ಅದೇ ಸ್ಥಾನದಲ್ಲಿ ಉಳಿಯಬೇಕಾದರೆ ವಿದೇಶಿ ಟೆಸ್ಟ್‌ನಲ್ಲಿ ಜಾದೂ ಮಾಡಲೇಬೇಕಾಗಿದೆ. ಇದರಲ್ಲಿ ವಿಫ‌ಲರಾದರೆ ಆಯ್ಕೆ ಮಂಡಳಿಯೂ
ಬೇರೆ ಯೋಚಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next