ಬೆಂಗಳೂರು: ಕಳೆದೆರಡು ದಿನಗಳಿಂದ ಪ್ರಮುಖ ಸುದ್ದಿಯಾಗುತ್ತಿರುವ ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ನಡುವಿನ ಜಗಳ ಇದೀಗ ಮತ್ತೊಂದು ರೂಪ ಪಡೆದಿದೆ. ಮಧ್ಯಪ್ರವೇಶ ಮಾಡಿರುವ ರಾಜ್ಯ ಸರ್ಕಾರ ಇಬ್ಬರನ್ನೂ ಯಾವುದೇ ಸ್ಥಳ ತೋರಿಸದೆ ಎತ್ತಂಗಡಿ ಮಾಡಿದ್ದು, ರೂಪಾ ಪರಿ ಮೌನೀಶ್ ಮೌದ್ಗಿಲ್ ಅವರನ್ನೂ ವರ್ಗಾವಣೆ ಮಾಡಲಾಗಿದೆ.
ಇಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಹಾಗೂ ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಡಿ. ರೂಪಾ ಮೌದ್ಗಿಲ್ ಅವರಿಗೆ ಯಾವುದೇ ಹುದ್ದೆ ನೀಡದೆ ವರ್ಗಾವಣೆ ಮಾಡಿದೆ.
ಸರ್ವೇ ಮತ್ತು ಭೂ ದಾಖಲೆ ಇಲಾಖೆಯ ಆಯುಕ್ತರಾಗಿದ್ದ ಮೌನೀಶ್ ಮೌದ್ಗಿಲ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ:ಭಾರತ ವಿರುದ್ಧ ಟೆಸ್ಟ್ ಸರಣಿಯಿಂದ ಹೊರಬಿದ್ದ ಡೇವಿಡ್ ವಾರ್ನರ್
ರಾಜ್ಯದಲ್ಲಿ ಇಬ್ಬರು ಉನ್ನತ ಮಹಿಳಾ ಅಧಿಕಾರಿಗಳು ಬಹಿರಂಗವಾಗಿ ಕಿತ್ತಾಡಿಕೊಂಡು, ಸರ್ಕಾರ ಮತ್ತು ಸರ್ಕಾರದ ಅಧಿಕಾರಿಗಳನ್ನು ಮುಜುಗರದ ಪರಿಸ್ಥಿತಿಗೆ ಸಿಲುಕಿಸುತ್ತಿರುವುದರಿಂದ ಸೋಮವಾರ ರಾಜ್ಯ ಸರ್ಕಾರವು ಇಬ್ಬರಿಗೂ ಛೀಮಾರಿ ಹಾಕಿತ್ತು. ಅಲ್ಲದೆ ಇಬ್ಬರೂ ಆರೋಪ ಮತ್ತು ಪ್ರತ್ಯಾರೋಪಗಳನ್ನು ಸಾರ್ವಜನಿಕವಾಗಿ ಮಾಡುವುದನ್ನು ತಡೆಯಲು ನಿರ್ದೇಶನ ನೀಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ವಿಧಾನಮಂಡಲದ ಅಧಿವೇಶನದ ಬಗ್ಗೆ ಕಾಳಜಿ ವಹಿಸಿದ್ದರೂ ಸಹ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಐಪಿಎಸ್ ಅಧಿಕಾರಿ ರೂಪ ಡಿ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿವರಣೆಯನ್ನು ಕೇಳಲು ಸಮನ್ಸ್ ಮಾಡಿದ್ದರು.