Advertisement

ಮಕ್ಕಳ ಬಾಳಿಗೆ ಬೆಳಕಾದ ರೋಹಿಣಿ ರಾಣಿ ದೇಸಾಯಿ

10:29 AM Nov 06, 2021 | Team Udayavani |

ಸಿಂಧನೂರು: ಸರಕಾರದಿಂದ ಅನುದಾನ ಮಂಜೂರಾದರೂ ಶಾಲೆ ಕಟ್ಟಡ ನಿರ್ಮಿಸಲು ಜಾಗವಿಲ್ಲದೇ ಹಲವು ಕಡೆ ಸಮಸ್ಯೆ ತಲೆದೋರುವುದು ಸಾಮಾನ್ಯ. ಆದರೆ ವಲ್ಕಂದಿನ್ನಿ ಗ್ರಾಮದ ಶಾಲೆಗೆ ದಾನಿಯೊಬ್ಬರು ಬೆಲೆ ಬಾಳುವ ಭೂಮಿ ದಾನ ಮಾಡಿದ್ದಾರೆ.

Advertisement

ಸ್ವಂತ ಕಟ್ಟಡವಿಲ್ಲದ್ದರಿಂದ ವಲ್ಕಂದಿನ್ನಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಲ್ಲೇ ಮುಂದುವರಿದಿದ್ದ ಹೈಸ್ಕೂಲ್‌ಗೆ ಕೊನೆಗೂ ನೆಲೆ ಸಿಕ್ಕಂತಾಗಿದೆ. ಸ್ವಗ್ರಾಮದ ನಂಟು, ತಮ್ಮೂರಿನ ಮೇಲೆ ಅಪಾರ ಅಭಿಮಾನ ಹೊಂದಿರುವ, ಬಾಂಬೆಯಲ್ಲಿ ನೆಲೆಸಿರುವ ರೋಹಿಣಿ ರಾಣಿ ದೇಸಾಯಿ ಅವರು ತಮ್ಮ 4 ಎಕರೆ ಭೂಮಿಯನ್ನು ದಾನ ಮಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಿದ್ದಾರೆ.

ದಾನಪತ್ರ ಹಸ್ತಾಂತರ:

ಬಾಂಬೆಯಲ್ಲಿ ನೆಲೆಸಿರುವ ರೋಹಿಣಿ ದೇಸಾಯಿ ಅವರು ಮೂಲತಃ ವಲ್ಕಂದಿನ್ನಿಯವರು. ಅವರ ಪುತ್ರಿ ಯರೋಫ್‌ ಎಂ.ಡಿ ಓದುತ್ತಿದ್ದಾರೆ. ಹೊರಗಡೆ ನೆಲೆಸಿದ್ದರೂ ಸ್ವಗ್ರಾಮದ ಮೇಲಿನ ಅಭಿಮಾನ ಅಗಾಧ. ಇದೇ ಕಾರಣಕ್ಕೆ ಶಾಲೆಗೆ ಜಮೀನಿಲ್ಲವೆಂಬ ಮಾಹಿತಿ ತಿಳಿಯುತ್ತಿದ್ದಂತೆ ಅವರೇ ಇಲಾಖೆಯನ್ನು ಸಂಪರ್ಕಿಸಿ 4 ಎಕರೆ ಕೊಡಲು ಮುಂದೆ ಬಂದಿದ್ದರು. ಈ ಹಿಂದೆ ಬಾಂಬೆಯಿಂದ ಆಗಮಿಸಿ ಜಮೀನು ವರ್ಗಾಯಿಸಲು ಹೋದಾಗ ಸರ್ವರ್‌ ಕಾರಣಕ್ಕೆ ಸಬ್‌ ರಜಿಸ್ಟ್ರಾರ್‌ ಕಚೇರಿಯಲ್ಲಿ ಪ್ರಕ್ರಿಯೆ ನಡೆದಿರಲಿಲ್ಲ. ಇದೀಗ ಮತ್ತೂಮ್ಮೆ ತಾವೇ ಖುದ್ದು ಆಗಮಿಸಿ ಗುರುವಾರ ದಾನ ಪತ್ರವನ್ನು ನಿಯಮ ಪ್ರಕಾರ ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ: ಪಕ್ಷ ನಿರ್ಧರಿಸಿದರೆ ವಿಧಾನಸಭೆಗೆ ಸ್ಪರ್ಧೆ:ಸಿಎಂ ಯೋಗಿ ಆದಿತ್ಯನಾಥ್

Advertisement

ನಾಮಕರಣ ಮಾಡಲು ಒಪ್ಪಿಗೆ:

ಭೂಮಿ ಪಡೆದಿರುವ ಇಲಾಖೆ ಶಾಲೆಗೆ ಅವರ ಕುಟುಂಬದ ಹೆಸರಿಡಲು ಒಪ್ಪಿಗೆ ಸೂಚಿಸಿದೆ. ವಲ್ಕಂದಿನ್ನಿ ಗ್ರಾಮದ ರಾಘವೇಂದ್ರರಾವ್‌ ದೇಸಾಯಿ ಅವರ ಪುತ್ರ ಚಿತ್ತರಂಜನ್‌ ದೇಸಾಯಿ ಅವರು ವೈದ್ಯರು. ಬಾಂಬೆ ಮೂಲದ ರೋಹಿಣಿ ಅವರು ಡಾ|ಚಿತ್ತರಂಜನ್‌ ದೇಸಾಯಿ ಅವರನ್ನು ಮದುವೆಯಾಗಿದ್ದರು. ಆ ಬಳಿಕ ವಲ್ಕಂದಿನ್ನಿಯವರೇ ಆಗಿರುವ ಅವರು ಗ್ರಾಮಸ್ಥರ ನೆರವಿಗೆ ನಿಂತಿದ್ದಾರೆ. ಕಿಶನ್‌ರಾವ್‌ ದೇಸಾಯಿ ಅವರು ಕೂಡ ಇಲ್ಲಿನ ಶಾಲೆಗೆ ಜಮೀನು ಕೊಟ್ಟಿದ್ದಾರೆ. ದೇಸಾಯಿ ಮನೆತನದ ನೆರವಿನಿಂದ ಇಲ್ಲಿನ ವಿಎಸ್‌ ಎಸ್‌ಎನ್‌, ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಿಗೆ ಜಮೀನು ದೊರಕಿದೆ.

ವಲ್ಕಂದಿನ್ನಿ ನಮ್ಮ ಪ್ರೀತಿಯ ಊರು. ನಮ್ಮ ಪಾಲಿನ ಪುಣ್ಯಭೂಮಿ. ಗ್ರಾಮದ ಮೇಲಿನ ಅಭಿಮಾನ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಜಮೀನು ಕೊಡಲಾಗಿದೆ. ಗ್ರಾಮಸ್ಥರಿಗೆ ಒಳಿತಾಗುವ ಕೆಲಸಗಳಿಗೆ ಕೈ ಜೋಡಿಸಲು ಸಿದ್ಧ. ನಮ್ಮ ಮೇಲೆ ಜನರಿಟ್ಟಿರುವ ಪ್ರೀತಿ ಅಗಾಧ. -ರೋಹಿಣಿ ರಾಣಿ ದೇಸಾಯಿ, ವಲ್ಕಂದಿನಿ

ನಿಯಮದ ಪ್ರಕಾರ ದಾನಪತ್ರ ಆಧರಿಸಿ ಇಲಾಖೆಗೆ ಜಮೀನು ಪಡೆಯಲಾಗಿದೆ. ಶಿಕ್ಷಣದ ಮೇಲಿನ ಅವರ ಕಾಳಜಿ ಶ್ಲಾಘನೀಯ. 4 ಎಕರೆ ಭೂಮಿ ದಾನ ಮಾಡಿದ್ದರಿಂದ ಶಾಲೆಗೆ ಅವರ ಕುಟುಂಬದವರ ಹೆಸರನ್ನೇ ಇಡಲಾಗುವುದು. -ಶರಣಪ್ಪ ವಟಗಲ್‌, ಬಿಇಒ, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next