ಹೊಸದಿಲ್ಲಿ : “ಭಾರತವನ್ನು ಸುರಕ್ಷಿತವಾಗಿರಿಸಲು ರೊಹಿಂಗ್ಯಾಗಳನ್ನು ಮತ್ತು ಅಕ್ರಮ ಬಾಂಗ್ಲಾ ವಲಸಿಗರನ್ನು ಗುಂಡಿಟ್ಟು ಕೊಲ್ಲಬೇಕು’ ಎಂದು ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ಹೇಳಿಕೆ ನೀಡಿದ್ದಾರೆ.
“ರೊಹಿಂಗ್ಯಾಗಳು ಮತ್ತು ಅಕ್ರಮ ಬಾಂಗ್ಲಾ ವಲಸಿಗರು ಮರ್ಯಾದೆಯಿಂದ ದೇಶ ಬಿಟ್ಟು ಹೋಗದಿದ್ದರೆ ಅವರನ್ನು ಗುಂಡಿಟ್ಟು ಕೊಲ್ಲಬೇಕು; ಅಗ ಮಾತ್ರವೇ ಭಾರತ ಸುರಕ್ಷಿತವಾಗಿರಲು ಸಾಧ್ಯ’ ಎಂದು ರಾಜಾ ಸಿಂಗ್ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತ್ತು ವಿರೋಧ ಪಕ್ಷಗಳು ರೊಹಿಂಗ್ಯಾಗಳ ವಿಷಯದಲ್ಲಿ ಮತ್ತು ಅಸ್ಸಾಂ ಸರಕಾರ ರಾಷ್ಟ್ರೀಯ ಪೌರರ ರಿಜಿಸ್ಟರ್ ಬಿಡಗಡೆ ಮಾಡಿರುವ ಈ ಸಂದರ್ಭದಲ್ಲಿ ಪರಸ್ಪರ ಜಿದ್ದಿನ ವಾಕ್ಸಮರದಲ್ಲಿ ತೊಡಗಿರುವಾಗಲೇ ಶಾಸಕ ರಾಜಾ ಅವರಿಂದ ಈ ವಿವಾದಾತ್ಮಕ ಹೇಳಿಕೆ ಬಂದಿದೆ.
ಈ ಅತಿ ಸೂಕ್ಷ್ಮ ವಿಷಯದಲ್ಲಿ ರಾಜಕೀಯ ಮಾಡುತ್ತಿರುವ ವಿರೋಧ ಪಕ್ಷಗಳನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ವಿರೋಧ ಪಕ್ಷಗಳು ಬಾಂಗ್ಲಾ ಅಕ್ರಮ ನುಸುಳುಕೋರರನ್ನು ರಕ್ಷಿಸುವ ಯತ್ನದಲ್ಲಿ ತೊಡಗಿವೆ ಎಂದು ಆರೋಪಿಸಿದ್ದಾರೆ.
ಎನ್‌ಆರ್‌ಸಿ ಯಂತಹ ಕ್ರಮವನ್ನು ಈ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೇ ಕೈಗೊಂಡಿದ್ದರು; ಆದರೆ ಅದನ್ನು ಅನುಷ್ಠಾನಿಸುವ ಧೈರ್ಯ ಅವರಲ್ಲಿ ಇರಲಿಲ್ಲ ಎಂದು ಅಮಿತ್ ಶಾ ಟೀಕಿಸಿದ್ದಾರೆ.
ಎನ್‌ಆರ್‌ಸಿ ಅಡಿ ಅಕ್ರಮ ವಲಸಿಗರನ್ನು ಗುರುತಿಸಲಾಗುತ್ತದೆ ಮತ್ತು ನೈಜ ಪ್ರಜೆಗಳಿಗಾಗಿ ಪ್ರತ್ಯೇಕ ರಿಜಿಸ್ಟರ್ ತಯಾರು ಮಾಡಲಾಗುತ್ತದೆ. ಎನ್‌ಆರ್‌ಸಿಗೆ ಸಮನಾದಂತಹ ಅಸ್ಸಾಂ ಒಪ್ಪಂದಕ್ಕೆ ರಾಜೀವ್ ಗಾಂಧಿಯವರು 1985ರಲ್ಲಿ ಸಹಿಹಾಕಿದ್ದರು. ಹಿಂದಿನ ಸರಕಾರಗಳಿಗೆ ಅದನ್ನು ಅನುಷ್ಠಾನಿಸುವ ಧೈರ್ಯ ತಾಕತ್ತು ಇರಲಿಲ್ಲ; ಆದರೆ ನಮಗೆ ಈ ವಿಷಯದಲ್ಲಿ ಧೈರ್ಯವಿದೆ; ಅಂತೆಯೇ ನಾವು ಮುಂದಡಿ ಇಟ್ಟಿದ್ದೇವೆ ಎಂದು ಅಮಿತ್ ಶಾ ಹೇಳಿದರು.