Advertisement

ಫೆಡರರ್‌, ನಡಾಲ್‌, ಜೋಕೊ‌: ತ್ರಿವಿಕ್ರಮರಿಗೆ ಇನ್ನೆಷ್ಟು ಗ್ರ್ಯಾನ್‌ಸ್ಲ್ಯಾಮ್‌ ಒಲಿಯುತ್ತೆ?

04:32 PM Feb 26, 2021 | Team Udayavani |

ಇತ್ತೀಚೆಗಷ್ಟೇ ಮುಗಿದ ಆಸ್ಟ್ರೇಲಿಯನ್ ಓಪನ್‌ ಪುರುಷರ ಸಿಂಗಲ್ಸ್‌ ಪ್ರಶಸ್ತಿಯನ್ನು ನೊವಾಕ್‌ ಜೊಕೊವಿಕ್‌ ಗೆದ್ದುಕೊಂಡರು. ಇದು ಅವರು ಗೆದ್ದ 18ನೇ ಗ್ರ್ಯಾನ್‌ಸ್ಲ್ಯಾಮ್‌ ಕಿರೀಟ. ಇಲ್ಲಿಗೆ ಹಲವು ವರ್ಷಗಳಿಂದ ನಡೆಯುತ್ತಿದ್ದ ಚರ್ಚೆಯೊಂದು ಮತ್ತೆ ಮುನ್ನೆಲೆಗೆ ಬಂದಿದೆ. ಟೆನಿಸ್‌ ಜಗತ್ತಿನ ಸಾರ್ವಕಾಲಿಕ ಮೂವರು ಶ್ರೇಷ್ಠ ಆಟಗಾರರು ಒಂದು ಕಾಲಘಟ್ಟದಲ್ಲಿ ಆಡುತ್ತಿರುವುದಕ್ಕೆ ಸಂಬಂಧಿಸಿದ ಚರ್ಚೆ ಇದು. ರೋಜರ್‌ ಫೆಡರರ್‌, ರಫೆಲ್‌ ನಡಾಲ್‌, ನೊವಾಕ್‌ ಜೋಕೊವಿಕ್‌, ಹೀಗೆ ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಸತತವಾಗಿ ಗೆಲ್ಲುತ್ತಿರುವುದರ ಹಿಂದಿನ ರಹಸ್ಯವಾದರೂ ಏನು? ಇವರ ಸಾಮರ್ಥ್ಯದ ಗುಟ್ಟೇನು? ಈ ಮೂವರಲ್ಲಿ ನಿಜಕ್ಕೂ ಯಾರು ಶ್ರೇಷ್ಠ ಆಟಗಾರ?

Advertisement

ಕಳೆದೊಂದು ದಶಕ ಅಂದರೆ 2010ರಿಂದ 2019ರವರೆಗೆ ನಡೆದ 40 ಗ್ರ್ಯಾನ್‌ಸ್ಲ್ಯಾಮ್‌ಗಳಲ್ಲಿ 33 ಪ್ರಶಸ್ತಿಗಳನ್ನು ಈ ಮೂವರೇ ಗೆದ್ದಿದ್ದಾರೆ! ಬಿಟ್ಟುಕೊಟ್ಟಿರುವುದು ಕೇವಲ 7 ಪ್ರಶಸ್ತಿಗಳನ್ನು ಮಾತ್ರ. ನಂತರ ನಡೆದ ನಾಲ್ಕು ಗ್ರ್ಯಾನ್ ಸ್ಲ್ಯಾಮ್ ಗಳಲ್ಲಿ ಎರಡು ಜೋಕೋ ಗೆದ್ದರೆ ಮತ್ತೊಂದು ನಡಾಲ್ ಗೆದ್ದಿದ್ದಾರೆ. ಈಗ ನೀವು ಮೂವರ ಅಧಿಪತ್ಯವನ್ನು ಊಹಿಸಿ. ಟೆನಿಸ್‌ನಲ್ಲಿ ಗರಿಷ್ಠ ಪ್ರಶಸ್ತಿಗಳನ್ನು ಗೆದ್ದಿರುವ ಮೂವರು ತಾರೆಯರೂ ಇವರೇ. ಸ್ವಿಜರ್ಲೆಂಡ್‌ನ‌ ರೋಜರ್‌ ಫೆಡರರ್‌ ಮತ್ತು ಸ್ಪೇನ್ ನ ನಡಾಲ್ ತಲಾ 20 ಪ್ರಶಸ್ತಿಗಳನ್ನು ಗೆದ್ದು ಅಗ್ರಸ್ಥಾನದಲ್ಲಿದ್ದರೆ, ಜೋಕೊವಿಕ್‌ 18 ಪ್ರಶಸ್ತಿ ಗೆದ್ದು 2 ನೇ ಸ್ಥಾನದಲ್ಲಿದ್ದಾರೆ. ಇವರನ್ನು ಬಿಟ್ಟರೆ ಗರಿಷ್ಠ ಪ್ರಶಸ್ತಿ ಗೆದ್ದ ಇನ್ನೊಬ್ಬ ಸಾಧಕ ಪೀಟ್‌ ಸಾಂಪ್ರಸ್‌. ಪ್ರಶಸ್ತಿಗಳ ಸಂಖ್ಯೆ 14. ಈ ಮೂವರು ತಮ್ಮ ಮೊದಲ ಗ್ರ್ಯಾನ್‌ಸ್ಲ್ಯಾಮ್‌ ಪ್ರಶಸ್ತಿ ಗೆಲ್ಲುವ ಮುಂಚೆಯೇ ಸಾಂಪ್ರಾಸ್‌ ನಿವೃತ್ತಿ ಹೊಂದಿದ್ದರು. ಅನಂತರ ಈ ಮೂವರ ಆರ್ಭಟ ಶುರುವಾದಾಗ ಅದು ಈ ಮಟ್ಟಕ್ಕೆ ಬೆಳೆಯುತ್ತದೆ ಎಂದು ಯಾರೂ ಊಹೆ ಮಾಡಿರಲಿಲ್ಲ!

ಮೂವರಿಗೆ ಇನ್ನೆಷ್ಟು ಪ್ರಶಸ್ತಿ?

ಬರೀ ಗ್ರ್ಯಾನ್‌ಸ್ಲ್ಯಾಮ್‌ ಒಂದನ್ನೇ ಗಮನದಲ್ಲಿಟ್ಟುಕೊಂಡರೂ, ಈ ಮೂವರಲ್ಲಿ ಯಾರು ಹೆಚ್ಚು ಪ್ರಶಸ್ತಿ ಗೆಲ್ಲುತ್ತಾರೆಂದು ಊಹಿಸುವುದು ಕಷ್ಟ. ಆದರೆ ಮೂವರ ವಯಸ್ಸನ್ನು ಗಮನಿಸಿದರೆ, ಒಂದು ಹಂತದ ಅಂದಾಜು ಮಾಡಬಹುದು. ಮೂವರಿಗೆ ದೈಹಿಕ ಸಕ್ಷಮತೆಯ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ಕಾಡಿದೆ. ಇದೇ ಕಾರಣದಿಂದ ಆಗಾಗ ಟೆನಿಸ್‌ನಿಂದ ದೂರವಾಗಿದ್ದು, ಹಾಗೆಯೇ ಪ್ರಶಸ್ತಿಗಳನ್ನು ಕಳೆದುಕೊಂಡಿದ್ದೂ ಇದೆ. ಸದ್ಯ ಮೂವರ ದೈಹಿಕ ಕ್ಷಮತೆ ಅತ್ಯುತ್ತಮ ಮಟ್ಟದಲ್ಲಿಯೇ ಇರುತ್ತದೆ ಎಂದು ಊಹಿಸಿ ಮುಂದುವರಿಯೋಣ.

Advertisement

ಫೆಡರರ್‌ಗೆ ಇನ್ನು ಎರಡು ಕಷ್ಟವಲ್ಲ

ಫೆಡರರ್‌ಗೆ ಈಗ 39 ವರ್ಷ. ಕ್ರೀಡಾಭಾಷೆಯಲ್ಲಿ ಹೇಳುವುದಾದರೆ ಇನ್ನೊಂದು ವರ್ಷಕ್ಕೆ ಅವರು ನಿವೃತ್ತಿ ಘೋಷಿಸಬೇಕು. ಅದರ ನಂತರವೂ ಮುಂದುವರಿದರೆ ಅದು ಅವರ ಶರೀರಶಕ್ತಿಯನ್ನು ನಿರ್ಧರಿಸಿ ಕೈಗೊಳ್ಳುವ ತೀರ್ಮಾನ. ಪ್ರಸ್ತುತ ಫೆಡರರ್‌ ಯುವ ಫೆಡರರ್‌ ಆಗಿದ್ದಾಗ ಇದ್ದ ಸಕ್ಷಮತೆ ಹೊಂದಿಲ್ಲ. ಆದ್ದರಿಂದ 40 ವರ್ಷವಾದಾಗ ಅವರು ನಿವೃತ್ತಿಯಾಗಿಯಾರು.

ಹಾಗಾದರೆ ಅವರು ಇನ್ನೂ ನಾಲ್ಕು ಗ್ರ್ಯಾನ್‌ಸ್ಲ್ಯಾಮ್‌ ಗಳನ್ನು ಆಡಬಹುದು. ಅದರಲ್ಲಿ ಗರಿಷ್ಠವೆಂದರೆ ಒಂದರಿಂದ ಎರಡು ಪ್ರಶಸ್ತಿಯನ್ನು ಗೆಲ್ಲಬಹುದು. ಸದ್ಯದ ಅವರ ಪ್ರದರ್ಶನ ಗಮನಿಸಿದರೆ ಇದೂ ಅನುಮಾನ. ಆದರೂ ಫೆಡರರ್‌ ಊಹಾತೀತ ಆಟಗಾರ. ಪದೇಪದೇ ಜನರ ಊಹೆಗಳನ್ನು ಸುಳ್ಳು ಮಾಡಿದ್ದಾರೆ. ಅವರು ತಮ್ಮ 20ನೇ ಪ್ರಶಸ್ತಿ ಗೆಲ್ಲುತ್ತಾರೆಂದು ಯಾರೂ ನಂಬಿರಲಿಲ್ಲ. ಕಾರಣ ಅಷ್ಟೊತ್ತಿಗಾಗಲೇ ಅವರ ಪ್ರದರ್ಶನ ಮಟ್ಟ ಸಂಪೂರ್ಣ ಕುಸಿದಿತ್ತು. ಈ ತರ್ಕವನ್ನು ಅನ್ವಯಿಸಿದರೆ ಮುಂಚಿತವಾಗಿ, ಹೀಗೆಯೇ ಎಂದು ಊಹೆ ಮಾಡುವುದು ತಪ್ಪಾದೀತು. ಒಟ್ಟಾರೆ ಫೆಡರರ್‌ ಪ್ರಶಸ್ತಿಗಳ ಸಂಖ್ಯೆ 23ಕ್ಕೇರಬಹುದು.

 ಗ್ರ್ಯಾನ್‌ಸ್ಲ್ಯಾಮ್‌ ಸಾಧನೆ

ಒಟ್ಟು ಫೈನಲ್‌-31

ಗೆದ್ದ ಪ್ರಶಸ್ತಿ-20

ದ್ವಿತೀಯ ಸ್ಥಾನ-11

( ಆಸ್ಟ್ರೇಲಿಯನ್‌ ಓಪನ್‌-6,  ಫ್ರೆಂಚ್‌ ಓಪನ್‌-1. ವಿಂಬಲ್ಡನ್‌-8, ಯುಎಸ್‌ ಓಪನ್‌-5)

ಫ್ರೆಂಚ್‌ ಸರದಾರ ನಡಾಲ್‌ 25 ದಾಟಬಹುದು!

ಸ್ಪೇನಿನ ಬಲಾಡ್ಯ ಆಟಗಾರ ರಫೆಲ್‌ ನಡಾಲ್‌ಗೆ ಈಗ 34 ವರ್ಷ. ಎಡಗೈನ ಬಲಿಷ್ಠ ಸರ್ವೀಸ್‌ಗಳು ಇವರ ತಾಕತ್ತು. ಇವರು ಈಗ 20 ಪ್ರಶಸ್ತಿ ಗೆದ್ದಿದ್ದಾರೆ. ಇವರ ಸದ್ಯದ ದೈಹಿಕ ಕ್ಷಮತೆಯನ್ನು ಗಮನಿಸಿದರೆ ಇನ್ನೂ ಕನಿಷ್ಠ 6 ಪ್ರಶಸ್ತಿಯನ್ನು ಗೆಲ್ಲಬಲ್ಲರು. ಇವರಿಗೆ ನಿವೃತ್ತಿಯಾಗಲು ಕನಿಷ್ಠ6 ವರ್ಷಗಳಿವೆ. ಅಷ್ಟರಲ್ಲಿ 28 ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಆಡಿ, ಕನಿಷ್ಠ 6 ಪ್ರಶಸ್ತಿಗಳನ್ನು ಗೆಲ್ಲುವುದು ಅಸಾಧ್ಯವಂತೂ ಅಲ್ಲ. ಅವರ ಪ್ರಶಸ್ತಿಗಳ ಸಂಖ್ಯೆ 25 ದಾಟಿದರೆ ಅಚ್ಚರಿಯಿಲ್ಲ.

ನಡಾಲ್‌ ಗ್ರ್ಯಾನ್‌ಸ್ಲ್ಯಾಮ್‌ನಲ್ಲಿ ಪ್ರಶಸ್ತಿ ಗೆಲ್ಲಲು ಆರಂಭಿಸಿದ ನಂತರ ಎರಡು ಬಾರಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. 2011-12ರಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಸಾಧನೆ ತೋರಲಿಲ್ಲ. ಆದರೆ ಅವರಿಗೆ ನಿಜಕ್ಕೂ ಬರಗಾಲ ಉಂಟಾಗಿದ್ದು 2014ರ ಅಂತ್ಯದ ನಂತರ. ಮುಂದಿನ ಎರಡು ವರ್ಷಗಳ ಕಾಲ ಅವರು ಯಾವುದೇ ಗ್ರ್ಯಾನ್‌ಸ್ಲ್ಯಾಮ್‌ ಗೆಲ್ಲಲಿಲ್ಲ. ಈ ಅವಧಿಯಲ್ಲಿ ಅವರು ಬೇಗ ಬೇಗ ಸೋತು ಹೊರಬೀಳುತ್ತಿದ್ದುದ್ದನ್ನು ಗಮನಿಸಿದಾಗ ನಡಾಲ್‌ ವೃತ್ತಿಜೀವನ ಮುಗಿಯಿತು ಎಂದೇ ಭಾವಿಸಲಾಗಿತ್ತು. 2017ರಿಂದ ನಡಾಲ್‌ ತಿರುಗಿಬಿದ್ದು ಸ್ಫೋಟಕ ಆಟವಾಡಿದರು. ಈ ಎರಡು ವರ್ಷದಲ್ಲಿ ಅವರು ಐದು ಗ್ರ್ಯಾನ್‌ಸ್ಲ್ಯಾಮ್‌ ಗೆದ್ದರು. ಹಾಗಾಗಿ ಅವರ ಓಟ ನಿಲ್ಲುತ್ತದೆ ಎಂದು ಭಾವಿಸುವುದಕ್ಕೆ ಸದ್ಯ ಕಾರಣವಿಲ್ಲ.

ಗ್ರ್ಯಾನ್‌ಸ್ಲ್ಯಾಮ್‌ ಸಾಧನೆ:

ಒಟ್ಟು ಫೈನಲ್‌-28

ಗೆದ್ದ ಪ್ರಶಸ್ತಿ-20

ದ್ವಿತೀಯ ಸ್ಥಾನ-8

(ಆಸ್ಟ್ರೇಲಿಯನ್‌ ಓಪನ್‌-1, ಫ್ರೆಂಚ್‌ ಓಪನ್‌-13, ವಿಂಬಲ್ಡನ್‌-2, ಯುಎಸ್‌ ಓಪನ್‌-4)

ಬಲಿಷ್ಠ ಜೊಕೊ 20 ದಾಟುವುದು ಕಷ್ಟವೇ ಅಲ್ಲ

ಸರ್ಬಿಯದ ನೊವಾಕ್‌ ಜೋಕೊವಿಕ್‌ಗೆ ಈಗ 33 ವರ್ಷ. ಅವರ ಮುಂದೆಯೂ ಈಗ 7 ವರ್ಷ ಅವಧಿಯಿದೆ. ಲೆಕ್ಕಾಚಾರದ ಪ್ರಕಾರ ಅವರಿಗೆ 28 ಗ್ರ್ಯಾನ್‌ಸ್ಲ್ಯಾಮ್‌ಗಳು ಸಿಗುತ್ತವೆ. ಅವರು ದೈಹಿಕ ಸಕ್ಷಮತೆ ಉಳಿಸಿಕೊಂಡರೆ ಕನಿಷ್ಠ 18 ರಿಂದ 20 ಗ್ರ್ಯಾನ್‌ಸ್ಲ್ಯಾಮ್‌ ಗೆಲ್ಲುತ್ತಾರೆ. ಎಲ್ಲವೂ ಅವರಿಗೆ ಸರಿಯಾಗಿ ನಡದರೆ ಜೋಕೊಗೆ 30 ಗ್ರ್ಯಾನ್‌ಸ್ಲ್ಯಾಮ್‌ ಗೆಲ್ಲುವ ಎಲ್ಲ ಅರ್ಹತೆ ಇದೆ. ಅವರ ಪ್ರತಿಭೆ, ಕೌಶಲಗಳನ್ನು ಗಮನಿಸಿದರೆ ಅವರಿಗೆ ಸವಾಲಾಗಬಲ್ಲಂಥದ್ದು ದೈಹಿಕ ಶಕ್ತಿಯ ಕೊರತೆ ಮಾತ್ರ!

ಫೆಡರರ್‌, ನಡಾಲ್‌ಗೆ ಹೋಲಿಸಿದರೆ ಅತಿಹೆಚ್ಚು ಸಕ್ಷಮತೆ ಕೊರತೆಯಿಂದ ನರಳುತ್ತಿರುವುದು ಜೋಕೊವಿಕ್‌. ಒಂದು ವೇಳೆ ಜೋಕೊ ನಿರೀಕ್ಷೆಯಷ್ಟು ಸಾಧಿಸದಿದ್ದರೆ ಅದಕ್ಕೆ ಏಕೈಕ ಕಾರಣ ದೇಹ ಸ್ಪಂದಿಸದಿರುವುದು ಮಾತ್ರ ಎಂಬುದು ಸ್ಪಷ್ಟ. ಆರಂಭದಲ್ಲಿ ಫೆಡರರ್‌, ನಡಾಲ್‌ ಪೈಪೋಟಿ ಮೇಲೆ ಗ್ರ್ಯಾನ್‌ಸ್ಲ್ಯಾಮ್‌ ಗೆಲ್ಲುತ್ತಿದ್ದಾಗ ಅವರಿಗೆ ಜೋಕೊವಿಕ್‌ ರೂಪದಲ್ಲಿ ಸ್ಪರ್ಧಿಯೊಬ್ಬರು ಹುಟ್ಟಿಕೊಂಡರು. ಈ ಇಬ್ಬರ ಏಕಸ್ವಾಮ್ಯ ಮುರಿದು ಸತತವಾಗಿ ಪ್ರಶಸ್ತಿ ಗೆಲ್ಲುತ್ತ ಹೋದರು. ಅಲ್ಲಿಗೆ ನಡಾಲ್‌, ಫೆಡರರ್‌ ಯುಗಾಂತ್ಯವಾಯಿತು ಎಂದುಕೊಂಡಿದ್ದಾಗ ಜೋಕೊ ಭುಜದ ನೋವಿನ ಸಮಸ್ಯೆಗೆ ತುತ್ತಾಗಿ ಮಂಕಾಗಿದ್ದು ಇತಿಹಾಸ.

* ಗ್ರ್ಯಾನ್‌ಸ್ಲ್ಯಾಮ್‌ ಸಾಧನೆ

ಒಟ್ಟು ಫೈನಲ್‌-28

ಗೆದ್ದ ಪ್ರಶಸ್ತಿ-18

ದ್ವಿತೀಯ ಸ್ಥಾನ-10

(ಆಸ್ಟ್ರೇಲಿಯನ್‌ ಓಪನ್‌-9, ಫ್ರೆಂಚ್‌ ಓಪನ್‌-1, ವಿಂಬಲ್ಡನ್‌-5, ಯುಎಸ್‌ ಓಪನ್‌-3)

ಸ್ಪರ್ಧೆಯಿರುವುದು ನಡಾಲ್‌-ಜೊಕೊ ನಡುವೆ

ಫೆಡರರ್‌ ಬಹುತೇಕ ನಿವೃತ್ತಿಯ ಸನಿಹವಿರುವುದರಿಂದ, ಪ್ರಶಸ್ತಿಯ ಲೆಕ್ಕಾಚಾರದಲ್ಲಿ (ಆಟದ ಕೌಶಲದ ದೃಷ್ಟಿಯನ್ನು ಇಲ್ಲಿ ಪರಿಗಣಿಸಿಲ್ಲ) ಸಾರ್ವಕಾಲಿಕ ಶ್ರೇಷ್ಠ ಆಟಗಾರ ಸ್ಥಾನ ಗಳಿಸುವ ಪೈಪೋಟಿಯಿರುವುದು ನಡಾಲ್‌ ಮತ್ತು ಜೊಕೊವಿಕ್‌ ನಡುವೆ. ಇಬ್ಬರಿಗೂ ವಯಸ್ಸಿದೆ, ಶಕ್ತಿಯೂ ಇದೆ. ಈ ಇಬ್ಬರ ಮಧ್ಯೆ ಮುಂದಿನ ದಿನಗಳಲ್ಲಿ ಪ್ರಶಸ್ತಿಗಳನ್ನು ಜಯಿಸಲು ಪೈಪೋಟಿ ಶುರುವಾಗಬಹುದು. ಅಷ್ಟರಲ್ಲಿ ಫೆಡರರ್‌ ಯುಗಾಂತ್ಯವಾಗಿರುತ್ತದೆ ಎನ್ನುವುದು ಫ್ರೆಡ್ಡೀ ಅಭಿಮಾನಿಗಳ ಆತಂಕ.

Advertisement

Udayavani is now on Telegram. Click here to join our channel and stay updated with the latest news.

Next