ಲಂಡನ್: ಕೆಲ ದಿನಗಳ ಹಿಂದಷ್ಟೇ ವಿದಾಯ ಘೋಷಿಸಿದ್ದ ಸಾರ್ವಕಾಲಿಕ ಶ್ರೇಷ್ಠ ಟೆನ್ನಿಸ್ ಆಟಗಾರರಲ್ಲಿ ಒಬ್ಬರಾದ ರೋಜರ್ ಫೆಡರರ್ ಶುಕ್ರವಾರ ತಮ್ಮ ಅಂತಿಮ ಪಂದ್ಯವಾಡಿದರು. ಲಂಡನ್ ನ ಲೇವರ್ ಕಪ್ ನಲ್ಲಿ ದೀರ್ಘಕಾಲದ ಕೋರ್ಟ್ ಎದುರಾಳಿ ರಾಫೆಲ್ ನಡಾಲ್ ಜೊತೆಗೂಡಿ ಡಬಲ್ಸ್ ಆಡಿದ ರೋಜರ್ ಫೆಡರರ್ ಅಂತಿಮ ಪಂದ್ಯದಲ್ಲಿ ಸೋಲನುಭವಿಸಿದರು.
ಯೂರೋಪ್ ತಂಡವನ್ನು ಪ್ರತಿನಿಧಿಸಿದ ‘ಫೆಡಲ್’ ಶುಕ್ರವಾರದ ಪಂದ್ಯದಲ್ಲಿ ಟೀಮ್ ವರ್ಲ್ಡ್ ನ ಜಾಕ್ ಸಾಕ್ ಮತ್ತು ಫ್ರಾನ್ಸಿಸ್ ಟಿಯಾಫೊ ವಿರುದ್ಧ 6-4, 6(2)-7, 9-11 ಸೆಟ್‌ಗಳಿಂದ ಸೋತರು.
ಆದಾಗ್ಯೂ, ಟೆನಿಸ್ ಗೆ ಸೇವೆ ಸಲ್ಲಿಸಿದ ಶ್ರೇಷ್ಠ ಆಟಗಾರರೊಬ್ಬರ ನಿವೃತ್ತಿಯ ಸಂದರ್ಭವಾದ ಕಾರಣ ಫಲಿತಾಂಶವು ಅಪ್ರಸ್ತುತವಾಯಿತು. ಪೂರ್ಣ ಸ್ಟೇಡಿಯಂ ಫೆಡರರ್ ಮಯವಾಗಿತ್ತು. “ಇದು ಪರಿಪೂರ್ಣ ಪ್ರಯಾಣವಾಗಿದೆ” ಎಂದು ಫೆಡರರ್ ತಮ್ಮ ಆನ್-ಕೋರ್ಟ್ ಸಂದರ್ಶನದಲ್ಲಿ ಹೇಳಿದರು.
ಪಂದ್ಯದ ನಂತರ ಕೆಲ ಹೊತ್ತು ಭಾವುಕ ಸನ್ನಿವೇಶಕ್ಕೆ ಅಂಕಣ ಸಾಕ್ಷಿಯಾಯಿತು. ನಡಾಲ್ ಮತ್ತು ಎದುರಾಳಿಗಳಾದ ಸಾಕ್ ಹಾಗು ಟಿಯಾಫೊ ಅವರು ಫೆಡರರ್ ಅವರನ್ನು ತಬ್ಬಿಕೊಂಡರು. ದಿಗ್ಗಜ ಆಟಗಾರರಾದ ರಾಫೆಲ್ ನಡಾಲ್, ಜೋಕೊವಿಕ್ ಕಣ್ಣಾಲಿಗಳು ತುಂಬಿ ಬಂದಿದ್ದವು. ಪ್ರೇಕ್ಷಕರು ಸ್ಟ್ಯಾಂಡ್ ನಿಂದ ಫೆಡರರ್ ಗೆ ಚಪ್ಪಾಳೆಗಳ ಸುರಿಮಳೆಗೈದು ಟೆನ್ನಿಸ್ ಕೂಟದ ಕ್ಲಾಸ್ ಆಟಗಾರನಿಗೆ ವಿದಾಯ ಹೇಳಿದರು.
ಫೆಡರರ್ ಅವರ ಕುಟುಂಬ, ಪತ್ನಿ ಮಿರ್ಕಾ, ನಾಲ್ವರು ಮಕ್ಕಳು ಮತ್ತು ಪೋಷಕರು ಅಂಕಣದಲ್ಲಿ ಸೇರಿಕೊಂಡರು. ಫೆಡರರ್ ತಂಡದ ಸಹ ಆಟಗಾರರು ಮತ್ತು ಎದುರಾಳಿಗಳು ಫೆಡರರ್ ಅವರನ್ನು ಭುಜದ ಮೇಲೆತ್ತಿ ಸಂಭ್ರಮಿಸಿದರು.