ಉಪ್ಪಿನಂಗಡಿ: ತುರ್ತು ಕಾರ್ಯ ನಿಮಿತ್ತ ಬಂದ ಕರೆಯಂತೆ ಆಗಸ್ಟ್ 9ರಂದು ಅಫ್ಘಾನಿಸ್ಥಾನಕ್ಕೆ ತಲುಪಿದ್ದೆ. 5 ದಿನ ಕರ್ತವ್ಯ ನಿರ್ವಹಿಸುವಷ್ಟರಲ್ಲಿ ದೇಶವನ್ನು ತಾಲಿಬಾನಿ ಭಯೋತ್ಪಾದಕರು ಸ್ವಾಧೀನ ಪಡಿಸಿಕೊಂಡು ಅತಂತ್ರನಾದೆ. ಆದರೂ ಅಮೆರಿಕ ಸೇನೆ ಮತ್ತು ಕತಾರ್‌ನಲ್ಲಿನ ಭಾರತೀಯ ರಾಯಭಾರಿಗಳ ಸಹಕಾರದಿಂದ ಸ್ವದೇಶಕ್ಕೆ ಸುರಕ್ಷಿತವಾಗಿ ತಲುಪಿದ್ದೇನೆ ಎಂದು ಮಂಗಳೂರು ಬಿಕರ್ನಕಟ್ಟೆ ನಿವಾಸಿ ರಾಕಿ ಚರಣ್ ಮೊಂತೆರೋ ನಿಟ್ಟುಸಿರು ಬಿಟ್ಟಿದ್ದಾರೆ.
ಗುಂಡಿನ ಮೊರೆತ:
ಅಮೆರಿಕ ಸೇನಾಪಡೆಯಲ್ಲಿ ಮೆಕಾನಿಕಲ್ ಇನ್‌ಚಾರ್ಜ್ ಆಗಿ ಕರ್ತವ್ಯ ನಿರ್ವಹಿಸಿ ಕಳೆದ ಮಾರ್ಚ್ ತಿಂಗಳಲ್ಲಿ ಊರಿಗೆ ಬಂದಿದ್ದೆ. ಈ ಮಧ್ಯೆ ಸೇನಾ ವಿಭಾಗದಿಂದ ತುರ್ತು ಕರೆ ಬಂದ ಕಾರಣಕ್ಕೆ ಆ. 9ರಂದು ಅಪಘಾನಿ ಸ್ಥಾನಕ್ಕೆ ಹೋಗಿದ್ದೆ. ಅಲ್ಲಿ ಅಮೆರಿಕ ಸೇನೆಯ ಅನಿವಾರ್ಯ ಕಾರ್ಯ ಗಳನ್ನು ನೆರವೇರಿಸುತ್ತಿದ್ದಂತೆಯೇ ಕಾಬೂಲ್ ಸಹಿತ ಇಡೀ ದೇಶ ತಾಲಿಬಾನ್‌ಗಳ ವಶವಾಗಿ ಅಭದ್ರತೆ ಕಾಡತೊಡಗಿತ್ತು. ಆ. 16ರ ರಾತ್ರಿ ಕಾಬೂಲ್‌ನಿಂದ ಏರ್‌ಲಿಫ್ಟ್ ಮಾಡಲಾಗುವುದೆಂದು ತಿಳಿಸಲಾಯಿತು.
ವಿಮಾನದಲ್ಲಿ ಕುಳಿತಾಗ ನಿಲ್ದಾಣದ ಹೊರಗೆ ಜನಜಂಗುಳಿ ಕಾಣಿಸಿತು. ಜನರು ಜೀವ ರಕ್ಷಣೆಗಾಗಿ ಬಸ್ ನಿಲ್ದಾಣಕ್ಕೆ ನುಗ್ಗಿದಂತೆ ವಿಮಾನ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿರುವುದು ಅಲ್ಲಿನ ಭೀಕರತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.