ಬೆಂಗಳೂರು: ಯಶ್ ಅಭಿನಯದ ಬಹುನಿರೀಕ್ಷಿತ “ಕೆಜಿಎಫ್’ ಚಿತ್ರದ ಟ್ರೇಲರ್ ಶುಕ್ರವಾರ ಬಿಡುಗಡೆಯಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದ್ದು, ಐದು ರಾಜ್ಯಗಳ ಮಾಧ್ಯಮದವರ ಮುಂದೆ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಇದು ಕೇವಲ ಕನ್ನಡ ಸಿನಿಮಾವಲ್ಲ, ಭಾರತೀಯ ಸಿನಿಮಾ ಎಂಬ ಸಂದೇಶ ರವಾನಿಸಿದೆ ಚಿತ್ರತಂಡ.
ಮೊದಲಿಗೆ ಕನ್ನಡ ಟ್ರೇಲರ್‌ಗೆ ಹಿರಿಯ ನಟ ಅಂಬರೀಶ್ ಚಾಲನೆ ನೀಡಿದರೆ, ತಮಿಳು ಟ್ರೇಲರ್‌ಗೆ ನಟ ವಿಶಾಲ್, ಹಿಂದಿಗೆ ಖ್ಯಾತ ವಿತರಕ ಅನಿಲ್ ತದಾನಿ ಹಾಗೂ ತೆಲಗು ಟ್ರೇಲರ್‌ಗೆ ವಾರಾಹಿ ಫಿಲಂಸ್ ಸಾಯಿಯವರು ಚಾಲನೆ ನೀಡಿ ಶುಭಕೋರಿದರು. ಟ್ರೇಲರ್ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರತಂಡ ಖುಷಿಯಾಗಿದೆ.
ಟ್ರೇಲರ್ ಬಿಡುಗಡೆ ನಂತರ ಮಾತನಾಡಿದ ಯಶ್, “ಈ ಚಿತ್ರದ ಮೂಲಕ ಕನ್ನಡಿಗರ ತಾಕತ್ತು ಏನೆಂಬುದು ಇಡೀ ಇಂಡಿಯಾಗೆ ಗೊತ್ತಾಗಬೇಕಿದೆ. ನಮ್ಮಲ್ಲೂ ಒಳ್ಳೆಯ ತಂತ್ರಜ್ಞರಿದ್ದಾರೆ ಎಂಬುದು ಈ ಚಿತ್ರದ ಮೂಲಕ ಗೊತ್ತಾಗಲಿದೆ. “ಕೆಜಿಎಫ್’ ಒಂದು ಆರಂಭವಷ್ಟೇ, ಮುಂದೆ ಕನ್ನಡ ಸಿನಿಮಾ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ. ಈ ಮೂಲಕ ನಮ್ಮ ಪ್ಯಾನ್ ಇಂಡಿಯಾ ಕನಸು ಈಡೇರುತ್ತಿದೆ’ ಎಂದ ಯಶ್, “ಇದು ಕೇವಲ ಟ್ರೇಲರ್, ಪಿಕ್ಚರ್ ಅಭಿ ಬಾಕಿ ಹೈ’ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದರು. ಇನ್ನು ಚಿತ್ರದ ನಿರ್ಮಾಪಕ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ ಅವರ ಸಿನಿಮಾ ಪ್ರೀತಿ, ಶ್ರಮದ ಬಗ್ಗೆ ಮಾತನಾಡಲು ಯಶ್ ಮರೆಯಲಿಲ್ಲ. ನಟ ವಿಶಾಲ್ ಮಾತನಾಡಿ, “ಯಶ್ ನನ್ನ ಒಳ್ಳೆಯ ಗೆಳೆಯ. ಈಗ “ಕೆಜಿಎಫ್’ ಮೂಲಕ ಗಡಿದಾಟುತ್ತಿದ್ದಾರೆ. ಅವರಿಗೆ ಆ ಅರ್ಹತೆ ಕೂಡ ಇದೆ. ತಮಿಳಿನಲ್ಲಿ ನಮ್ಮ ಬ್ಯಾನರ್‌ನಲ್ಲಿ ರಿಲೀಸ್ ಮಾಡುತ್ತಿರುವುದು ಖುಷಿಯ ವಿಚಾರ. ತಮಿಳಿನಲ್ಲಿ ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುತ್ತೇನೆ’ ಎಂದರು.
ನಾನು ಶಾರುಖ್ ಖಾನ್ ಅಭಿಮಾನಿ: ಯಶ್ ನಟನೆಯ “ಕೆಜಿಎಫ್’ ಹಾಗೂ ಶಾರುಖ್ ಖಾನ್ ಅವರ “ಜೀರೊ’ ಚಿತ್ರ ಒಂದೇ ದಿನ ಅಂದರೆ ಡಿಸೆಂಬರ್ 21 ರಂದು ತೆರೆಕಾಣುತ್ತಿದೆ. ಬಾಲಿವುಡ್ ದೊಡ್ಡ ವಿತರಕರು “ಕೆಜಿಎಫ್’ ಚಿತ್ರದ ವಿತರಣೆಯನ್ನು ಪಡೆದಿರುವುದು ಅನೇಕರ ಕುತೂಹಲಕ್ಕೆ ಕಾರಣವಾಗಿದೆ. ಹೀಗಾಗಿ ಶಾರುಖ್ ಬಗ್ಗೆ ಯಶ್ ಏನಂತಾರೆ ಎಂಬ ಅನೇಕರ ಕುತೂಹಲಕ್ಕೂ ಯಶ್ ಟ್ರೇಲರ್ ರಿಲೀಸ್‌ನಲ್ಲಿ ಉತ್ತರಿಸಿದ್ದಾರೆ. “ನಾನು ಶಾರುಖ್ ಖಾನ್ ಅಭಿಮಾನಿ. ಅವರ ಸಾಕಷ್ಟು ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದೇನೆ. ಒಂದೇ ದಿನ ಎರಡು ಸಿನಿಮಾ ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ. ಭಾರತದಲ್ಲಿ ಒಂದೇ ದಿನ ಎಷ್ಟು ಸಿನಿಮಾ ಬೇಕಾದರೂ ಬಿಡುಗಡೆಯಾಗಬಹುದು, ಅದಕ್ಕೆ ಜಾಗವೂ ಇದೆ’ ಎಂದು ಕೂಲ್ ಆಗಿ ಉತ್ತರಿಸಿದರು.
ನನ್ನ ಅಭ್ಯಂತರವಿಲ್ಲ: “ಕೆಜಿಎಫ್’ ಚಿತ್ರ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗೆ ಡಬ್ ಆಗಿ ಅಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲಿನ ನಟರು, ವಿತರಕರು ಈ ಚಿತ್ರವನ್ನು ಬೆಂಬಲಿಸುತ್ತಿದ್ದಾರೆ. ಅದೇ ರೀತಿ ತಮಿಳು, ತೆಲುಗು ಅಥವಾ ಬೇರೆ ಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ, ನೀವು ಆ ಚಿತ್ರಗಳನ್ನು ಬೆಂಬಲಿಸುತ್ತೀರಾ, ಆ ನಟರಿಗೆ ಪ್ರೋತ್ಸಾಹ ನೀಡುತ್ತೀರಾ ಎಂಬ ಪ್ರಶ್ನೆ ಯಶ್‌ಗೆ ಎದುರಾಯಿತು. ಇದಕ್ಕೆ ಉತ್ತರಿಸಿದ ಯಶ್, “ಇಲ್ಲಿ ಎಲ್ಲರೂ ಏನು ಹೇಳುತ್ತಾರೆ ಅನ್ನೋದು ಕೂಡಾ ಮುಖ್ಯವಾಗುತ್ತದೆ. ವೈಯಕ್ತಿಕವಾಗಿ ನನಗೆ ಡಬ್ಬಿಂಗ್ ಬಗ್ಗೆ ಅಭ್ಯಂತರವಿಲ್ಲ. ಏಕೆಂದರೆ ಇವತ್ತು ಸಿನಿಮಾ ಭಾಷೆಯ ಗಡಿದಾಟಿದೆ. ಯಾವ ಭಾಷೆಯ ಸಿನಿಮಾವನ್ನು ಯಾವ ಭಾಷೆಯ ಪ್ರೇಕ್ಷಕನೂ ನೋಡಬಹುದು. ಆದರೆ, ಇಲ್ಲಿನವರ ಹೊಟ್ಟೆಪಾಡು ಹಾಗೂ ಭಾಷೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಕೂಡಾ ಮುಖ್ಯವಾಗುತ್ತದೆ’ ಎಂದು ಜಾಣ್ಮೆಯ ಉತ್ತರ ನೀಡಿದರು.
ಟ್ರೇಲರ್‌ಗೆ ಪ್ರಶಂಸೆ: “ಕೆಜಿಎಫ್’ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯ ನಟ, ನಿರ್ದೇಶಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.