ಐಶಾನಿ ಶೆಟ್ಟಿ ಈಗ ಖುಷಿಯಾಗಿದ್ದಾರೆ. ಸಡನ್ ಆಗಿ ಐಶಾನಿ ಶೆಟ್ಟಿ ಅಂದರೆ ನೆನಪಾಗೋದು ಕಷ್ಟ. ಆದರೆ, “ವಾಸ್ತು ಪ್ರಕಾರ’ ಹಾಗು “ರಾಕೆಟ್’ ಚಿತ್ರಗಳನ್ನೊಮ್ಮೆ ನೆನಪಿಸಿಕೊಂಡರೆ ಐಶಾನಿ ಶೆಟ್ಟಿ ಗೊತ್ತಾಗುತ್ತಾರೆ. ಅವರಿಗೇಕೋ ಸಿನಿಮಾ “ವಾಸ್ತು’ ಸರಿಯಾಗಲಿಲ್ಲ. ಆದರೂ “ರಾಕೆಟ್’ ಏರಿದರು. ಆದರೆ, ಅವರಂದುಕೊಂಡಷ್ಟು ಎತ್ತರಕ್ಕೆ “ರಾಕೆಟ್’ ಹಾರಲಿಲ್ಲ. ಅದ್ಯಾವದನ್ನೂ ಲೆಕ್ಕಿಸದೆ, ತನ್ನ ಪಾಡಿಗೊಂದು ಕಿರುಚಿತ್ರ ನಿರ್ದೇಶಿಸಿಬಿಟ್ಟರು. ಅದೀಗ ಸದ್ದಿಲ್ಲದೆಯೇ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಫಿಲ್ಮ್ ಫೆಸ್ಟಿವಲ್‌ಗೆ ಆಯ್ಕೆಯಾಗಿದೆ. ಹಾಗಾಗಿ, ಐಶಾನಿ ಶೆಟ್ಟಿ ಅವರಿಗೀಗ ಖುಷಿಗೆ ಪಾರವೇ ಇಲ್ಲ.
ಐಶಾನಿ ಶೆಟ್ಟಿ ಸ್ವತಃ ಕಥೆ ಬರೆದು, ಚಿತ್ರಕಥೆಯನ್ನೂ ಮಾಡಿಕೊಂಡು ನಿರ್ದೇಶಿಸಿದ ಚಿತ್ರದ ಹೆಸರು “ಕಾಜಿ’. ಕೇವಲ 17 ನಿಮಿಷದ ಈ ಕಿರುಚಿತ್ರ, ಈಗಾಗಲೇ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಿರುಚಿತ್ರೋತ್ಸವದಲ್ಲೂ ಆಯ್ಕೆಯಾಗಿ ಪ್ರದರ್ಶನ ಕಂಡಿದೆ. ಆ ಖುಷಿಯಲ್ಲಿದ್ದ ಐಶಾನಿ ಶೆಟ್ಟಿಗೆ, ದೆಹಲ್ಲಿಯಲ್ಲಿ ನಡೆಯುತ್ತಿರುವ 8ನೇ ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಫಿಲ್ಮ್ ಫೆಸ್ಟಿವಲ್‌ಗೆ ಆಯ್ಕೆ ಆಗಿರುವುದರಿಂದ ಎಂದಿಗಿಂತ ಖುಷಿಯಾಗಿದ್ದಾರೆ ಐಶಾನಿ ಶೆಟ್ಟಿ.
“ನನಗೆ ನಟನೆ ಜೊತೆಗೆ ಕಥೆ ಬರೆಯುವುದು, ನಿರ್ದೇಶನ ಮಾಡುವ ಬಗ್ಗೆ ಹೆಚ್ಚು ಆಸಕ್ತಿ ಇತ್ತು. ಹಾಗಾಗಿ “ಕಾಜಿ’ ಚಿತ್ರಕ್ಕೆ ನಾನೇ ಕಥೆ ಬರೆದು, ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದೆ. ಅದೊಂದು ನೈಜ ಘಟನೆಗಳ ತುಣುಕುಗಳನ್ನೆಲ್ಲಾ ಇಟ್ಟುಕೊಂಡು ಹೆಣೆದ ಕಥೆ.
ಸಮಾಜದ ವಾಸ್ತವತೆ, ಬಡತನ, ದಾರಿದ್ರé ಹೀಗೆ ಒಂದಷ್ಟು ಸಮಾಜದೊಳಗಿರುವ ಕರಾಳ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಒಂದು ಕುಟುಂಬದಲ್ಲಿ ಬಡತನ ಎಂಬುದು ಹಾಸು ಹೊದ್ದು ಮಲಗಿದರೆ, ಹೇಗೆಲ್ಲಾ ಆ ಕುಟುಂಬ ಯಾತನೆ ಅನುಭವಿಸುತ್ತದೆ ಎಂಬುದನ್ನು ತೋರಿಸಿದ್ದೇನೆ. ಹಿತ ಚಂದ್ರಶೇಖರ್ ಮುಖ್ಯ ಪಾತ್ರಧಾರಿ. ಅವರ ಜೊತೆ ಮಧುರ ಚನ್ನಿಗ ಸುಬ್ಬಣ್ಣ ಮತ್ತು ಇಂಚರ ಎಂಬ ಮಕ್ಕಳು ಕೂಡ ಮುಖ್ಯವಾಗಿ ಕಾಣಿಸಿಕೊಂಡಿದ್ದಾರೆ. ಕನಕಪುರ ಸುತ್ತಮುತ್ತ ಸುಮಾರು ಮೂರು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇನೆ ಎಂದು ವಿವರ ಕೊಡುತ್ತಾರೆ ನಿರ್ದೇಶಕಿ ಐಶಾನಿ ಶೆಟ್ಟಿ. ಚಿತ್ರಕ್ಕೆ ಪ್ರೀತಂ ತಗ್ಗಿನ ಮನೆ ಛಾಯಾಗ್ರಹಣವಿದೆ. “ಒಂದು ಮೊಟ್ಟೆಯ ಕಥೆ’ ಚಿತ್ರಕ್ಕೆ ಸಂಗೀತ ನೀಡಿದ್ದ ಮಿದುನ್ ಮುಕುಂದನ್ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.
ಎಲ್ಲವೂ ಸರಿ, ಐಶಾನಿ ಶೆಟ್ಟಿ ಯಾಕೆ ಇಷ್ಟು ದಿನ ಸುದ್ದಿಯೇ ಇರಲಿಲ್ಲ? ಈ ಪ್ರಶ್ನೆಗೆ, ಪರೀಕ್ಷೆ ಎಂಬ ಉತ್ತರ ಕೊಡುತ್ತಾರೆ ಅವರು. ಅಂತಿಮ ವರ್ಷದ ಮಾಸ್ಟರ್ ಡಿಗ್ರಿ ಪರೀಕ್ಷೆ ಗುರುವಾರ (ಇಂದು) ಮುಗಿಯಲಿದ್ದು, ಐಶಾನಿ ಶೆಟ್ಟಿ, ಇನ್ನು ಮುಂದೆ ಫ್ರೀ ಬರ್ಡ್. “ಪರೀಕ್ಷೆ ಇದ್ದ ಕಾರಣ, ಚಿತ್ರರಂಗದಿಂದ ದೂರ ಇರಬೇಕಾಗಿ ಬಂತು. ಈಗ ಪರೀಕ್ಷೆ ಮುಗಿದಿರುವುದರಿಂದ ಒಂದಷ್ಟು ಕಥೆಗಳು ಹುಡುಕಿ ಬರುತ್ತಿವೆ. ಕಥೆ ಕೇಳುತ್ತಿದ್ದೇನೆ. ಈ ಮಧ್ಯೆ “ನಡುವೆ ಅಂತರವಿರಲಿ’ ಎಂಬ ಚಿತ್ರದಲ್ಲಿ ನಟಿಸಿದ್ದೇನೆ. ಕಥೆ ಚೆನ್ನಾಗಿದ್ದರಿಂದ ನಟಿಸಿದೆ. ಆ ಚಿತ್ರಕ್ಕೆ ಪ್ರಖ್ಯಾತ್ ಎಂಬ ಹೊಸ ಪ್ರತಿಭೆ ಹೀರೋ. ರವೀನ್ ನಿರ್ದೇಶನ ಮಾಡಿದ್ದಾರೆ. ಜೂನ್ ಹೊತ್ತಿಗೆ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ’ ಎನ್ನುತ್ತಾರೆ ಐಶಾನಿ.
ಅದೆಲ್ಲಾ ಓಕೆ, ನಟನೆ ಜೊತೆಗೆ ನಿರ್ದೇಶನವೂ ಮುಂದುವರೆಯುತ್ತಾ? ಎಂಬ ಪ್ರಶ್ನೆ ಬರಬಹುದು. ಅದನ್ನು ಇಷ್ಟಕ್ಕೆ ಬಿಡಲು ಸಾಧ್ಯವೇ? ಎಂಬ ಉತ್ತರ ಪ್ರಶ್ನೆಯ ರೂಪದಲ್ಲಿ ಕೇಳಿಬರುತ್ತದೆ. ಅವರಿಗೆ ಕಥೆ ಬರೆಯೋದು, ನಿರ್ದೇಶನ ಮಾಡೋದು ಅಂದರೆ ಇಷ್ಟ. ಕ್ರಿಯೇಟಿವ್ ಫೀಲ್ಡ್‌ನಲ್ಲಿ ಏನಾದರೊಂದು ಸಾಧನೆ ಮಾಡುವ ಬಯಕೆ ಅವರದು. “ನಿರ್ದೇಶನ ಸುಲಭವಲ್ಲ. ಅಲ್ಲಿ ಕಲಿಯುವುದು ತುಂಬಾ ಇದೆ. ಕನ್ನಡದಲ್ಲಿ ಮಹಿಳಾ ನಿರ್ದೇಶಕರು ಕಡಿಮೆ. ಮುಂದೆ ಆ ಬಗ್ಗೆಯೂ ಗಮನಹರಿಸುತ್ತೇನೆ’ ಎನ್ನತ್ತಾರೆ ಐಶಾನಿ.