ಪಡುಬಿದ್ರಿ: ನಂದಿಕೂರು ಕೈಗಾರಿಕ ಪ್ರದೇಶದಲ್ಲಿರುವ ಕಲ್ಲು ಬಂಡೆಗಳಿಂದ ಕೂಡಿರುವ ಖಾಲಿ ನಿವೇಶನದಲ್ಲಿ ಯಾವುದೇ ರೀತಿಯ ಸ್ಫೋಟಕ ಪರವಾನಿಗೆ ಇಲ್ಲದೇ ಕಲ್ಲು ಬಂಡೆಗಳನ್ನು ಸ್ಫೋಟಿಸಿ ಅವುಗಳನ್ನು ಲಾರಿಗಳ ಮೂಲಕ ತುಂಬಿಸಿ ಕಾನೂನು ಬಾಹಿರವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಪಡುಬಿದ್ರಿ ಪೊಲೀಸರು ನಾಲ್ಕು ಟಿಪ್ಪರ್, ಸ್ಥಳದಲ್ಲಿ ಉಪಯೋಗಿಸುತ್ತಿದ್ದ ಹಿಟಾಚಿ ಯಂತ್ರ, ಕಂಪ್ರಸರ್ ಟ್ರ್ಯಾಕ್ಟರ್ ಹಾಗೂ ಬಂಡೆ ಸ್ಫೋಟಿಸಲು ಸಿದ್ಧತೆ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ.
ಪಡುಬಿದ್ರಿ ಕ್ರೈಂ ಎಸೈ ಸುದರ್ಶನ್ ದೊಡ್ಡಮನಿ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ದಾಳಿಯ ವೇಳೆ ಖಾಲಿ ನಿವೇಶನದಲ್ಲಿ ಕಲ್ಲು ಬಂಡೆಗಳನ್ನು ಒಡೆದು ಹಾಕಿರುವುದು ಮತ್ತು ಒಡೆದಿರುವ ಬಂಡೆಕಲ್ಲುಗಳನ್ನು ಲೋಡ್ ಮಾಡಿರುವುದು ಪತ್ತೆ ಯಾಗಿದೆ.
ಬಂಡೆಕಲ್ಲುಗಳಲ್ಲಿ ಕೆಲವು ಕಡೆ ರಂಧ್ರ ಕೊರೆದು ಎಲೆಕ್ಟ್ರಿಕ್ ವಯರ್ ಸಂಪರ್ಕಿಸಿ ಬಂಡೆಕಲ್ಲುಗಳನ್ನು ಸ್ಫೋಟ ನಡೆಸಲು ಸಿದ್ಧತೆೆ ನಡೆಸಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು ಕಲ್ಲು ಬಂಡೆ ಸ್ಫೋಟಿಸುತ್ತಿದ್ದ ಮಂಜುನಾಥ ನಾಯ್ಕರ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲಿದ್ದ ಟಿಪ್ಪರ್ ಲಾರಿ ಚಾಲಕರು ಓಡಿ ಹೋಗಿದ್ದಾರೆ. ಈ ಖಾಲಿ ಜಾಗವು ಐವನ್ ಎನ್ನುವವರಿಗೆ ಸೇರಿದ್ದಾಗಿದ್ದು ವೆರೋನಿಕಾ ಯಾನೆ ಶರ್ವಿನ್ ಅವರು ಸ್ಫೋಟಕ ಬಳಸಿ ಒಡೆಯಲು ಗುತ್ತಿಗೆ ವಹಿಸಿಕೊಂಡಿದ್ದಾಗಿ ಆರೋಪಿ ಮಂಜುನಾಥ ಬಾಯ್ಬಿಟ್ಟಿದ್ದಾನೆ.
ಸಂಬಂಧಪಟ್ಟ ಇಲಾಖೆ ಯಿಂದ ಬಂಡೆಕಲ್ಲನ್ನು ಸ್ಫೋಟಕ ಬಳಸಿ ಒಡೆಯಲು ಮತ್ತು ಒಡೆದ ಬಂಡೆಕಲ್ಲುಗಳನ್ನು ಟಿಪ್ಪರ್‌ಗಳ ಮೂಲಕ ಸಾಗಾಟ ಮಾಡಲು ಯಾವುದೇ ಪರವಾನಿಗೆ ಪಡೆದಿರುವುದಿಲ್ಲ. ಸ್ಥಳದಲ್ಲಿದ್ದ ಸ್ಫೋಟಕ ವಸ್ತುಗಳು, ಕಂಪ್ರಸರ್ ಟ್ರ್ಯಾಕ್ಟರ್, 4 ಟಿಪ್ಪರ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಜಾಗದ ಮಾಲಕ ಐವನ್, ವೆರೊನಿಕಾ ಯಾನೆ ಶರ್ವಿನ್, ಮಂಜುನಾಥ ನಾಯ್ಕರ್ ಮತ್ತು ಇತರರ ವಿರುದ್ಧ ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.