Advertisement

ಶಿಲೆಯಲ್ಲರಳಿದ ಕಲೆ…

11:52 AM Dec 29, 2017 | |

ಬಂಟ್ಸ್‌ಹಾಸ್ಟೆಲ್‌ : ಕರಕುಶಲ ರಂಗದ ಬಗ್ಗೆ ಅಲ್ಪಜ್ಞಾನವೂ ಇರದ ಯುವಕನೊಬ್ಬ ಶಿಲೆಗಳನ್ನೇ ಕಲೆಯಾಗಿ ಅರಳಿಸಿದ ಕಥೆಯಿದು. ಈತನ ಕೈಚಳಕದಿಂದ ತಯಾರಾಗುವ ಶಿಲಾಮೂರ್ತಿಗಳಿಗೆ ಮಂಗಳೂರಿನಲ್ಲಿ ಬೇಡಿಕೆಯೂ ಅಧಿಕವಾಗುತ್ತಿದೆ.

Advertisement

ಬಂಟ್ಸ್‌ಹಾಸ್ಟೆಲ್‌ನಲ್ಲಿ ಗುರುವಾರ ಆರಂಭವಾದ ರಾಷ್ಟ್ರಮಟ್ಟದ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಬಿಹಾರದ ಹಿಮಾಂಶು ಅವರ ಕೈಯಲ್ಲರಳಿದ ಸುಂದರ ಶಿಲಾ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ. ಅಷ್ಟಕ್ಕೂ ಈ ಯುವಕ ದೂರದ ಬಿಹಾರದಿಂದ ಮಂಗಳೂರಿಗೆ ಬಂದು ಕರಕುಶಲ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು.

12 ವರ್ಷಗಳ ಹಿಂದೆ ಮಂಗಳೂರಿಗೆ ಬಂದ ಹಿಮಾಂಶು ಅವರಿಗೆ ಕರಕುಶಲ ಕ್ಷೇತ್ರದ ಬಗ್ಗೆ ಕಿಂಚಿತ್ತೂ ಗೊತ್ತಿರಲಿಲ್ಲ. ಇಲ್ಲಿನ ಕಲಾ ವೈವಿಧ್ಯವನ್ನು ನೋಡಿದ ಬಳಿಕ ಕರಕುಶಲ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳುವ ಮನಸ್ಸಾಗಿ ಕೆನರಾ ಬ್ಯಾಂಕಿನಿಂದ ನಡೆಸಲ್ಪಡುವ ಕರಕುಶಲ ಶಾಲೆಯಲ್ಲಿ ಅಭ್ಯಾಸಕ್ಕೆಂದು ಸೇರಿಕೊಂಡರು. ಒಂದೂವರೆ ವರ್ಷದ ಶಿಕ್ಷಣದಲ್ಲಿ ಅವರು ಕಲಾಕೃತಿ ರಚನೆಯ ಬಗ್ಗೆ ತಿಳಿದುಕೊಂಡು ಆ ಕ್ಷೇತ್ರದಲ್ಲೇ ಜೀವನ ಸಾಗಿಸುವ ಯೋಚನೆ ಮಾಡಿದರು. ಅವರ ಸತತ ಪರಿಶ್ರಮದ ಫಲವಾಗಿ ಇದೀಗ ಸುಂದರ ಮೂರ್ತಿಗಳನ್ನು ರಚಿಸಿ ಮಾರಾಟ ಮಾಡುತ್ತಿದ್ದಾರೆ.

ಕೈಯಲ್ಲೇ ಕಲಾಕುಸುರಿ
ಹಿಮಾಂಶು ಅವರು ಶಿವ, ಗಣಪತಿ, ಋಷಿ ಮುನಿಗಳು, ನಾಗನ ಮೂರ್ತಿ ಸಹಿತ ಸುಮಾರು 500ಕ್ಕೂ ಹೆಚ್ಚು ಶಿಲಾಮೂರ್ತಿಗಳನ್ನು ರಚಿಸಿದ್ದಾರೆ. ‘ಯಾವುದೇ ಅಲಂಕಾರಿಕ ಉಪಕರಣ, ವಸ್ತುಗಳನ್ನು ಬಳಸದೆ, ನೈಸರ್ಗಿಕವಾಗಿ ಸಿಗುವ ಕಲ್ಲಿನಿಂದಲೇ ಮೂರ್ತಿ ಕೆತ್ತನೆ ಮಾಡುತ್ತೇನೆ. ನಗರದ ವಿವಿಧ ದೇವಸ್ಥಾನಗಳು ಸೇರಿದಂತೆ ಹಲವು ಕಡೆಯಿಂದ ಈ ಮೂರ್ತಿಗಳಿಗೆ ಬೇಡಿಕೆಯಿದೆ’ ಎನ್ನುತ್ತಾರೆ ಹಿಮಾಂಶು.

ಕನ್ನಡ, ತುಳು ಬಲ್ಲರು
ಬಿಹಾರ ಮೂಲದ ಪಟ್ನಾದವರಾದ ಹಿಮಾಂಶು ಮಂಗಳೂರಿಗೆ ಬಂದು ಕನ್ನಡ ಮತ್ತು ತುಳು ಕಲಿತಿರುವುದಲ್ಲದೇ, ತುಳುವಿನಲ್ಲಿ ಸಲೀಸಾಗಿ ಮಾತನಾಡುತ್ತಾರೆ. ಜ. 3ರ ವರೆಗೆ ವುಡ್‌ಲ್ಯಾಂಡ್ಸ್‌ ಹೊಟೇಲ್‌ ಸಭಾಂಗಣದಲ್ಲಿ ಈ ಪ್ರದರ್ಶನ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next